ದಶಕ ಕಳೆದರೂ ಸಿಗದ ನೀರು

ಹುಬ್ಬಳ್ಳಿ: ಅಣ್ಣಿಗೇರಿ ಜನತೆಯ ಕುಡಿಯುವ ನೀರಿನ ದಾಹ ತಣಿಸಲು ಮಂಜೂರಾದ ಶಾಶ್ವತ ಯೋಜನೆ ಕುಂಟುತ್ತ ಸಾಗಿದ್ದು, ದಶಕ ಕಳೆದರೂ ಪೂರ್ತಿಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಪರಿಣಾಮವಾಗಿ ಪಟ್ಟಣದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ.
ಅಣ್ಣಿಗೇರಿಯಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಇದ್ದಿದ್ದೇ. ಹಲವು ವರ್ಷಗಳ ಪ್ರಯತ್ನದ ಫಲವಾಗಿ ಸರ್ಕಾರ ಯೋಜನೆ ಮಂಜೂರು ಮಾಡಿದ್ದಷ್ಟೇ ಬಂತು, ನಂತರದಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆ ಅರ್ಥೈಸಿಕೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ನೂತನ ಕೆರೆ ನಿರ್ಮಾಣ ಕಾಮಗಾರಿಗೆ ಹಿನ್ನಡೆಯಾಗಿದೆ.
ಸದ್ಯ ಪುರಸಭೆಯವರು ಕೊಳವೆ ಬಾವಿ, ಬಾವಿ ಹಾಗೂ ಮಲಪ್ರಭಾ ನದಿ ನೀರು ಸೇರಿ ಎಲ್ಲವನ್ನೂ ಕಲಬೆರಕೆ ಮಾಡಿ 15 ದಿನಕ್ಕೊಮ್ಮೆ ಪೂರೈಸುತ್ತಿದ್ದು, ಅಂತಹ ನೀರು ಕುಡಿದು ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೆಚ್ಚು ಜನ ಇರುವ ಕುಟುಂಬದಲ್ಲಿ 15 ದಿನಗಟ್ಟಲೇ ನೀರು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೇ ಪರದಾಡುವಂತಾಗಿದೆ.
ವಾಹನ ಉಳ್ಳವರು ನವಲಗುಂದ ಚನ್ನಮ್ಮನ ಕೆರೆಯಿಂದ ನೀರು ತರುತ್ತಾರೆ. ಇಲ್ಲದವರು ಸಮೀಪದಲ್ಲಿ ಸಿಹಿ ನೀರಿನ ಬೋರ್​ವೆಲ್​ನಿಂದ ಮಾಲೀಕರಿಗೆ ಹಣ ಕೊಟ್ಟು ನೀರು ತರುತ್ತಿದ್ದಾರೆ!
ಮಿಡಿದ ಶಾಸಕರು: ಪಟ್ಟಣದ ನೀರಿನ ಸಮಸ್ಯೆಯ ವಸ್ತುಸ್ಥಿತಿ ಅರಿತಿದ್ದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, 2009ರಲ್ಲಿ ಮೊದಲ ಸಲ ನವಲಗುಂದ ಶಾಸಕರಾಗಿದ್ದಾಗಲೇ ಸರ್ಕಾರದ ಗಮನ ಸೆಳೆದು ಶಾಶ್ವತ ಕುಡಿಯುವ ನೀರಿನ ಯೋಜನೆಗೆ 46.36 ಕೋಟಿ ರೂ. ಅನುದಾನ ದೊರಕಿಸಿದರು. ಕಾಮಗಾರಿಯನ್ನೂ ಆರಂಭಿಸಲಾಗಿತ್ತು. ಆದರೆ, ಮುನೇನಕೊಪ್ಪ 2013ರಲ್ಲಿ ಆಯ್ಕೆ ಯಾಗಲಿಲ್ಲ. ಆಗ ಕಾಮಗಾರಿಯೂ ವೇಗ ಕಳೆದುಕೊಂಡಿತು. ಇದೀಗ ಮತ್ತೆ ಅವರೇ ಶಾಸಕರಾಗಿದ್ದು, ಕೆರೆ ಕಾಮಗಾರಿ ಒಂದು ದಡ ಸೇರುವ ಆಶಯ ಜನರಲ್ಲಿ ಮೂಡಿದೆ.
ಜಿಲ್ಲಾಡಳಿತ ನಿರ್ಲಕ್ಷ್ಯ: ದಶಕದ ಹಿಂದೆ ಪ್ರಾರಂಭವಾದ ಅಣ್ಣಿಗೇರಿ ನೂತನ ಕೆರೆ ಕಾಮಗಾರಿ ಈಗಲೂ ನಿರೀಕ್ಷಿತ ಪ್ರಗತಿ ಕಾಣದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ಇದುವರೆಗೆ ಜಿಲ್ಲಾಧಿಕಾರಿಯಾದವರು ಕೆರೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿಲ್ಲ. ವರ್ಷಗಳಿಂದ ಕೆರೆ ಕಾಮಗಾರಿ ಸ್ಥಗಿತಗೊಂಡಿರುವುದೇಕೆ? ಎಂದು ಕೇಳಿದರೆ, ಸರ್ಕಾರ ದಿಂದ ಅನುಮೋದನೆ ದೊರಕುವಲ್ಲಿ ವಿಳಂಬ ವಾಗಿದೆ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.
ಬಸಾಪುರ ರೈತರ ತ್ಯಾಗ: ಅಣ್ಣಿಗೇರಿ ತಾಲೂಕಿನ ಬಸಾಪುರ ಹದ್ದಿನಲ್ಲಿರುವ 76 ಎಕರೆ ಜಮೀನನ್ನು ರೈತರು ಸರ್ಕಾರಕ್ಕೆ ಬಿಟ್ಟುಕೊಟ್ಟು ಮಹದುಪಕಾರ ಮಾಡಿದ್ದಾರೆ. ಅವರ ತ್ಯಾಗ ಹಾಗೂ ಶಾಸಕ ಮುನೇನಕೊಪ್ಪ ಅವರ ಪರಿಶ್ರಮದ ಫಲವಾಗಿ ಬಹುನಿರೀಕ್ಷಿತ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿ ಆರಂಭವಾಗಿದೆ. ಆದರೆ, ಅಧಿಕಾರಿಗಳ ಅನಾದರದಿಂದ ಕೆಲಸವೇ ಮುಗಿಯುತ್ತಿಲ್ಲ. ಅಣ್ಣಿಗೇರಿಯ ನಿಯೋಜಿತ ನೂತನ ಕೆರೆಯಿಂದ ಬಸಾಪುರ ಕೆರೆಗೆ ನೀರು ಹರಿಸಲು ಯೋಜನೆ ರೂಪಿಸಲು ಜಿಲ್ಲಾಧಿಕಾರಿಯವರು ಕಾರ್ಯಪ್ರವೃತ್ತರಾಗಬೇಕಾಗಿದೆ. ಬಸಾಪುರ ಕೆರೆಗೆ ಮಳೆೆ ನೀರು ಸಂಗ್ರಹವಾಗುತ್ತಿದೆಯಾದರೂ ಅನಿಶ್ಚಿತ ಮಳೆಗಾಲದ ಸಂದರ್ಭಗಳಲ್ಲಿ ನಿಯೋಜಿತ ನೂತನ ಯೋಜನೆ ಬಸಾಪುರ ಗ್ರಾಮಸ್ಥರ ನೆರವಿಗೆ ಬರುತ್ತದೆ.
ಎರಡು ಮಹತ್ವದ ಯೋಜನೆಗಳಿಗೆ ಭೂಮಿ: ಸರ್ಕಾರದ ಎರಡು ಮಹತ್ವದ ಯೋಜನೆಗಳಾದ ಆಸರೆ ಮನೆಗಳ ನಿರ್ವಣಕ್ಕೆ 35 ಎಕರೆ, ಕುಡಿಯುವ ನೀರಿನ ಯೋಜನೆಗೆ 76 ಎಕರೆ ಭೂಮಿಯನ್ನು ಬಸಾಪುರ ರೈತರು ಉದಾರವಾಗಿ ಬಿಟ್ಟುಕೊಟ್ಟಿದ್ದಾರೆ. ನಿಯೋಜಿತ ನೂತನ ಕೆರೆಗೆ ಬಸವಾನಂದ ಶರಣರ ನಾಮಕರಣ ಮಾಡಬೇಕೆನ್ನುವುದು ಗ್ರಾಮಸ್ಥರ ಒಲವು. ಶರಣರು ಜನಿಸಿದ ಪುಣ್ಯಭೂಮಿ ಬಸಾಪುರ. ಬಸವಣ್ಣನವರ ತತ್ವ- ಸಿದ್ಧಾಂತದಂತೆ ಅವರು ಅಸ್ಪ್ರಶ್ಯತೆ ನಿವಾರಣೆ ಹಾಗೂ ಸಮಾನತೆಗಾಗಿ ಹೋರಾಡಿದ್ದರು. ಸರ್ಕಾರ ನೂತನ ಕೆರೆ ಕಾಮಗಾರಿಯನ್ನು ಬೇಗ ಮುಗಿಸಿ ಬಸವಾನಂದ ಶರಣರ ಹೆಸರನ್ನು ಇಟ್ಟು ಗೌರವಿಸಲಿ ಎಂದು ರೈತರು ಹೇಳುತ್ತಾರೆ.
“ಅಣ್ಣಿಗೇರಿಯ ಬಹುನಿರೀಕ್ಷಿತ ಮಹತ್ವಾಕಾಂಕ್ಷಿ ಶಾಶ್ವತ ಕುಡಿಯುವ ನೀರಿನ ಯೋಜನೆ ಸಕಾಲದಲ್ಲಿ ಪೂರ್ತಿಗೊಂಡು ನೀರಿನ ಸಮಸ್ಯೆಗೆ ಮುಕ್ತಿ ದೊರೆಯಬೇಕು, ಶರಣರ ಹೆಸರು ಇಡಬೇಕು. ಆಗ ಮಾತ್ರ ಬಸಾಪುರ ರೈತರು ಭೂಮಿ ತ್ಯಾಗ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ.”
|ಬಿ.ಎಸ್. ದುಂದೂರ ಬಸಾಪುರ, ತಾ. ಅಣ್ಣಿಗೇರಿ

Leave a Reply

Your email address will not be published. Required fields are marked *