ಚಿತ್ರದುರ್ಗ: ನಟ ದರ್ಶನ್ ಕಡೆಯವರು ನಮ್ಮ ಕುಟುಂಬಕ್ಕೆ ಹಣ ನೀಡಿದ್ದಾರೆಂಬುದು ಸುಳ್ಳು. ನಯಾಪೈಸೆ ಬಂದಿಲ್ಲ. ಸಾಮಾಜಿಕ ಜಾಲತಾಣ ಬಳಸಿಕೊಂಡು ದೊಡ್ಡದಾಗಿ ವದಂತಿ ಹಬ್ಬಿಸಬೇಡಿ ಎಂದು ಕೊಲೆಯಾದ ರೇಣುಕಸ್ವಾಮಿ ತಂದೆ ಕಾಶೀನಾಥಯ್ಯ ಶಿವನಗೌಡ್ರು ಮನವಿ ಮಾಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರು ಖರೀದಿಗೆ ಮುಂಗಡ ಕಾಯ್ದಿರಿಸಿದ್ದೇವೆ ಎಂಬ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇರುವ ದ್ವಿಚಕ್ರ ವಾಹನ ರಿಪೇರಿಗೆ ನಮ್ಮ ಬಳಿ ಕಾಸಿಲ್ಲ ಎಂದರು.
ದರ್ಶನ್ ಆಗಲಿ, ಅವರ ಕಡೆಯವರು ನಮ್ಮನ್ನು ಸಂಪರ್ಕಿಸಿಲ್ಲ. ನಾವೂ ಭೇಟಿಯಾಗಿಲ್ಲ. ಯಾವುದೇ ರೀತಿಯ ಹಣದ ವ್ಯವಹಾರ ನಡೆದಿಲ್ಲ. ಪುತ್ರನನ್ನು ಕಳೆದುಕೊಂಡು ಈಗಾಗಲೇ ಸಾಕಷ್ಟು ನೊಂದಿದ್ದೇವೆ. ಸ್ವಲ್ಪ ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೆ ಕುಟುಂಬದವರಿಗೆ ಈ ರೀತಿ ಮಾನಸಿಕ ನೋವು ನೀಡಬೇಡಿ ಎಂದು ಒತ್ತಾಯಿಸಿದರು.
ಸೊಸೆ ಮತ್ತು ಮೊಮ್ಮಗನ ಮುಂದಿನ ಜೀವನಾಧಾರಕ್ಕೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವಂತೆ ಸಿಎಂಗೆ ಮನವಿ ಸಲ್ಲಿಸಿದ್ದೆವು. ಆದರೆ, ಸಾಧ್ಯವಿಲ್ಲವೆಂಬ ಪ್ರತಿಕ್ರಿಯೆ ಬಂದಿದೆ. ಮತ್ತೊಮ್ಮೆ ಮರುಪರಿಶೀಲಿಸಿ, ಕಾಯಂ ಉದ್ಯೋಗ ಕಲ್ಪಿಸಬೇಕು ಎಂದು ಕೋರಿದರು.
ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ರಾಜ್ಯ ಸರ್ಕಾರದ ನಡೆ ಸ್ವಾಗತಾರ್ಹ ಎಂದರು.
ತಾಯಿ ರತ್ನಪ್ರಭಾ, ಜಂಗಮ ಸಮಾಜದ ಮುಖಂಡ ಷಡಾಕ್ಷರಯ್ಯ ಇದ್ದರು.