ದರ್ಗಾ ತಡೆಗೋಡೆ ಸರ್ವೆ

ರಟ್ಟಿಹಳ್ಳಿ: ಹಾವೇರಿ ಜಿಲ್ಲಾಧಿಕಾರಿಗಳ ಆದೇಶದಂತೆ ಪಟ್ಟಣದ ದರ್ಗಾವೊಂದರ ತಡೆಗೋಡೆ ನಿರ್ವಿುಸಲು ಮಾಡಲಾಗಿರುವ ಸಾರ್ವಜನಿಕ ರಸ್ತೆ ಒತ್ತುವರಿ ತೆರವುಗೊಳಿಸಲು ತಾಲೂಕಿನ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್​ನಲ್ಲಿ ಭಾನುವಾರ ಸರ್ವೆ ಕಾರ್ಯ ಕೈಗೊಂಡರು.

ಈ ಕುರಿತು ಪಿಡಿಒ ಪಿ.ಎಂ. ಚಕ್ರಸಾಲಿ ಮಾತನಾಡಿ, ಹಾವೇರಿಯಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ಸಭೆಯಲ್ಲಿ ರಟ್ಟಿಹಳ್ಳಿ ಪಟ್ಟಣದ ಹಳೇ ಬಸ್ ನಿಲ್ದಾಣ ಬಳಿ ಸರ್ವೆ ನಂ. 90ರಲ್ಲಿರುವ ಮುಂಡೇಷಾವಲಿ ದರ್ಗಾದ ತಡೆಗೋಡೆ ಸರ್ವೆ ಮಾಡಿ ವರದಿ ಒಪ್ಪಿಸಬೇಕು ಎಂದು ಆದೇಶ ಹೊರಡಿಸಿದ್ದರು. ಈ ನಿಟ್ಟಿನಲ್ಲಿ ತಹಸೀಲ್ದಾರ್ ಆರ್.ಜಿ. ಚಂದ್ರಶೇಖರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ, ಲೋಕೋಪಯೋಗಿ ಇಲಾಖೆ, ಭೂಮಾಪನ ಇಲಾಖೆ ಮತ್ತು ಗ್ರಾಪಂ ಸಹಯೋಗದೊಂದಿಗೆ ತಡೆಗೋಡೆಯ ಸುತ್ತ ಸರ್ವೆ ಕಾರ್ಯ ನಡೆಸಲಾಯಿತು. ಸರ್ವೆ ವರದಿ ಮತ್ತು ಆಗಿರುವ ಒತ್ತುವರಿಯ ಬಗ್ಗೆ ಸಂಪೂರ್ಣವಾಗಿ ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಪಿಐ ಮಂಜುನಾಥ ಪಂಡಿತ್, ಪಿಎಸ್​ಐ ಬಿ.ಎಸ್. ಅರವಿಂದ, ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷರು ಮತ್ತು ಮುಸ್ಲಿಂ ಸಮಾಜದವರು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.