Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ದಾಖಲೆಗಳ ಸರದಾರ ಮೂರು ದ್ವಿಶತಕ ವೀರ

Sunday, 17.12.2017, 3:04 AM       No Comments

| ಉಮೇಶ್​ಕುಮಾರ್ ಶಿಮ್ಲಡ್ಕ

ಕಳೆದ ಬುಧವಾರ ಮೊಹಾಲಿಯಲ್ಲಿ ಲಂಕಾ ವಿರುದ್ಧದ ಪಂದ್ಯದಲ್ಲಿ ದ್ವಿಶತಕದ ವಿಶ್ವದಾಖಲೆ ಮೂಲಕ ಜಗತ್ತಿನ ಗಮನಸೆಳೆದವರು ಕ್ರಿಕೆಟಿಗ ರೋಹಿತ್ ಶರ್ಮ. ಶ್ರೀಲಂಕಾ ತಂಡದ ವಿರುದ್ಧದ ಏಕದಿನ ಸರಣಿಯಲ್ಲಿನ ಎರಡನೇ ಪಂದ್ಯದ ಅವರ ದ್ವಿಶತಕದ ಆಟ ಆ ದಾಖಲೆಗಷ್ಟೇ ಸೀಮಿತವಲ್ಲ. ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಭಾರತ ತಂಡಕ್ಕೆ ನಾಯಕನ ಆಟ ತೋರಿ, ಉಳಿದ ಆಟಗಾರರನ್ನು ಹುರಿದುಂಬಿಸಿದ ಪರಿ ಕೂಡ ಗಮನಾರ್ಹ. ಬಾಯಿಮಾತಲ್ಲಿ ಹುರಿದುಂಬಿಸುವುದಕ್ಕೂ, ಆಡುತ್ತ ಮಾರ್ಗದರ್ಶನ ಮಾಡುವುದಕ್ಕೂ ಬಹಳ ವ್ಯತ್ಯಾಸ ಇದೆ ಎಂಬುದನ್ನು ಅವರ ಆಟ ತೋರಿಸಿಕೊಟ್ಟಿದೆ.

ಈ ಗೆಲುವಿನ ಬಳಿಕ, ‘ದ್ವಿಶತಕ ಬಾರಿಸುವುದಕ್ಕೆ ಯಾವುದೇ ಸಿದ್ಧ ಸೂತ್ರಗಳಿಲ್ಲ. ಪಿಚ್ ಚೆನ್ನಾಗಿದ್ದು, ಬ್ಯಾಟಿಂಗ್​ಗೆ ಅನುಕೂಲಕರವಾಗಿತ್ತು. ನನ್ನ ಮೂರೂ ದ್ವಿಶತಕಗಳನ್ನು ಗಮನಿಸಿದರೆ, ಆರಂಭ ಬಹಳ ನಿಧಾನವಾಗಿತ್ತು. ನಂತರ ರನ್ ಗಳಿಕೆ ವೇಗವರ್ಧನೆ ಕಂಡು, ಆಕ್ರಮಣಕಾರಿ ಆಟವಾಗಿ ಪರಿವರ್ತನೆಯಾಗಿದೆ’ ಎಂದು ಶರ್ಮಾ ಹೇಳಿದ್ದರು.

ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸುವುದಕ್ಕೂ ಏಕದಿನ ಪಂದ್ಯದಲ್ಲಿ ದಾಖಲಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಲು ಟಿ-20 ಮಾದರಿಯ ಹೊಡೆಬಡಿ ಆಟ ಅನಿವಾರ್ಯ.

ರೋಹಿತ್ ಶರ್ಮಾ 2007ರ ಫ್ಯೂಚರ್ ಕಪ್​ನ ಮೂಲಕ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಅಂದು ರಾಹುಲ್ ದ್ರಾವಿಡ್ ಭಾರತ ತಂಡದ ಕಪ್ತಾನನಾಗಿದ್ದರು. ಐರ್​ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಎರಡನೇ ಪಂದ್ಯ ದಕ್ಷಿಣಾ ಆಫ್ರಿಕಾದ ಎದುರಿತ್ತು. ಅದರಲ್ಲಿ ಕೇವಲ 8 ರನ್ ಗಳಿಸಿದ್ದರಷ್ಟೆ. ಅಲ್ಲಿಂದೀಚೆಗಿನ 10 ವರ್ಷದ ಕ್ರೀಡಾ ಬದುಕು ಗಮನಿಸಿದರೆ ಆರಂಭ ನಿಧಾನವಾಗಿಯೇ ಆಗಿದೆ. 2013ರಿಂದೀಚೆಗೆ ಏಕದಿನ ಪಂದ್ಯಗಳನ್ನು ಆಡುವುದಕ್ಕೆ ಅವರದ್ದೇ ಆದ ಚೌಕಟ್ಟು ನಿರ್ವಣವಾಗಿದೆ. ನಿಧಾನವಾಗಿ ಆಟ ಆರಂಭಿಸಿ, ಆಟದಲ್ಲೊಂದು ಸ್ಥಿರತೆ ಕಂಡುಕೊಳ್ಳುತ್ತ ಮಧ್ಯದ ಓವರ್​ಗಳಲ್ಲಿ ರನ್​ಗಳಿಕೆ ವೇಗ ಹೆಚ್ಚಿಸುತ್ತ ಸಾಗಿ, ಕೊನೆಯ ಹತ್ತು ಓವರ್​ಗಳಲ್ಲಿ ಆಕ್ರಮಣಕಾರಿ ಆಟ ಆಡುವುದು ಅವರ ವಿಶೇಷತೆ. ಇದೊಂದು ಸರಳ ಸೂತ್ರದಂತೆ ಭಾಸವಾದರೂ, ಶರ್ವರಂತೆ ಅದರ ಅನುಷ್ಠಾನಗೊಳಿಸುವುದು ಬೇರಾರಿಂದಲೂ ಸಾಧ್ಯವಾಗಿಲ್ಲ. ಆಕ್ರಮಣಕಾರಿ ಆಟಗಾರರು ಜತೆಗಿರುವ ಕಾರಣ, ಅವರಿಗೆ ಇಂಥ ಆಟವನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ. ಒಟ್ಟಾರೆ, ಶತಕದ ಇನ್ನಿಂಗ್ಸ್ ಗಮನಿಸಿದರೆ ಅವರ ಆಟದಲ್ಲಿ ಬೌಂಡರಿ, ಸಿಕ್ಸರ್​ಗಳು ಹೆಚ್ಚಾಗಿರುತ್ತವೆ. ಒಂದು, ಎರಡು ರನ್​ಗಳ ಸಂಖ್ಯೆ ಕಡಿಮೆ. ಸ್ಟ್ರೈಕಿಂಗ್ ರೇಟ್ ಕೂಡ 100ರ ಮೇಲೇ ಇರುತ್ತದೆ.

ಮೊಹಾಲಿಯ ಆಟವನ್ನೇ ವಿಶ್ಲೇಷಿಸುವುದಾದರೆ, ಮೊದಲ 116 ರನ್ 126 ಬಾಲ್​ಗಳನ್ನು ಎದುರಿಸಿ ಗಳಿಸಿದ್ದು. ಕೊನೆಯ 27 ಬಾಲ್​ಗಳಲ್ಲಿ 11 ಸಿಕ್ಸ್, ಮೂರು ಫೋರ್ ಬಾರಿಸಿ 92 ರನ್ ಕಸಿದುಕೊಂಡು ಒಟ್ಟು 153 ಬಾಲ್​ಗಳಲ್ಲಿ 208 ರನ್ ದಾಖಲಿಸಿದ್ದರು. ಇನ್ನು ಅವರ ಕ್ರೀಡಾ ಬದುಕಿನ 16 ಶತಕಗಳನ್ನು ಗಮನಿಸಿದರೆ 50 ರನ್​ಗಳಾಗುವ ತನಕ ಸ್ಟ್ರೈಕ್ ರೇಟ್ 80ರ ಆಸುಪಾಸಿನಲ್ಲಿರುತ್ತದೆ. 50-100 ರನ್ ಗಳಿಕೆ ವೇಳೆಗೆ ಅದು 94ರ ಆಸುಪಾಸಿರುತ್ತದೆ. 100ರನ್ ಮೇಲ್ಪಟ್ಟು ರನ್ ಗಳಿಸಿದಾಗ ಸ್ಟ್ರೈಕ್ ರೇಟ್ 184 ರಷ್ಟು ದಾಖಲಾಗಿದೆ.

ಏಕದಿನ ಪಂದ್ಯಗಳಲ್ಲಿ ದ್ವಿಶತಕ ಸಾಧಿಸಿದವರ ಪಟ್ಟಿಯಲ್ಲಿ ಏಳು ಆಟಗಾರರ ಹೆಸರಿದೆ. ಅದರಲ್ಲಿ ಮೂರು ದ್ವಿಶತಕ ರೋಹಿತ್ ಶರ್ಮಾ ಅವರದು. ಮೊಟ್ಟ ಮೊದಲ ಬಾರಿಗೆ ಟೆಸ್ಟ್ ಪಂದ್ಯದ ಹೊರತಾಗಿ ಸೀಮಿತ ಓವರ್​ಗಳ ಏಕದಿನ ಪಂದ್ಯದಲ್ಲೂ ದ್ವಿಶತಕ ಬಾರಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ಸಚಿನ್ ತೆಂಡುಲ್ಕರ್. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗ್ವಾಲಿಯರ್​ನಲ್ಲಿ ಅಜೇಯ 200 ರನ್ ದಾಖಲಿಸಿ ಮೇಲ್ಪಂಕ್ತಿ ಹಾಕಿಕೊಟ್ಟರು. ನಂತರ, ವೀರೇಂದ್ರ ಸೆಹ್ವಾಗ್ (219), ಮಾರ್ಟಿನ್ ಗುಪ್ಟಿಲ್ (237), ಕ್ರಿಸ್ ಗೇಲ್ (215) ಕೂಡ ದಾಖಲೆ ಬರೆದರು.

ಹೀಗಿದ್ದರೂ, ವಿರಾಟ್ ಕೊಹ್ಲಿ ಆಕ್ರಮಣಕಾರಿ ಹಾಗೂ ಸ್ಥಿರ ಆಟದ ಮುಂದೆ ಶರ್ಮಾ ಆಟ ಸಪ್ಪೆ ಎನಿಸಿಬಿಡಬಹುದು. ಇಬ್ಬರೂ ಹೆಚ್ಚೂ ಕಡಿಮೆ ಸಮಕಾಲೀನರು. ಅಂಡರ್ 19 ವಿಶ್ವಕಪ್ ಪಂದ್ಯದಲ್ಲಿ ಉತ್ತಮ ಸಾಧನೆ ತೋರಿದ್ದ ಶರ್ವ, ‘ಭವಿಷ್ಯದ ತೆಂಡುಲ್ಕರ್’ ಎಂದೇ ಬಿಂಬಿಸಲ್ಪಟ್ಟವರು. ಅವರು 2007ರಲ್ಲಿ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರೆ, ಕೊಹ್ಲಿ 2008ರಲ್ಲಿ ಕಣಕ್ಕಿಳಿದರು. ಶರ್ಮಾ ಆರಂಭಿಕ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿದರೆ, ಮೊದಲ 10 ಅಥವ 20 ಓವರ್ ಕಳೆದ ಬಳಿಕ ಕೊಹ್ಲಿ ಕಣಕ್ಕಿಳಿಯುತ್ತಾರೆ. ಈ ಇಬ್ಬರೂ ಬ್ಯಾಟ್ಸ್​ಮನ್​ಗಳ ಎರಡು ಹಂತಗಳಲ್ಲಿ – 2012ರ ತನಕ ಮತ್ತು 2013ರಿಂದೀಚೆಗಿನ ಎಂದು ವಿಶ್ಲೇಷಿಸಬಹುದು. 2012ರ ತನಕ ಶರ್ಮಾ 86 ಪಂದ್ಯಗಳಲ್ಲಿ 1978 ರನ್​ಗಳಿಸಿ(2 ಶತಕ, 11 ಅರ್ಧ ಶತಕ) 29.73 ಸ್ಟ್ರೈಕ್ ರೇಟ್ ಹೊಂದಿದ್ದರೆ, ಕೊಹ್ಲಿ 91 ಪಂದ್ಯಗಳಲ್ಲಿ 3886 ರನ್(13 ಶತಕ, 21 ಅರ್ಧ ಶತಕ)ಗಳಿಸಿ 49.87 ಸ್ಟ್ರೈಕ್ ರೇಟ್ ಹೊಂದಿದ್ದರು. 2013ರಿಂದೀಚೆಗೆ ಶರ್ಮಾ ಸ್ಟ್ರೈಕ್ ರೇಟ್ ಸರಾಸರಿ 58.75 ಇದ್ದರೆ, ಕೊಹ್ಲಿ 63.44 ಸರಾಸರಿ ಕಾಪಾಡಿಕೊಂಡಿದ್ದಾರೆ. ಈ ವರ್ಷ ಕೊಹ್ಲಿ 26 ಪಂದ್ಯಗಳಲ್ಲಿ 1460 ರನ್​ಗಳೊಂದಿಗೆ 76.84 ಸ್ಟ್ರೈಕ್ ರೇಟ್ ಹೊಂದಿದ್ದರೆ, ಶರ್ಮಾ 20 ಏಕದಿನ ಪಂದ್ಯಗಳಲ್ಲಿ 1286 ರನ್ ಗಳಿಸಿ 75.64 ಸ್ಟ್ರೈಕ್ ರೇಟ್ ಕಾಪಾಡಿಕೊಂಡು ತೀವ್ರ ಸ್ಪರ್ಧೆ ನೀಡಿದ್ದಾರೆ. ಉತ್ತಮ ಫಾರ್ಮನ್ನೂ ಕಾಪಾಡಿಕೊಂಡಿರುವ ಶರ್ವ, ಐಪಿಎಲ್​ನಲ್ಲಿ ನಾಯಕತ್ವ ಸಾಮರ್ಥ್ಯವನ್ನೂ ಸಾಬೀತು ಮಾಡಿದ್ದು ಮುಂಬೈ ಇಂಡಿಯನ್ ತಂಡ ಚಾಂಪಿಯನ್ ಆಗುವಂತೆ ನೋಡಿಕೊಂಡಿದ್ದರು. ಇನ್ನು ಅವರ ಮುಂದಿರುವುದು ಟೆಸ್ಟ್ ಕ್ರಿಕೆಟ್​ನಲ್ಲಿ ಸಾಮರ್ಥ್ಯ, ಕೌಶಲವನ್ನು ವೃದ್ಧಿಸಿಕೊಂಡು ಸಾಧನೆ ತೋರುವುದು.

ಮಹಾರಾಷ್ಟ್ರದ ನಾಗಪುರದ ಬಾಣಸೋದ್​ನಲ್ಲಿ 1987ರ ಏ.30ರಂದು ರೋಹಿತ್ ಜನನ. ತಂದೆ ಗುರುನಾಥ್ ಶರ್ವ, ತಾಯಿ ಪೂರ್ಣಿಮಾ. ತಮ್ಮ ವಿಶಾಲ್. ಬಡತನ ಬೇಗೆಯಲ್ಲಿ ಮಿಂದೆದ್ದು ಬಂದವರು. 1999ರಲ್ಲಿ ಕ್ರಿಕೆಟ್ ಕ್ಯಾಂಪ್ ಸೇರಿ, ಹಂತ ಹಂತವಾಗಿ ಬೆಳೆಯುತ್ತ ಸಾಧನೆ ತೋರಿದವರು. 2015ರ ಡಿ.13ರಂದು ಬಾಲ್ಯದ ಗೆಳತಿ ರಿತಿಕಾ ಸಜ್​ದೇಹ್​ರನ್ನು ವಿವಾಹವಾದರು. ಏಕದಿನ ಮತ್ತು ಟಿ 20 ಪ್ರಕಾರಗಳಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಶರ್ಮಾ ಎದುರು ಈಗ ಇನ್ನಷ್ಟು ಅವಕಾಶಗಳು ತೆರೆದುಕೊಳ್ಳತೊಡಗಿವೆ.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿಸಂಪಾದಕರು)

[ಪ್ರತಿಕ್ರಿಯಿಸಿ: [email protected], [email protected]]

Leave a Reply

Your email address will not be published. Required fields are marked *

Back To Top