ಚಿತ್ರದುರ್ಗ: ಕೃಷಿ ಅಧಿಕಾರಿ ಆಶಾರಾಣಿ ಅವರ ಮೇಲೆ ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗೆ ಒತ್ತಾಯಿಸಿ ಕೃಷಿ ಇಲಾಖೆ ಅಧಿಕಾರಿಗಳು ಗುರುವಾರ ಮನವಿ ಸಲ್ಲಿಸಿದರು.
ಆಶಾರಾಣಿ ಈವರೆಗೂ ರೈತರಿಂದ ಯಾವ ದೂರು ಬರದ ರೀತಿಯಲ್ಲಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಯಾವುದೇ ನಿರ್ಲಕ್ಷೆೃ ತೋರಿಲ್ಲ. ಆದರೂ ಪೂರ್ವಾಪರ ಪರಿಶೀಲಿಸದೆ, ಠಾಣಾಧಿಕಾರಿ ಕೃಷಿ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಸರಿಯಲ್ಲ ಎಂದರು.
ಮಾರ್ಗಸೂಚಿ ಅನ್ವಯ ಸರಬರಾಜು ಸಂಸ್ಥೆಗಳಿಂದ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನುಕರಿಸಿ, ದಾಖಲಾತಿಗಳನ್ನು ಪರಿಶೀಲಿಸಿ, ಕೆ-ಕಿಸಾನ್ ಎಂಐಎಸ್ ತಂತ್ರಾಂಶದ ಮೂಲಕ ರೈತರಿಗೆ ವಿತರಿಸಲಾಗುತ್ತಿದೆ. ಆದರೂ ರೈತ ಸಂಪರ್ಕ ಕೇಂದ್ರಕ್ಕೆ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿ ಮೇಲೆ ಕ್ರಮವಹಿಸದೆ, ಅಧಿಕಾರಿ ವಿರುದ್ಧ ದೂರು ದಾಖಲಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಚಿತ್ರದುರ್ಗ ತಾಲೂಕಿನ ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ಅ. 8ರಂದು ಕಡಲೆ ಬಿತ್ತನೆ ಬೀಜಗಳನ್ನು ವಿತರಿಸುವ ವೇಳೆ ರಾಘವೇಂದ್ರ ಎಂಬುವವರು ಮದ್ಯ ಸೇವಿಸಿ, ಕಚೇರಿಯೊಳಗೆ ದೌರ್ಜನ್ಯದಿಂದ ಪ್ರವೇಶಿಸಿದ್ದಾರೆ. ತಡೆಯಲು ಹೋದ ಅಧಿಕಾರಿಗಳಿಗೆ ಇದು ರೈತರಿಗಾಗಿ ಇರುವ ಕಚೇರಿ ಎಂದು ವಾಗ್ವಾದ ನಡೆಸಿದ್ದಲ್ಲದೆ, ಕಡಲೆ ಚೀಲ ಎಳೆದಾಡಿ, ಹೊರನಡೆದಿದ್ದರು. 60 ದಿನದ ಬಳಿಕ ಹಣಕ್ಕಾಗಿ ಒತ್ತಾಯಿಸಿದ್ದರು. ಇದಕ್ಕೆ ಒಪ್ಪದ ಕಾರಣ ದೂರು ದಾಖಲಿಸಿದ್ದಾರೆ. ಆದರೆ, ಕೃಷಿ ಅಧಿಕಾರಿಯ ಪ್ರತಿದೂರನ್ನು ಠಾಣೆಯಲ್ಲಿ ಸ್ವೀಕರಿಸಿಲ್ಲ ಎಂದು ದೂರಿದರು.
ಸತ್ಯಾಸತ್ಯತೆ ಪರಿಶೀಲಿಸಿ, ಕೂಡಲೇ ಕೃಷಿ ಅಧಿಕಾರಿ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಕೋರಿದರು. ಜಂಟಿ ನಿರ್ದೇಶಕ ಮಂಜುನಾಥ್, ವಿಕಾಸ್, ವೇಣುಗೋಪಾಲ್, ಧನರಾಜ್, ಉಮೇಶ್, ವೆಂಕಟೇಶ್, ಗಿರೀಶ್, ಪಾರ್ವತಮ್ಮ, ಆಶಾರಾಣಿ, ಪವಿತ್ರಾ, ಕಿರಣ್‌ಕುಮಾರ್ ಇತರರಿದ್ದರು.