ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಜಿಲ್ಲೆಯಲ್ಲಿ ವಿಜೇತ ಅಭ್ಯರ್ಥಿಗಳ ಮತಗಳ ಅಂತರದ ಲೆಕ್ಕಾಚಾರದ ಚರ್ಚೆ ಆಗುತ್ತಿದೆ.
ರಾಜ್ಯದಲ್ಲೇ ಕಿರಿಯ ವಯಸ್ಸಿನ ಶಾಸಕರಾಗಿ ಆಯ್ಕೆ ಆಗಿರುವ ದರ್ಶನ್ ಧ್ರುವನಾರಾಯಣ ಜಿಲ್ಲೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ. ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಚುನಾಯಿತರಾಗಿರುವ ಜಿ.ಡಿ.ಹರೀಶ್‌ಗೌಡ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಈ ಇಬ್ಬರು ಮೊದಲ ಪ್ರಯತ್ನದಲ್ಲೇ ಶಾಸಕರಾದವರು ಎಂಬುದು ವಿಶೇಷ.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ಅವರ ಅಕಾಲಿಕ ನಿಧನದಿಂದ ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶಿಸಿದ 28 ವರ್ಷ ವಯಸ್ಸಿನ ದರ್ಶನ್ ಧ್ರುವನಾರಾಯಣ ಅವರು ನಂಜನಗೂಡು ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಬಿಜೆಪಿಯ ಹರ್ಷವರ್ಧನ್ ವಿರುದ್ಧ 47,607 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಹಿರಿತಲೆಗಳು ಇಷ್ಟು ಮತಗಳ ಅಂತರದಲ್ಲಿ ಜಯ ಸಾಧಿಸಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಲಕ್ಷ ಮತಗಳ ಅಂತರದಿಂದ ಗೆಲುವು ಪಡೆಯುವುದಾಗಿ ಘೋಷಿಸಿದ್ದರು. ಆದರೆ, 46,006 ಮತಗಳಿಂದ ಜಯಗಳಿಸಿ 9ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಸ್ಪರ್ಧೆಯಿಂದ ಸಿದ್ದರಾಮಯ್ಯ ಅವರ ಗೆಲುವಿನ ಸ್ಪರ್ಧೆ ಕಠಿಣವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಬಿಜೆಪಿ ಗೆಲುವಿನ ಹತ್ತಿರಕ್ಕೂ ಬರಲಿಲ್ಲ. ಯಾವುದೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಳ್ಳಲಿಲ್ಲ. ಹೀಗಾಗಿ, ಅನಾಯಾಸವಾಗಿ ಸಿದ್ದರಾಮಯ್ಯ ಅವರು 46 ಸಾವಿರ ಮತಗಳ ಅಂತರದಿಂದ ಜಯಭೇರಿ ಸಾಧಿಸಿದ್ದಾರೆ.
2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡ ಅವರು ಸಿದ್ದರಾಮಯ್ಯ ವಿರುದ್ಧ 39 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಆದರೆ 2023ರ ಚುನಾವಣೆಯಲ್ಲಿ ಅವರ ಮತಗಳ ಅಂತರ 25,500ಕ್ಕೆ ಕುಸಿದಿದೆ.
ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ. ಹರೀಶ್‌ಗೌಡ ಜಿಲ್ಲೆಯಲ್ಲಿ ಕಡಿಮೆ ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಪ್ರತಿಸ್ಪರ್ಧಿ ಎಚ್.ಪಿ. ಮಂಜುನಾಥ್ ವಿರುದ್ಧ 2,412 ಮತಗಳ ಅಂತರದಿಂದ ಜಯದ ಗೆರೆಯನ್ನು ಪ್ರಾಯಾಸದಿಂದ ದಾಟಿದ್ದಾರೆ.
2018ರ ಚುನಾವಣೆಯಲ್ಲಿ ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ಕೆ.ಆರ್.ನಗರದ ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಈ ಚುನಾವಣೆಯಲ್ಲಿ 25,639 ಮತಗಳ ಅಂತರದಿಂದ ಮಾಜಿ ಸಚಿವ ಸಾ.ರಾ.ಮಹೇಶ್ ಅವರನ್ನು ಬಗ್ಗು ಬಡಿದ್ದಾರೆ.
ಪಿರಿಯಾಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟೇಶ್ 19675 ಮತ, ಚಾಮರಾಜ ಕ್ಷೇತ್ರದಲ್ಲಿ ಕೆ.ಹರೀಶ್‌ಗೌಡ 4,094 ಮತಗಳಿಂದ ಗೆಲುವು ಕಂಡಿದ್ದಾರೆ.
ನರಸಿಂಹರಾಜ ಕ್ಷೇತ್ರದಿಂದ 6ನೇ ಬಾರಿ ಗೆಲುವು ಪಡೆದಿರುವ ಕಾಂಗ್ರೆಸ್‌ನ ತನ್ವೀರ್ ಸೇಠ್ 31,091 ಮತಗಳ ಅಂತರದಿಂದ ವಿಜಯದ ನಗೆ ಬೀರಿದ್ದಾರೆ. ಎಚ್.ಡಿ.ಕೋಟೆಯ ಅನಿಲ್ ಚಿಕ್ಕಮಾದು 34,939 ಮತಗಳ ಅಂತರದಿಂದ ಗೆದ್ದು ಪುನಾರಾಯ್ಕೆಗೊಂಡಿದ್ದಾರೆ
ಕೆ.ಆರ್. ಕ್ಷೇತ್ರದ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಂ.ಕೆ.ಸೋಮಶೇಖರ್ ವಿರುದ್ಧ 7,213 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಮೈಸೂರು ಭಾಗದಲ್ಲಿ ಬಿಜೆಪಿ ಗೆಲುವು ಪಡೆದಿರುವ ಏಕೈಕ ಕ್ಷೇತ್ರವಿದು.