ದಶಕಗಳ ನಿಗೂಢ ಕಾಯಿಲೆಗೆ ಇನ್ನೂ ಸಿಕ್ಕಿಲ್ಲ ಪರಿಹಾರ

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬ ಮಂಗನ ಕಾಯಿಲೆಗೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೆ ಐದು ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ.

ದಿನೇದಿನೆ ರೋಗ ಉಲ್ಬಣಗೊಳ್ಳುತ್ತಿದ್ದು, ಸಾರ್ವಜನಿಕರನ್ನು ಕಂಗೆಡಿಸಿದೆ. ಇದೇ ಸೋಂಕಿನಿಂದ 3 ಮಂಗ ಸಹ ಮೃತಪಟ್ಟಿದ್ದು, ಕಳೆದ ತಿಂಗಳು ಮಹಾರಾಷ್ಟ್ರದ ಸಾವಂತವಾಡಿ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಸೋಂಕಿಗೆ ಬಲಿಯಾಗಿರುವುದು ವೈರಾಣು ರಾಜ್ಯದ ಗಡಿ ದಾಟಿರುವ ಅನುಮಾನ ಮೂಡಿಸಿದೆ. ಆರಂಭದಲ್ಲಿ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನಲ್ಲಿ ಕಾಣಿಸಿಕೊಂಡಿದ್ದ ಸೋಂಕು ಚಿಕ್ಕಮಗಳೂರು, ಉಡುಪಿ, ಮಂಗಳೂರು, ಉತ್ತರ ಕನ್ನಡ, ಚಾಮರಾಜನಗರ ಜಿಲ್ಲೆಗಳಲ್ಲೂ ಪತ್ತೆಯಾಗಿರುವುದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಕೇರಳ, ತಮಿಳುನಾಡು ಗಡಿ ಭಾಗದಲ್ಲೂ ಕೆಎಫ್​ಡಿ ವೈರಸ್ ಕಾಣಿಸಿಕೊಳ್ಳುತ್ತಿದೆ.

ಕಳೆದ ವರ್ಷ ತೀರ್ಥಹಳ್ಳಿ ತಾಲೂಕಿನ ಚಿಡುವ ಭಾಗದಲ್ಲಿ ಕಾಣಿಸಿಕೊಂಡಿದ್ದ ಕೆಎಫ್​ಡಿ ಸೋಂಕು ಈಗ ಅಲ್ಲಿಗೆ ಎರಡು ಕಿಮೀ ದೂರದಲ್ಲಿ ಕಾಣಿಸಿಕೊಂಡಿದೆ. ವೈರಾಣುವಿನಿಂದ ಸಾವನ್ನಪ್ಪಿದ ಮಂಗ ಇದ್ದ ಪ್ರದೇಶದಲ್ಲಿ ಓಡಾಡಿದವರು ಸೋಂಕಿಗೆ ತುತ್ತಾಗಿದ್ದಾರೆ. ಈಗಾಗಲೇ ತೀರ್ಥಹಳ್ಳಿ ತಾಲೂಕಿನ ಆಯ್ದ ಭಾಗಗಳಲ್ಲಿ 35 ಸಾವಿರ ಮಂದಿಗೆ ಕೆಎಫ್​ಡಿ ನಿರೋಧಕ ಚುಚ್ಚುಮದ್ದು ನೀಡಲಾಗಿದೆ.

| ಡಾ.ಕಿರಣ್ ತೀರ್ಥಹಳ್ಳಿ ತಾಲೂಕು ವೈದ್ಯಾಧಿಕಾರಿ

38 ಮಂದಿ ಸಾವು

2001 ರಿಂದ 2015ರವರೆಗೆ 1,025 ಮಂಗನಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ. 4,319 ಮಂದಿಯ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದೇ ಅವಧಿಯಲ್ಲಿ 38 ಮಂದಿ ಮಂಗನ ಕಾಯಿಲೆಯಿಂದ ಅಸುನೀಗಿದ್ದಾರೆ ಎಂಬುದನ್ನು ಇಲಾಖೆಯ ಅಂಕಿ ಅಂಶಗಳೇ ಹೇಳುತ್ತಿವೆ. 2012ರಲ್ಲಿ ಕರ್ನಾಟಕದಲ್ಲೇ 100 ಕೆಎಫ್​ಡಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. 2013ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲೂ ಈ ವೈರಸ್ ಕಾಣಿಸಿಕೊಂಡಿತ್ತು. 2015ರಲ್ಲಿ ಕೇರಳದ ವೈನಾಡು ಪ್ರದೇಶದಲ್ಲಿ 18 ಪ್ರಕರಣ, ಶಿವಮೊಗ್ಗ ಜಿಲ್ಲೆಯಲ್ಲಿ 35 ಪ್ರಕರಣ ಪತ್ತೆಯಾಗಿತ್ತು.

1957ರಲ್ಲಿ ಕೆಎಫ್​ಡಿ ಪತ್ತೆ

ಮೊದಲು 1957ರಲ್ಲಿ ಶಿವಮೊಗ್ಗ ಜಿಲ್ಲೆ ಸೊರಬದ ಕ್ಯಾಸನೂರು ಕಾಡಿನ ವ್ಯಾಪ್ತಿಯಲ್ಲಿರುವ ಕಣ್ಣೂರು ಗ್ರಾಮದಲ್ಲಿ ವಿಷಾಣು ಪತ್ತೆ ಹಚ್ಚಲಾಯಿತು. ಹೀಗಾಗಿ ಇದನ್ನು ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದೇ ಕರೆಯಲಾಯಿತು. ಮಂಗನ ಮೂಲಕ ವೈರಾಣು ಮನುಷ್ಯನ ದೇಹ ಪ್ರವೇಶಿಸುವುದರಿಂದ ಗ್ರಾಮೀಣ ಭಾಷೆಯಲ್ಲಿ ಮಂಗನ ಕಾಯಿಲೆ ಎಂದೇ ಕರೆಯಲಾಗುತ್ತಿದೆ. 1974ರಲ್ಲಿ ಉತ್ತರ ಕನ್ನಡ, 1981ರಲ್ಲಿ ಚಿಕ್ಕಮಗಳೂರು, 1983ರಲ್ಲಿ ಮಂಗಳೂರು ಹಾಗೂ 1989ರಲ್ಲಿ ಉಡುಪಿ ಜಿಲ್ಲೆಯಲ್ಲೂ ಈ ವೈರಾಣುಗಳು ಕಾಣಿಸಿಕೊಂಡವು. ಅಂತಿಮವಾಗಿ 2013ರಲ್ಲಿ ಚಾಮರಾಜನಗರ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಗಡಿ ಭಾಗದಲ್ಲೂ ಕೆಎಫ್​ಡಿ ವೈರಾಣು ಕಾಣಿಸಿವೆ.

ವೈರಾಣು ಹರಡುವುದು ಹೇಗೆ?

ಸೋಂಕಿನಿಂದ ಮೊದಲು ಮಂಗ ಮೃತಪಡುತ್ತವೆ. ಬೇಸಿಗೆ ಆರಂಭದ 2 ತಿಂಗಳು ಕಾಯಿಲೆ ಹರಡುವ ಸಾಧ್ಯತೆ ಹೆಚ್ಚು. ಜಾನುವಾರುಗಳ ಮೈಯಲ್ಲಿ ಸಂದಿಪದಿಗಳ ರೂಪದಲ್ಲಿ ಸೇರಿ ಮನುಷ್ಯನ ದೇಹದಲ್ಲಿ ಆಶ್ರಯ ಪಡೆಯುತ್ತದೆ. ಕಾಡಂಚಿನ ಜನರಿಗೆ ಈ ಸೋಂಕಿನ ಪರಿಣಾಮ ಹೆಚ್ಚು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಗುಣಲಕ್ಷಣ

ವಿಪರೀತ ಜ್ವರ, ಕಣ್ಣು ಕೆಂಪಾಗುವುದು, ವಾಂತಿ, ತಲೆನೋವು, ಮೂಗು, ಕರುಳು ಹಾಗೂ ಚರ್ಮದಲ್ಲಿ ರಕ್ತಸ್ರಾವ, ಕೀಲು ನೋವು, ಮಾಂಸ ಖಂಡಗಳಲ್ಲಿ ನೋವು ಕಾಯಿಲೆಯ ಗುಣ ಲಕ್ಷಣ. ಜ್ವರ ಉಲ್ಬಣಿಸಿದರೆ ನಿಯಂತ್ರಣ ಕಷ್ಟವಾಗುವು ದಲ್ಲದೆ ಜೀವಕ್ಕೇ ಕುತ್ತು ಬರುತ್ತದೆ.

ಇದು ವೈರಾಣು ಅಭಿವೃದ್ಧಿ ಸಮಯ

ಮುಂಗಾರಿನ ಜೂನ್​ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಪ್ರೌಢಾವಸ್ಥೆ ತಲುಪುವ ಉಣ್ಣೆ, ಅಕ್ಟೋಬರ್​ನಿಂದ ಡಿಸೆಂಬರ್ ವೇಳೆಗೆ ಪ್ರೌಢ ಲಾರ್ವಾ ಆಗಿ ರೂಪು ಪಡೆಯುತ್ತದೆ. ಜನವರಿಯಿಂದ ಮೇ ಅವಧಿಯಲ್ಲಿ ಕೆಎಫ್​ಡಿ ಸಾಂಕ್ರಾಮಿಕ ವೈರಾಣುವಾಗಿ ಪರಿವರ್ತನೆಗೊಳ್ಳುತ್ತದೆ.

ಬ್ರಿಟನ್ ತಜ್ಞರ ತಂಡದಿಂದ ಸಂಶೋಧನೆ

ಮಂಗನ ಕಾಯಿಲೆ ಬಗ್ಗೆ ಸಂಶೋಧನೆ ನಡೆಸಲು ಬ್ರಿಟನ್ ಸರ್ಕಾರದ ಅಂಗ ಸಂಸ್ಥೆಯೊಂದು ಮುಂದೆ ಬಂದಿದೆ. ಯುಕೆ ಮೆಡಿಕಲ್ ರೀಸರ್ಚ್ ಕೌನ್ಸಿಲ್​ನ ಏಳು ತಜ್ಞರ ತಂಡ ಈಗಾಗಲೇ ಜಿಲ್ಲೆಯಲ್ಲಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದೆ. ತೀರ್ಥಹಳ್ಳಿ ತಾಲೂಕಿನ ಕನ್ನಂಗಿ, ಬೆಟ್ಟಬಸರವಾನಿ, ಮಹಿಷಿ, ದಬ್ಬಣಗದ್ದೆ ಮುಂತಾದ ಪ್ರದೇಶಕ್ಕೆ ತೆರಳಿರುವ ಬ್ರಿಟನ್​ನ ತಂಡ, ಮಂಗನಕಾಯಿಲೆಯಿಂದ ಬಳಲಿದವರನ್ನು ಮಾತನಾಡಿಸಿ ಅವರಿಂದ ಮಾಹಿತಿ ಸಂಗ್ರಹಿಸಿದೆ.

Leave a Reply

Your email address will not be published. Required fields are marked *