ಹುಣಸೂರು: ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತಿದ್ದ ದಸರಾ ಗಜಪಡೆಯ ಆನೆಗಳಲ್ಲಿ ಒಂದಾದ ಬಲರಾಮನ ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯರ ತಂಡ ತೀವ್ರ ನಿಗಾ ವಹಿಸಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಭೀಮನಕಟ್ಟೆ ಸಾಕಾನೆ ಶಿಬಿರದಲ್ಲಿ ಬಲರಾಮನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆನೆ ನಿತ್ರಾಣಗೊಂಡಿದ್ದು, ದ್ರವಾಹಾರವನ್ನು ಮಾತ್ರ ನೀಡಲಾಗುತ್ತಿದೆ. ವೈದ್ಯರಾದ ಡಾ.ರಮೇಶ್, ಡಾ.ಮದನ್, ಡಾ.ಚೆಟ್ಟಿಯಪ್ಪ, ಡಾ.ಯಶಸ್ ಮತ್ತು ಡಾ.ಅಬ್ದುಲ್ಲ ಅವರನ್ನು ಒಳಗೊಂಡ ತಂಡ ಚಿಕಿತ್ಸೆ ಮುಂದುವರಿಸಿದ್ದಾರೆ. ಬಲರಾಮ ಆನೆ ಕ್ಷಯರೋಗದಿಂದ ಬಳಲುತ್ತಿರುವುದು ಖಚಿತವಾಗಿದೆ. ಅನ್ನಾಹಾರವನ್ನು ಸೇವಿಸದಿರುವುದರಿಂದ ಎಂಡೋಸ್ಕೋಪಿ ಪರೀಕ್ಷೆ ನಡೆಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಆರ್‌ಎಫ್‌ಒ ರತನ್‌ಕುಮಾರ್, ಡಿಆರ್‌ಎಫ್‌ಒ ಸಿದ್ದರಾಜು ಹಾಗೂ ಸಿಬ್ಬಂದಿ ಹಾಜರಿದ್ದು, ನಿಗಾ ವಹಿಸಿದ್ದಾರೆ.
ದಸರಾ ಬಲರಾಮ ಆನೆಗೆ ಅನಾರೋಗ್ಯ
ದಸರಾ ಆನೆ ಬಲರಾಮನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು.