ಚಿತ್ರದುರ್ಗ: ದಲಿತರ ಪರವಿದ್ದೇವೆ ಎನ್ನುವ ಕಾಂಗ್ರೆಸ್ ಆ ಜನಾಂಗದ ಜನಪ್ರತಿನಿಧಿಯನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಿ ಎಂದು ಐಮಂಗಲ ಹರಳಯ್ಯ ಗುರುಪೀಠದ ಶ್ರೀ ಮಾದಾರ ಹರಳಯ್ಯ ಸ್ವಾಮೀಜಿ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಪಟ್ಟವನ್ನು ಲಿಂಗಾಯತ, ಒಕ್ಕಲಿಗರು ಮಾತ್ರ ಅನುಭವಿ ಸುವುದಾದರೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯ ಈಡೇರುವುದು ಯಾವಾಗ ಎಂದು ಪ್ರಶ್ನಿಸಿದರು.
ಎಡಗೈ-ಬಲಗೈನಲ್ಲಿ ಅನೇಕ ಅರ್ಹ ಶಾಸಕರಿದ್ದಾರೆ. ಸಂವಿಧಾನದ ಪರವಾಗಿದ್ದೇವೆ ಎಂದು ಹೇಳುವ ಕಾಂಗ್ರೆಸ್
ಶ್ರೀಮಂತರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುತ್ತಿದೆ. ಒಂದು ವರ್ಷದ ಅವಧಿಗಾದರೂ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದರು.
ಕರ್ನಾಟಕ ಮಾದಿಗ ಯುವ ಸೇನೆ ಪ್ರಧಾನ ಕಾರ‌್ಯದರ್ಶಿ ಡಾ.ಕರಿಯಪ್ಪ ಎಸ್.ಪಾಲವ್ವನಹಳ್ಳಿ ಮಾತನಾಡಿ, ಮುಧೋಳ ಶಾಸಕ ಆ ರ್.ಬಿ.ತಿಮ್ಮಾಪುರ್ ಅವರಿಗೆ ಡಿಸಿಎಂ ಸ್ಥಾನ ನೀಡುವಂತೆ ಒತ್ತಾಯಿಸಿದರು. ಡಿ.ಕುಮಾರ್, ಕಣ್ಮೇಶ್, ಆರ್.ಚಂದ್ರಶೇಖರ್, ಚಿದಾನಂದ ಮೂರ್ತಿ, ಟಿ.ಶಫಿವುಲ್ಲಾ, ಭೀಮರಾಜ್, ವೆಂಕಟೇಶ್ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.