ದಸರಾಕ್ಕೆ 18 ಕೋಟಿ ರೂ. ಬಿಡುಗಡೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 20 ಕೋಟಿ ರೂ. ನೀಡಲು ನಿರ್ಧರಿಸಿದ್ದು, ಈಗಾಗಲೇ 18 ಕೋಟಿ ರೂ. ಬಿಡುಗಡೆ ಆಗಿದೆ ಎಂದು ಸಚಿವ ಆರ್.ಅಶೋಕ್ ಹೇಳಿದರು.

ಗಜಪಯಣದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ನೆರೆ ಹಾವಳಿಯಿಂದ ದೇವತಾ ಕಾರ್ಯ ನಿಲ್ಲಬಾರದು ಮತ್ತು ಈ ಕಾರ್ಯಗಳಿಂದ ನಾಡಿಗೆ ಮತ್ತು ನೆರೆಪೀಡಿತರಿಗೆ ಒಳ್ಳೆಯದಾಗಲಿ ಎಂಬುದು ಯಡಿಯೂರಪ್ಪ ಅವರ ಆಶಯವಾಗಿದೆ. ಈ ಭಾಗದ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಹಾಗೂ ಎಲ್ಲರ ಸಹಕಾರದಿಂದ ದಸರಾ ಸುವ್ಯವಸ್ಥಿತವಾಗಿ ನಡೆಯಲಿದೆ ಎಂದರು.

ಅಧಿಕಾರಿಗಳಿಗೆ ಎಚ್ಚರಿಕೆ:
ನೆರೆ ಹಾವಳಿಯಿಂದ ಸಾವಿರಾರು ಜನರು ಮನೆ, ಗೃಹೋಪಯೋಗಿ ವಸ್ತುಗಳು, ಬೆಳೆ ಎಲ್ಲವನ್ನು ಕಳೆದುಕೊಂಡು ಸಂಕಷ್ಟದಲ್ಲಿ ಇದ್ದಾರೆ. ಸಂತ್ರಸ್ತರಿಗೆ ಸರ್ಕಾರ ಪರಿಹಾರದ ಮೊತ್ತವನ್ನು ಈಗಾಗಲೇ ಘೋಷಣೆ ಮಾಡಿದೆ. ಅಧಿಕಾರಿಗಳು ಅದನ್ನು ಸೂಕ್ತ ರೀತಿಯಲ್ಲಿ ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡಬೇಕು. ಸತಾಯಿಸುವುದು, ಹಣಕ್ಕೆ ಪೀಡಿಸುವುದು ತಿಳಿದು ಬಂದಲ್ಲಿ ಅಂತಹವರು ಆ ಜಾಗದಲ್ಲಿ ಇರಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಗಜಪಯಣಕ್ಕೆ ವಿಧ್ಯುಕ್ತ ಚಾಲನೆ ದೊರೆತಿದೆ. ಅಕ್ಟೋಬರ್ 8ರ ವಿಜಯದಶಮಿವರೆಗೆ ಎಲ್ಲ ಕಾರ್ಯಕ್ರಮಗಳು ಯಾವುದೇ ವಿಘ್ನಗಳಿಲ್ಲದೆ ನಡೆಯಲಿವೆ ಎಂದರು.

ವೇದಿಕೆಯಲ್ಲಿ ಮಾವುತ ಮತ್ತು ಕಾವಾಡಿಗಳನ್ನು ಸನ್ಮಾನಿಸಲಾಯಿತು. ಸಚಿವ ವಿ.ಸೋಮಣ್ಣ, ಶಾಸಕರಾದ ಎಲ್.ನಾಗೇಂದ್ರ, ನಿರಂಜನಕುಮಾರ್, ಕೃಷ್ಣಪ್ಪ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಮೇಯರ್ ಪುಷ್ಪಲತಾ ಜಗನ್ನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಮಲ್ಲಿಕಾರ್ಜುನಪ್ಪ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಪಂ ಸಿಇಒ ಕೆ.ಜ್ಯೋತಿ, ಎಸ್ಪಿ ರಿಷ್ಯಂತ್ ಕುಮಾರ್, ಜಿಪಂ ಸದಸ್ಯ ಕಟ್ಟನಾಯಕ ಇದ್ದರು.

Leave a Reply

Your email address will not be published. Required fields are marked *