ದಲಿತತ್ವದ ಸಂಕಟ-ಆತಂಕ ಬಿಂಬಿಸಿದ ಗೋಷ್ಠಿ

ಧಾರವಾಡ: ದಲಿತರ ತಲ್ಲಣಗಳು, ಸಂಕಟಗಳು-ತೋಳಲಾಟಗಳ ಮೇಲೆ ಬೆಳಕು ಚೆಲ್ಲಿದ ಮೊದಲ ದಿನದ 2ನೇ ಗೋಷ್ಠಿ, ದಲಿತ ಅಸ್ಮಿತೆ, ಸಾಮಾಜಿಕ ಸಮಸ್ಯೆಗಳನ್ನು ಯಾವ ತಳಹದಿಯಲ್ಲಿ ಬಗೆಹರಿಸಿಕೊಳ್ಳಬೇಕು ಎನ್ನುವ ಬಗ್ಗೆ ಜನರಲ್ಲಿ ಚಿಂತನೆಯ ಬೀಜ ಬಿತ್ತಿತು.

ದಲಿತತ್ವ ಎನ್ನುವುದು ಏಕರೂಪವಲ್ಲ; ಬಹುರೂಪತ್ವದ ಸಂಗತಿ. ದಲಿತ ಚಳವಳಿಗೆ ಸಂಬಂಧಿಸಿದ ವಿಷಯಗಳು ಪ್ರಾಮಾಣಿಕ ವಿಮರ್ಶೆಗೆ ಒಳಪಡುವ ಅಗತ್ಯವಿದೆ. ಕೆಲವೊಂದು ವಿದ್ಯಮಾನಗಳು ದಲಿತರಲ್ಲಿ ಆತಂಕ ಉಂಟು ಮಾಡುತ್ತಿವೆ ಎನ್ನುವ ಬಗ್ಗೆ ಗೋಷ್ಠಿ ಗಮನ ಸೆಳೆಯಿತು. ಜೊತೆಗೆ ಕನ್ನಡತನವನ್ನು ಬಿಟ್ಟು ದಲಿತ ಅಸ್ಮಿತೆ ಕಲ್ಪಿಸಲಾಗದು. ಸರ್ಕಾರ ಆಂಗ್ಲ ಮಾಧ್ಯಮ ಆರಂಭಿಸುವುದನ್ನು ಬಿಟ್ಟು, ಈಗ ಇರುವ ಕನ್ನಡ ಶಾಲೆಗಳ ಸಬಲೀಕರಣ ಮಾಡಬೇಕು ಎಂದು ಒತ್ತಾಯಿಸಲಾಯಿತು.

ದಲಿತ ಚಳವಳಿಯ ಬಿಕ್ಕಟ್ಟುಗಳ ಕುರಿತು ಮಾತನಾಡಿದ ಗುರುಪ್ರಸಾದ ಕೆರೆಗೋಡು, ಕೆಲ ಬಿಕ್ಕಟ್ಟುಗಳನ್ನು ಇಡೀ ದಲಿತ ಸಮುದಾಯದ ದೊಡ್ಡ ಸಮಸ್ಯೆ ಎಂಬುದಾಗಿ ಬಿಂಬಿಸುವ ಈ ವ್ಯವಸ್ಥೆ ಇತರೆ ಚಳವಳಿಗಳಲ್ಲಿರುವ ಗಂಭೀರವಾದ ಬಿಕ್ಕಟ್ಟುಗಳ ಬಗ್ಗೆ ಪ್ರಾಮಾಣಿಕವಾದ ವಿಮರ್ಶೆಗೆ ಏಕೆ ಮುಂದಾಗುವುದಿಲ್ಲ? ಎಂದು ಪ್ರಶ್ನಿಸಿದರು.

ದಲಿತತ್ವ: ಸ್ಥಿತ್ಯಂತರಗಳು ಕುರಿತು ಮಾತನಾಡಿದ ಕೆ.ಬಿ. ಸಿದ್ದಯ್ಯ, ದಲಿತತ್ವ ಕನ್ನಡದ ಬದುಕು, ಕನ್ನಡ ಭಾಷೆಯ ಅಸ್ತಿತ್ವ ಹಾಗೂ ಕನ್ನಡದ ಭವ್ಯ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ. ಭಾಷೆಯ ವಿಚಾರ ಬಂದಾಗ ದಲಿತರು ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕನ್ನಡದಲ್ಲಿ ದಲಿತತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ. ದಲಿತರು ಕನ್ನಡ ಭಾಷೆ ಬೆಂಬಲಿಸಬೇಕು. ಸರ್ಕಾರಿ ಕನ್ನಡ ಶಾಲೆಗೆ ಮರುಜೀವ ನೀಡಬೇಕು. ದಲಿತತ್ವ ಎನ್ನುವುದು ವಿಶ್ವ ಮಾನವತ್ವ ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.

ದಲಿತ ವಾšಯ: ಹೊಸ ನೆಲೆಗಳ ಶೋಧ ಕುರಿತು ಮಾತನಾಡಿದ ಡಾ.ಜಿ.ಎಂ. ಪುಟ್ಟಯ್ಯ, ದಲಿತ ವಾšಯ ಬಗ್ಗೆ ಹೊಸ ವಿಮರ್ಶಕರು ತಪ್ಪಾಗಿ ವಿವರಣೆ ನೀಡಿದ್ದಾರೆ. ದಲಿತ ವಾšಯ ಎಂಬುದು ಅಂಬೇಡ್ಕರ್ ನಗರ, ಹರಿಜನ ಕೇರಿಯ ಸಾಹಿತ್ಯವಲ್ಲ. ಅದು ಭಾರತೀಯ ಸಾಹಿತ್ಯ. ಜಾಗತಿಕ ಮಟ್ಟದ ಸಾಹಿತ್ಯ. ಈ ಮನೋಭಾವ ಎಲ್ಲರಿಗೂ ಬರಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆ.ಬಿ. ಶಾಣಪ್ಪ ಅವರು, ಅಂಬೇಡ್ಕರ್ ಅವರು ಇರದಿದ್ದರೆ ಇಂದು ನಮ್ಮ ಸಂಕಟಗಳು ಚರ್ಚೆಯ ಮುನ್ನೆಲೆಗೆ ಬರುತ್ತಿರಲಿಲ್ಲ. ನಾವು ಎಲ್ಲರ ನಡುವೆ ಕುಳಿತು ಸಂಕಟಗಳ ಬಗ್ಗೆ ಮಾತನಾಡಲಾಗುತ್ತಿರಲಿಲ್ಲ. ಸಂವಿಧಾನದಲ್ಲಿರುವ ಎಲ್ಲ ಅಂಶಗಳು ಪರಿಣಾಮಕಾರಿ ಅನುಷ್ಠಾನಗೊಂಡು ದಲಿತರ ಬದುಕು ಸುಧಾರಣೆ ಆಗಬೇಕು ಎಂದು ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷ ಚಂದ್ರಶೇಖರ ಕಂಬಾರ, ಕಸಾಪ ರಾಜ್ಯ ಘಟಕದ ಅಧ್ಯಕ್ಷ ಡಾ.ಮನು ಬಳಿಗಾರ ಇದ್ದರು. ಕುಂದೂರು ಅಶೋಕ ಗೋಷ್ಠಿ ನಿರೂಪಿಸಿದರು. ಚಿ.ಮಾ. ಸುಧಾಕರ ನಿರ್ವಹಿಸಿದರು.

ಪ್ರಜಾಪ್ರಭುತ್ವದ ಅಹಪಾಸ್ಯ

ವಿಚಾರವಾದಿಗಳಾದ ದಾಬೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ ಅವರಂಥವರನ್ನು ಕೊಲ್ಲುವ ಮೂಲಕ ಅಸಹಿಷ್ಣುತೆ ಬಿತ್ತಲಾಗುತ್ತಿದೆ. ಸಂವಿಧಾನವನ್ನು ಜಂತರ್​ವುಂತರ್​ನಲ್ಲಿ ಬಹಿರಂಗವಾಗಿ ಸುಟ್ಟು, ಅದರ ವಿರುದ್ಧ ಘೊಷಣೆ ಕೂಗಲಾಗುತ್ತಿದೆ. ನೋಟು ಅಮಾನ್ಯೀಕರಣದ ಮೂಲಕ ದೇಶದ ಆರ್ಥಿಕ ವ್ಯವಸ್ಥೆ ಅಭದ್ರಗೊಳಿಸಿ, ಜನಸಾಮಾನ್ಯರ ಬದುಕನ್ನು ಅತಂತ್ರಗೊಳಿಸಲಾಗಿದೆ. ಸಂವಿಧಾನಬದ್ಧ ಸಂಸತ್​ಗೆ ಬದಲಾಗಿ ಧರ್ಮ ಸಂಸತ್ ನಡೆಸುವ ಮುಖಾಂತರ ಪ್ರಜಾಪ್ರಭುತ್ವ ವ್ಯವಸ್ಥೆ ಅಪಹಾಸ್ಯ ನಡೆಸಲಾಗುತ್ತಿದೆ. ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಗುತ್ತಿದೆ ಎಂದು ಗುರುಪ್ರಸಾದ ಕೆರೆಗೋಡು ಆಕ್ರೋಶ ವ್ಯಕ್ತಪಡಿಸಿದರು.