ಹಳಿಯಾಳ: ತಾಲೂಕಿನ ದಲಿತ ಹಾಗೂ ಇತರ ಸಂಘಟನೆಗಳು ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ದುರುದ್ದೇಶ ಪೂರ್ವಕವಾಗಿ ಆರೋಪ ಮಾಡಿ, ವರ್ಗಾವಣೆಗೆ ಆಗ್ರಹಿಸಿ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಸಿವೆ. ಇದನ್ನು ಖಂಡಿಸಿ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಘಟಕಗಳ ವೈದ್ಯರು ಹಾಗೂ ಸಿಬ್ಬಂದಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿಯ ತಾಲೂಕು ಆಸ್ಪತ್ರೆಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಆರೋಗ್ಯ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿ ತಮ್ಮ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಘೊಷಣೆ ಕೂಗುತ್ತ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಮನವಿ ಸಲ್ಲಿಸಿದರು.
ಹೋರಾಟದ ಎಚ್ಚರಿಕೆ: ತಾಲೂಕು ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಆಡಳಿತಾಧಿಕಾರಿ ಡಾ. ರಮೇಶ ಕದಂ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಅದಕ್ಕಾಗಿ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಕೆಂಪು ಸೇನೆ) ಅಧ್ಯಕ್ಷ ವಿ.ಬಿ. ರಾಮಚಂದ್ರ ಅವರು ತಾಪಂ ಇಒ ಅವರಿಗೆ ಮನವಿ ಸಲ್ಲಿಸಿದ್ದರು. ಈ ಆರೋಪ ಡಾ. ರಮೇಶ ಕದಂ ಹಾಗೂ ತಾಲೂಕಿನ ಸರ್ಕಾರಿ ಆರೋಗ್ಯ ಇಲಾಖೆಯ ಸಿಬ್ಬಂದಿಯ ಮನೋಬಲ ಕುಸಿಯುವಂತೆ ಮಾಡಿವೆ. ಡಾ. ರಮೇಶ ಕದಂ ಪ್ರಾಮಾಣಿಕ ವೈದ್ಯರಾಗಿದ್ದು, ಹಳಿಯಾಳ ಹಾಗೂ ದಾಂಡೇಲಿ ಆಸ್ಪತ್ರೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇಲಾಖೆಯ ರಾಷ್ಟ್ರೀಯ ಕಾರ್ಯಕ್ರಮಗಳ ಮೇಲ್ವಿಚಾರಣೆ ಹಾಗೂ ಜಿಲ್ಲಾ ಮಟ್ಟದ ಸಭೆಗಳಲ್ಲಿ ಪಾಲ್ಗೊಳ್ಳುತ್ತಾರೆ. ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರೆತೆಯ ಮಧ್ಯೆಯೂ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಯತ್ನಿಸುತ್ತಿದ್ದಾರೆ. ವಸ್ತು ಸ್ಥಿತಿ ಹೀಗಿರುವಾಗ ಡಾ. ರಮಮೇಶ ಕದಂ ಅವರನ್ನು ವರ್ಗಾವಣೆ ಮಾಡಿದರೆ ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಇಷ್ಟಾಗಿಯೂ ಡಾ. ಕದಂ ಅವರ ವರ್ಗಾವಣೆಗೆ ಮುಂದಾದರೆ ತಾಲೂಕು ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ ಹೋರಾಟಕ್ಕೆ ಇಳಿಯುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಕಿರಿಯ ಆರೋಗ್ಯ ಸಹಾಯಕರು ಹಾಗೂ ಮೇಲ್ವಿಚಾರಕರ ಸಂಘದ ಸದಸ್ಯರು, ವೈದ್ಯರು ಪಾಲ್ಗೊಂಡಿದ್ದರು. ಡಾ. ಅರುಣಾ ಅಣ್ವೇಕರ, ಸ್ಟೇನ್ಲಿ, ಮೊಹಮದ್ ನದೀಮ್ ಪೂನಂ ಕೊಟಾರಕರ್, ವಿ.ಕೆ. ನಾಯ್ಕ, ಮನೋಹರ ಕಲಗುಟಕರ, ಪ್ರಕಾಶ ಮಾನೆ, ಎಸ್.ಸಿ ಮಲ್ಕಾನಿ ಉಪಸ್ಥಿತರಿದ್ದರು.