ದಮನಿತರ ಧ್ವನಿ ಅಂಬೇಡ್ಕರ್

ಧಾರವಾಡ: ದಮನಿತರು ಮತ್ತು ಮಹಿಳೆಯರಿಗೆ ಯಾವುದೇ ಸ್ವಾತಂತ್ರ್ಯ ಇಲ್ಲದ ಸಂದರ್ಭದಲ್ಲಿ ಅವರ ಧ್ವನಿಯಾಗಿ ಕೆಲಸ ಮಾಡಿ ಸಾಮಾಜಿಕ ಸಮಾನತೆಗೆ ನಾಂದಿ ಹಾಡಿದವರು ಡಾ. ಬಿ.ಆರ್. ಅಂಬೇಡ್ಕರ್ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಜಿಲ್ಲಾಡಳಿತ, ಜಿ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿನ ಸನ್ಮತಿ ಮಾರ್ಗದಲ್ಲಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರರ 128ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ನಿರ್ವಣಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ನೀಡಿದ ಕೊಡುಗೆ ಅಪಾರ. ಶಿಕ್ಷಣದಿಂದ ಮಾತ್ರ ಸರ್ವರ ವಿಕಾಸ ಸಾಧ್ಯ ಎಂದು ಅರಿತಿದ್ದ ಅವರು, ಜೀವಿತಾವಧಿ ಉದ್ದಕ್ಕೂ ಅಧ್ಯಯನಶೀಲರಾಗಿದ್ದರು. ತಾವು ಓದಿದ್ದನ್ನು ಸಮಾಜದ ವಿಕಾಸಕ್ಕೆ ಬಳಸಿಕೊಂಡರು. ದೇಶದ ನಾಗರಿಕರಿಗೆ ಮತದ ಹಕ್ಕನ್ನು ನೀಡಿ ಸಮಾನತೆ ಬೀಜ ಬಿತ್ತಿದರು ಎಂದರು.

ಕವಿವಿ ಪ್ರಾಧ್ಯಾಪಕ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಸನ್ನ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಕಾಲೇಜು ಶಿಕ್ಷಣ ಇಲಾಖೆ ಜಂಟಿನಿರ್ದೇಶಕಿ ಡಾ. ನೀಲಾಂಬಿಕಾ ಪಟ್ಟಣಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ

ಎನ್.ಮುನಿರಾಜು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್​ಪಿ ಗುರು ಮತ್ತೂರ, ತಹಸೀಲ್ದಾರ್ ಪ್ರಕಾಶ ಕುದರಿ, ಸುಶೀಲಮ್ಮ ಚಲವಾದಿ, ಇತರರು ಇದ್ದರು.

ಇದಕ್ಕೂ ಪೂರ್ವದಲ್ಲಿ ಕಲಾಭವನದ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಸವೇಶ್ವರರ ಪ್ರತಿಮೆಗಳಿಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಮಾಲಾರ್ಪಣೆ ಮಾಡಿದರು.

ಭಾರತದ ಸಂವಿಧಾನ ಜಗತ್ತಿಗೆ ಮಾದರಿ

ಹುಬ್ಬಳ್ಳಿ: ಡಾ. ಅಂಬೇಡ್ಕರ್ ಅವರು ಭಾರತಕ್ಕೆ ನೀಡಿದ ಸಂವಿಧಾನ, ಜಗತ್ತಿನಲ್ಲೇ ಮಾದರಿ ಯಾಗಿದೆ ಎಂದು ಮಾಜಿ ಸಿ.ಎಂ. ಜಗದೀಶ ಶೆಟ್ಟರ್ ಹೇಳಿದರು.

ಡಾ. ಅಂಬೇಡ್ಕರ್ ಜಯಂತಿ ನಿಮಿತ್ತ ಸ್ಟೇಶನ್ ರಸ್ತೆಯ ಅಂಬೇಡ್ಕರ್ ವೃತ್ತದ ಪುತ್ಥಳಿಗೆ ಭಾನುವಾರ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ವಿಶ್ವದ ಬಹಳಷ್ಟು ದೇಶಗಳಲ್ಲಿ ಸರ್ವಾಧಿಕಾರವಿದೆ. 130 ಕೋಟಿ ಜನಸಂಖ್ಯೆ ಇರುವ ಭಾರತದಂಥ ದೇಶದಲ್ಲಿ ಪ್ರಜಾಪ್ರಭುತ್ವ ಶಾಂತಿಯುತವಾಗಿ ನಡೆಯುತ್ತಿದೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರ ಸಂವಿಧಾನ ಕಾರಣ ಎಂದರು.

ಸಂಸದ ಪ್ರಲ್ಹಾದ ಜೋಶಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಸಂವಿಧಾನ ದಿನ ಆಚರಣೆ ಜಾರಿಗೆ ಬಂದಿದೆ. ನಮ್ಮ ಸರ್ಕಾರ ಡಾ. ಅಂಬೇಡ್ಕರ್ ಅವರಿಗೆ ಉನ್ನತ ಗೌರವ ನೀಡಿದೆ. ಅವರ ವಾಸ ಸ್ಥಳವಾಗಿದ್ದ ದೆಹಲಿ, ಅಧ್ಯಯನ ಸ್ಥಳವಾದ ಇಂಗ್ಲೆಂಡ್ ಹಾಗೂ ಅವರ ಸಮಾಧಿಗೆ ವಿಶೇಷ ಸ್ಥಾನಮಾನ ನೀಡಿ ಗೌರವ ನೀಡಿದೆ ಎಂದರು.

ಜೋಶಿ ಅಭಿವೃದ್ಧಿ ಮಾಡಿಲ್ಲ ಎಂದು ಕಾಂಗ್ರೆಸ್​ನವರು ಹೇಳುತ್ತಾರೆ. ನಾನು ಮಾಡಿದ ಕೆಲಸ ಕಾರ್ಯಗಳು ಕಣ್ಣ ಮುಂದೆ ಇವೆ. ಶೇ. 95ರಷ್ಟು ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದೇನೆ. ಐದು ಋತುವಿನ ಫಸಲ್ ಬಿಮಾದ 112 ಕೋಟಿ ರೂ. ಕೊಡಿಸಿದ್ದೇನೆ. 120 ಕೋಟಿ ರೂ. ನಲ್ಲಿ ಕಿಮ್ಸ್​ನಲ್ಲಿ ಸೂಪರ್ ಸ್ಪೆಷಾಲಿಟಿ ಹಾಸ್ಟಿಟಲ್ ನಿರ್ವಿುಸಲಾಗಿದೆ. ನ್ಯಾಶನಲ್ ಹೆಲ್ತ್ ಮಿಶನ್ ಅಡಿ ತಾಲೂಕು ಆಸ್ಪತ್ರೆಗಳಿಗೆ ಅನುದಾನ ಕೊಡಿಸಿದ್ದೇನೆ. ರಾಷ್ಟ್ರೀಯ ಮಾಧ್ಯಮಿಕ ಅಭಿಯಾನದಡಿ ಪ್ರತಿ ತಾಲೂಕಿನ 12-13 ಹಳ್ಳಿಗಳ ಶಾಲೆಗಳ ಅಭಿವೃದ್ಧಿಗೆ 60-70 ಲಕ್ಷ ರೂ. ನೀಡಿದ್ದೇವೆ. ಸಿಎಸ್​ಆರ್ ಹಣದಲ್ಲಿ ಶಾಲೆಗಳಿಗೆ 15 ಸಾವಿರ ಡೆಸ್ಟ್, 200 ಸ್ಮಾರ್ಟ್ ಬೋರ್ಡ್ ಕೊಡಿಸಿದ್ದೇವೆ. ಇನ್ನೂ ಹಲವು ರೀತಿಯ ಅನುದಾನ ಕೊಡಿಸಿದ್ದೇನೆ. ಟೀಕಿಸುವವರು ಪರಿಶೀಲನೆ ಮಾಡಲಿ ಎಂದರು.

ಅಂಬೇಡ್ಕರ್ ಆದರ್ಶ ಅಳವಡಿಸಿಕೊಳ್ಳಿ

ಹುಬ್ಬಳ್ಳಿ: ಭಾರತ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ಯುವಶಕ್ತಿ ಅಂಬೇಡ್ಕರ್ ವಿಚಾರಧಾರೆಯಂತೆ ನಡೆದು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬೇಕು ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ಡಾ. ಅಂಬೇಡ್ಕರ್ ಜಯಂತಿ ಅಂಗವಾಗಿ ಭಾನುವಾರ ನಗರದ ಸ್ಟೇಶನ್ ರಸ್ತೆಯ ಡಾ. ಅಂಬೇಡ್ಕರ್ ವೃತ್ತದಲ್ಲಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದವರು 20 ಸಾವಿರ ಉದ್ಯೋಗವನ್ನೂ ಸೃಷ್ಟಿಸಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲು ಉದ್ಯೋಗ ಸೃಷ್ಟಿಸುತ್ತೇವೆ. ಇನ್ನೂ ಹಲವಾರು ಪ್ರಣಾಳಿಕೆಗಳನ್ನು ಹೊಂದಿದ್ದೇವೆ. ಕೇಂದ್ರದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಬಿಜೆಪಿ ಹೇಳುತ್ತದೆ. ಆದರೆ, ದೇಶದಲ್ಲಿ ಹಸಿರು ಕ್ರಾಂತಿ, ನೀರಾವರಿಯಂತಹ ಕ್ರಾಂತಿಗಳು ನಡೆದಿವೆ ಎಂದರು. ಜೋಶಿ ಅವರದ್ದು ಬರೀ ಪ್ರಚಾರ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಮಾತನಾಡಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಸಂವಿಧಾನ ತಿರುಚುವ ಬಗ್ಗೆ ಮಾತನಾಡುತ್ತಾರೆ. ಇದರಿಂದ ಬಿಜೆಪಿ ಸಂಸ್ಕೃತಿ, ಅವರ ಹಿನ್ನೆಲೆ ಹೇಗಿದೆ ಎಂದು ಅರ್ಥವಾಗುತ್ತದೆ ಎಂದು ಟೀಕಿಸಿದರು.

ಕ್ಷೇತ್ರಕ್ಕೆ ಸಂಸದ ಪ್ರಲ್ಹಾದ ಜೋಶಿ ಅವರ ಕೊಡುಗೆ ಶೂನ್ಯ ಎಂದು ಆರೋಪಿಸಿದ ಅವರು, ಚುನಾವಣೆಯಲ್ಲಿ ಜೋಶಿ ಅವರ ಋಣವನ್ನು ಜನರು ತೀರಿಸುತ್ತಾರೆ ಎಂದು ವ್ಯಂಗ್ಯವಾಡಿದರು. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಸಂಬಂಧಿಸಿದಂತೆ ಎಂ.ಬಿ. ಪಾಟೀಲ ಹಾಗೂ ಡಿ.ಕೆ. ಶಿವಕುಮಾರ ಅವರ ನಡುವೆ ವೈಮನಸ್ಸು ಉಂಟಾಗಿರುವ ಕುರಿತ ಮಾಧ್ಯಮದವರ ಪ್ರಶ್ನೆಗೆ ವಿನಯ ಕುಲಕರ್ಣಿ, ಆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಜಾರಿಕೊಂಡರು.

ಸಂವಿಧಾನ ಶಾಸ್ತ್ರವಲ್ಲ, ಮಹಾಕಾವ್ಯ

ಧಾರವಾಡ: ಭಾರತೀಯ ಸಂವಿಧಾನ ಶಾಸ್ತ್ರವಲ್ಲ. ಅದು ಒಂದು ಜನರ ಆಡಳಿತಾತ್ಮಕವಾದ ಪರಿಭಾಷೆಯ ಮಹಾ ಕಾವ್ಯವಾಗಿದೆ ಎಂದು ಖ್ಯಾತ ಚಿಂತಕ ಪ್ರೊ. ಬರಗೂರ ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠ, ಸಮಾಜ ಕಲ್ಯಾಣ ಇಲಾಖೆ, ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸಮಿತಿ, ಅಂಬೇಡ್ಕರ್ ಜ್ಞಾನ ದರ್ಶನ ಅಭಿಯಾನ ಹಾಗೂ ಕವಿವಿಯ ಗದಗ ಮತ್ತು ಕಾರವಾರ ಸ್ನಾತಕೋತ್ತರ ಕೇಂದ್ರಗಳ ಸಹಯೋಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಕಾಲೀನ ಭಾರತದಲ್ಲಿ ಅಂಬೇಡ್ಕರರ ವಿಚಾರಗಳ ಪ್ರಸ್ತುತತೆ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಮುಂಬೈ ಟಾಟಾ ಸಮಾಜ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕ ಪ್ರೊ. ಅವಥಿ ರಾಮಯ್ಯ ಮಾತನಾಡಿದರು. ಕವಿವಿ ಕುಲಸಚಿ ಪ್ರೊ. ಸಿ.ಬಿ. ಹೊನ್ನ ಸಿದ್ದಾರ್ಥ ಮಾತನಾಡಿದರು. ಕವಿವಿ ಕುಲಪತಿ ಪ್ರೊ. ಪ್ರಮೋದ ಗಾಯಿ ಅಧ್ಯಕ್ಷತೆ ವಹಿಸಿದ್ದರು. ಡಾ. ಮುನಿರಾಜು, ಡಾ. ಎನ್.ಎಂ ಸಾಲಿ, ಡಾ. ಆರ್.ಎಲ್. ಹೈದ್ರಾಬಾದ, ಡಾ. ಧನವಂತ ಹಾಜವಗೋಳ, ಡಾ. ಸಂಗೀತಾ ಮಾನೆ, ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇದ್ದರು. ಡಾ. ಶಿವರುದ್ರ ಕಲ್ಲೋಳಿಕರ ಮಾತನಾಡಿದರು. ಅಂಬೇಡ್ಕರ್ ಅಧ್ಯಯನ ಪೀಠದ ಸಂಯೋಜಕ ಡಾ. ಸುಭಾಸಚಂದ್ರ ನಾಟೀಕಾರ್, ಡಾ. ಶ್ಯಾಮಲಾ ರತ್ನಾಕರ ಹಾಗೂ ಬಿ.ಎಂ. ರತ್ನಾಕರ ನಿರ್ವಹಿಸಿದರು.

Leave a Reply

Your email address will not be published. Required fields are marked *