ದಾಖಲೆ ಒದಗಿಸಲು ಜ. 10ರವರೆಗೆ ಸಮಯ

ಶಿವಮೊಗ್ಗ: ರೈತರ ಸಾಲ ಮನ್ನಾ ಯೋಜನೆಗೆ ದಾಖಲೆಗಳನ್ನು ಸಲ್ಲಿಸಲು ಜ. 10ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ತಿಳಿಸಿದ್ದಾರೆ.

ಈ ಮೊದಲು ಡಿ. 31ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಇದುವರೆಗೆ ಶೇ.100 ರೈತರು ದಾಖಲೆ ನೀಡದಿರುವ ಕಾರಣ ಇನ್ನೂ 10 ದಿನ ಅವಕಾಶ ನೀಡಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯಾವುದೇ ಗೊಂದಲವಿಲ್ಲದೆ ಬ್ಯಾಂಕ್ ಶಾಖೆಗೆ ದಿನಕ್ಕೆ ಕನಿಷ್ಠ 40 ರೈತರು ದಾಖಲೆ ಸಲ್ಲಿಸಬಹುದು. ಹೆಚ್ಚುವರಿಯಾಗಿ ಆಗಮಿಸುವ ರೈತರಿಗೆ ಟೋಕನ್ ನೀಡಿ ನಿಗದಿತ ದಿನಾಂಕದಂದು ಬರಲು ಬ್ಯಾಂಕ್ ಸಿಬ್ಬಂದಿ ತಿಳಿಸುತ್ತಾರೆ. ಹೀಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಸಹಕಾರ ಸಂಘಗಳಲ್ಲಿ ಪಡೆದಿರುವ ಸಾಲ ಮನ್ನಾಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಒಂದು ವೇಳೆ ಸಹಕಾರಿ ಸಂಘಗಳಲ್ಲಿ ಸಾಲ ಮನ್ನಾ ಸೌಲಭ್ಯ ಪಡೆದ ರೈತರು ವಾಣಿಜ್ಯ ಬ್ಯಾಂಕ್​ಗಳಲ್ಲೂ ಕೃಷಿ ಸಾಲ ಪಡೆದಿದ್ದರೆ ಅವರಿಗೆ ಮತ್ತೊಮ್ಮೆ ಸಾಲ ಮನ್ನಾ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಾಲೋಮನ್ ಮೆನೇಜಸ್ ಸುದ್ದಿಗೋಷ್ಠಿಯಲ್ಲಿದ್ದರು.