ದಲ್ಲಾಳಿಗಳ ಹಾವಳಿ ತಪ್ಪಿಸಿ

ಕೋಲಾರ: ರೈತರ ಶ್ರಮ ಮಧ್ಯವರ್ತಿಗಳ ಪಾಲಾಗದಂತೆ ನೇರವಾದ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಮೂಲಕ ಅನ್ನದಾತನಿಗೆ ಶ್ರಮಕ್ಕೆ ತಕ್ಕ ಲಾಭ ಸಿಗುವಂತೆ ಮಾಡುವ ಬದ್ಧತೆ ಸೊಸೈಟಿಗಳ ಸಿಇಒಗಳಿಗೆ ಬರಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಡಿಸಿಸಿ ಬ್ಯಾಂಕ್ ಹಾಗೂ ನಬಾರ್ಡ್ ಆಶ್ರಯದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಸಿಇಒಗಳಿಗೆ ಬುಧವಾರ ಆಯೋಜಿಸಿದ್ದ ರೈತ ಉತ್ಪಾದನಾ ಕೇಂದ್ರಗಳನ್ನು ತೆರೆಯುವ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ವ್ಯವಸಾಯ ಸಹಕಾರ ಸಂಘಗಳು ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಕನಿಷ್ಠ 1000 ಮಂದಿಯಿಂದ 1100 ರೂ. ಪಡೆದು ಸದಸ್ಯರನ್ನಾಗಿ ಮಾಡಿ ಕಂಪನಿ ಕಾಯ್ದೆ ಪ್ರಕಾರ ನೋಂದಣಿ ಮಾಡಿಸಬೇಕು. ಇದರ ವೆಚ್ಚವನ್ನು ನಬಾರ್ಡ್ ಭರಿಸಲಿದೆ. ಕೇಂದ್ರದಿಂದ 10 ಲಕ್ಷ ರೂ ನಬಾರ್ಡ್​ನಿಂದ 22 ಲಕ್ಷ ರೂ ಹಾಗೂ ಸದಸ್ಯತ್ವದ ಹಣ ಸೇರಿ 35 ಲಕ್ಷ ರೂ ಬಂಡಾವಳವಾಗುತ್ತದೆ. ಅಗತ್ಯ ಯಂತ್ರೋಪಕರಣಗಳಿಗೆ 25 ಲಕ್ಷ ರೂ. ಇಲಾಖೆಯಿಂದ ಸಾಲ ಸೌಲಭ್ಯ ಲಭ್ಯವಾಗಲಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡು ನೀವು ಹಾಗೂ ರೈತರನ್ನು ಸ್ವಾವಲಂಭಿಯನ್ನಾಗಿಸಿ ಎಂದರು.

ರೈತರ ಬೆಳೆಗಳಿಗೆ ಪ್ರಾಮಾಣಿಕವಾದ ಬೆಲೆ ಸಿಗುವಂತಾಗಲು ಆನ್​ಲೈನ್ ವ್ಯವಸ್ಥೆ ಪೂರಕವಾಗಲಿದೆ. ಇದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು, ರೈತರಿಗೆ ಅರಿವು ಮೂಡಿಸಬೇಕು ಎಂದರು.

ನಬಾರ್ಡ್ ಸಹಾಯಕ ಮಹಾಪ್ರಬಂಧಕ ಹಾಗೂ ಸಂಪನ್ಮೂಲ ಅಧಿಕಾರಿ ಎಂ.ಆರ್. ನಟರಾಜನ್, ರೈತರ ಉತ್ಪದನಾ ಕೇಂದ್ರಗಳು ಮಧ್ಯವರ್ತಿಗಳಿಲ್ಲದೆ ನಡೆಸುವ ವ್ಯಾಪಾರದ ವಹಿವಾಟು ಕೇಂದ್ರವಾಗಿದೆ ಎಂದರು.

ಸಹಕಾರ ಸಂಘಗಳ ಪ್ರಮುಖ ವ್ಯವಹಾರಗಳಾದ ಬೆಳೆ ಸಾಲ, ಮಧ್ಯಮ ಅವಧಿಸಾಲ, ಆಭರಣಗಳ ಮೇಲೆ ಸಾಲ, ಎಸ್​ಎಚ್​ಜಿ ಹಾಗೂ ಪ್ರತ್ಯೇಕ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದ ಅವರು ಸಹಕಾರ ಸಂಘಗಳನ್ನು ಬಲವರ್ಧನೆ ಮಾಡುವ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗಿ, ರೈತರ ಹಿತ ಕಾಯಲು ಈ ರೈತ ಉತ್ಪಾದನಾ ಕೇಂದ್ರಗಳ ಸಹಕಾರ ಪಡೆಯಿರಿ ಎಂದರು.

ಎಫ್​ಒಪಿ ನೋಡಲ್ ಅಧಿಕಾರಿ ಶಿವಕುಮಾರ್, ತಾಯಲೂರು ಕೇಂದ್ರದ ಕಾರ್ಯನಿರ್ವಾಹಣಾಧಿಕಾರಿ ವಿಶ್ವನಾಥ್, ಡಿಸಿಸಿ ಬ್ಯಾಂಕಿನ ಅಧಿಕಾರಿಗಳಾದ ಖಲಿಮುಲ್ಲಾ, ಜಗದೀಶ್ ಉಪಸ್ಥಿತರಿದ್ದರು.