ದರ್ಪ ಬಿಡಿ, ದಕ್ಷತೆಯಿಂದ ಕೆಲಸ ಮಾಡಿ

ಹುಬ್ಬಳ್ಳಿ: ಶಾಂತಿ, ತಾಳ್ಮೆ, ಸುವ್ಯವಸ್ಥೆ ನಿರ್ವಹಣೆಗೆ ಪೊಲೀಸ್ ಇಲಾಖೆ ಹೆಸರಾಗಿದೆ. ಸಾರ್ವಜನಿಕರಿಗೆ ಪೊಲೀಸರಿಂದ ರಕ್ಷಣೆ ದೊರೆಯುತ್ತದೆ ಎಂಬ ಭಾವನೆ ಮೂಡಬೇಕು. ದರ್ಪದಿಂದ ವರ್ತಿಸದೇ ಸಾರ್ವಜನಿಕ ಸ್ನೇಹಿ ಪೊಲೀಸರಾಗಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಿಐಡಿ (ಆರ್ಥಿಕ ಅಪರಾಧಗಳು) ಮಹಾ ನಿರೀಕ್ಷಕ ಹಾಗೂ ಬೆಂಗಳೂರು ಪೊಲೀಸ್ ತರಬೇತಿ ಸಂಸ್ಥೆಯ ಮುಖ್ಯಸ್ಥ ಹೇಮಂತ ನಿಂಬಾಳ್ಕರ್ ಸಲಹೆ ನೀಡಿದರು.

ನಗರದ ಗೋಕುಲ ರಸ್ತೆಯ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಘಟಕದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಹೊಸ ಸಿಎಆರ್ ಕವಾಯತು ಮೈದಾನದಲ್ಲಿ ಶನಿವಾರ ಜರುಗಿದ ಕೆಎಸ್​ಐಎಸ್​ಎಫ್ ಪೊಲೀಸ್ ಪೇದೆಗಳ 5ನೇ ತಂಡದ ನಿರ್ಗಮನ ಪಥ ಸಂಚಲನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರೊಂದಿಗೆ ದರ್ಪದಿಂದ ವರ್ತಿಸುವುದನ್ನು ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಯಲ್ಲಿ ಕಲಿಸುವುದಿಲ್ಲ. ಆದರೆ, ಪೊಲೀಸರು ಹಲವು ಬಾರಿ ದರ್ಪದಿಂದ ವರ್ತಿಸುವುದು ಕಂಡುಬರುತ್ತಿದೆ. ಪೊಲೀಸ್ ಕೆಲಸಕ್ಕೆ ಸೇರಿದ ನೀವು ಪೊಲೀಸ್ ಹಾಗೂ ನಾಗರಿಕರ ಕರ್ತವ್ಯಗಳನ್ನು ನಿರ್ವಹಿಸಬೇಕು. ಈ ನೆಲದ ಜನರು, ಮಣ್ಣಿನ ಸ್ವಾಭಿಮಾನ, ರೈತರು, ಮಹಿಳೆಯರು, ಮಕ್ಕಳ ಸಂರಕ್ಷಣೆ ನಿಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು.

ತೆರೆದ ವಾಹನದಲ್ಲಿ ತೆರಳಿ, ಪೊಲೀಸ್ ಪ್ರಶಿಕ್ಷಣಾರ್ಥಿಗಳಿಂದ ವಂದನೆ ಸ್ವೀಕರಿಸಿದರು. 123 ಕೆಎಸ್​ಐಎಸ್​ಎಫ್ ಪ್ರಶಿಕ್ಷಣಾರ್ಥಿಗಳು ನಡೆಸಿದ ತ್ವರಿತ ಹಾಗೂ ಮಂದಗತಿಯ ಪರೇಡ್ ನೆರೆದಿದ್ದವರ ಗಮನ ಸೆಳೆದವು.

ಫೈರಿಂಗ್ ವಿಭಾಗದಲ್ಲಿ ಕುಮಾರ್, ಕರಿಯಪ್ಪ, ಗೌತಮ್ ನಾಗಪ್ಪ, ಹೊರಾಂಗಣ ಕ್ರೀಡಾಕೂಟದಲ್ಲಿ ಸುಹಾಸ್ ಎಸ್.ಆರ್., ನಿಂಗಪ್ಪ ಹಲ್ಲಾಪುರ, ದೇವರಾಜ್ ಮೇತ್ರಿ, ಪ್ರವೀಣ್ ಆಚಾರ್​ರಟ್ಟಿ, ಒಳಾಂಗಣ ಕ್ರೀಡಾಕೂಟದಲ್ಲಿ ಪ್ರಕಾಶ್, ದೇವರಾಜ್ ಮೇತ್ರಿ, ಚಂದ್ರಶೇಖರ್, ಸುಹಾಸ್ ಎಸ್.ಆರ್. ಸವೋತ್ತಮ ಪ್ರಶಸ್ತಿಗಳನ್ನು ಪಡೆದರು.

ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಹಾಗೂ ಡಿಸಿಪಿ ಬಿ.ಎಸ್. ನೇಮಗೌಡ, ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಅಲ್ಲದೆ ವಾರ್ಷಿಕ ವರದಿ ಓದಿದರು.

ಐಎಸ್​ಡಿಎಸ್​ನ ಎಸ್ಪಿ ರವಿಕುಮಾರ್, ಮಾಜಿ ಸಂಸದ ಐ.ಜಿ. ಸನದಿ, ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳ ಸಂಬಂಧಿಕರು ಉಪಸ್ಥಿತರಿದ್ದರು. ಹು-ಧಾ ಪೊಲೀಸ್ ಆಯುಕ್ತ ನಾಗರಾಜ್ ಎಂ.ಎನ್. ಸ್ವಾಗತಿಸಿದರು. ಉಪ ಪೊಲೀಸ್ ಆಯುಕ್ತ ರವೀಂದ್ರ ಗಡಾದಿ ವಂದಿಸಿದರು.

15 ಜನ ಸ್ನಾತಕೋತ್ತರ ಪದವೀಧರರು: ಕೆಎಸ್​ಐಎಸ್​ಎಫ್​ನ 123 ಪ್ರಶಿಕ್ಷಣಾರ್ಥಿಗಳಲ್ಲಿ 15 ಜನ ಸ್ನಾತಕೋತ್ತರ ಪದವೀಧರರು, 22 ಬಿಎಡ್, 55 ವಿವಿಧ ಪದವಿ ಹಾಗೂ 15 ಜನ ಪಿಯುಸಿ ವಿದ್ಯಾರ್ಹತೆ ಹೊಂದಿದವರು ಇದ್ದಾರೆ.

ಪೊಲೀಸ್ ಕೆಲಸಕ್ಕೆ ಉತ್ತಮವಾದವರು ಮಾತ್ರ ಆಯ್ಕೆಯಾಗುತ್ತಾರೆ. ಖಾಕಿ ಸಮವಸ್ತ್ರ ಪೊಲೀಸರ ಗುರುತಿನ ಚೀಟಿ. ಈ ಸಮವಸ್ತ್ರ ನೋಡಿ ಎಲ್ಲರಲ್ಲಿ ರಕ್ಷಣೆ ಭಾವ ಮೂಡಬೇಕು. ಇದನ್ನು ಬಿಟ್ಟು ಮಾನ ತೆಗೆಯುವ ಕೆಲಸ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು. -ಹೇಮಂತ ನಿಂಬಾಳ್ಕರ್, ಸಿಐಡಿ (ಆರ್ಥಿಕ ಅಪರಾಧಗಳು) ಮಹಾ ನಿರೀಕ್ಷಕ