ದಬ್ಬಾಳಿಕೆ ಸಲ್ಲದು

ಕಾಳಧನ ಸಂಗ್ರಹ ಹಾಗೂ ಖೋಟಾನೋಟು ಚಲಾವಣೆಯಂಥ ಪಿಡುಗುಗಳ ಮೂಲೋತ್ಪಾಟನದ ಯತ್ನದ ಒಂದು ಅಂಗವಾಗಿ ಅಧಿಕ ಮುಖಬೆಲೆಯ ಹಳೆಯ ನೋಟುಗಳ ಅನಾಣ್ಯೀಕರಣವನ್ನು ಕೇಂದ್ರ ಸರ್ಕಾರ ಈಗಾಗಲೇ ಕೈಗೊಂಡಿದೆ. ಇದರ ಮುಂದುವರಿದ ಮತ್ತು ಪೂರಕ ನಡೆಯಾಗಿ, ನಗದು ವ್ಯವಹಾರಗಳ ಪ್ರಮಾಣವನ್ನು ತಗ್ಗಿಸುವ ಬಗ್ಗೆಯೂ ಚಿಂತನೆ ನಡೆಸಿದ ಸರ್ಕಾರ, ಆನ್​ಲೈನ್ ವ್ಯವಹಾರಗಳು, ಮೊಬೈಲ್ ಬ್ಯಾಂಕಿಂಗ್ ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್​ಗಳ ಬಳಕೆಗೆ ಉತ್ತೇಜಿಸುವಂಥ ಉಪಕ್ರಮಗಳಿಗೂ ಮುಂದಾಯಿತು. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿರುವಷ್ಟು ‘ಬ್ಯಾಂಕಿಂಗ್ ಸಾಕ್ಷರತೆ’ ಗ್ರಾಮೀಣ ಪ್ರದೇಶಗಳಲ್ಲಿಲ್ಲ, ಹೀಗಾಗಿ ಈ ಉಪಕ್ರಮ ಅಂದುಕೊಂಡಷ್ಟು ಯಶಸ್ಸು ಕಾಣುತ್ತದೆಯೇ ಎಂಬ ಸಂದೇಹ/ಗೊಂದಲಗಳ ನಡುವೆಯೇ ‘ನಗದು ರಹಿತ’ ವ್ಯವಹಾರಗಳು ಸಾಕಷ್ಟು ಪ್ರಮಾಣದಲ್ಲಿ ವೇಗ ಕುದುರಿಸಿಕೊಂಡಿರುವುದನ್ನು ಅಂಕಿ-ಅಂಶಗಳೇ ಹೇಳುತ್ತವೆ. ಆದರೆ, ಈ ನಿಟ್ಟಿನಲ್ಲಿ ಸಮಾಧಾನಪಟ್ಟುಕೊಳ್ಳುತ್ತಿರುವುದರ ನಡುವೆಯೇ ಹಣಕಾಸು ವ್ಯವಹಾರಗಳಿಗೆ ವಿವಿಧ ನೆಲೆಗಟ್ಟಿನಲ್ಲಿ ಶುಲ್ಕ ವಿಧಿಸುವುದಕ್ಕೆ ಬ್ಯಾಂಕುಗಳು ಮುಂದಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಹಣದ ಠೇವಣಿ ಮತ್ತು ಹಿಂಪಡೆತವನ್ನೊಳಗೊಂಡಂತೆ ನಾಲ್ಕು ಬಾರಿಯ ಉಚಿತ ವ್ಯವಹಾರಗಳಿಗೆ ಮೀರಿದ ಹಣಕಾಸು ವ್ಯವಹಾರಗಳಿಗೆ ಪ್ರತಿ ಬಾರಿಯೂ ನಿರ್ದಿಷ್ಟ ಮೊತ್ತದ ಶುಲ್ಕ ವಿಧಿಸುವ, ಉಳಿತಾಯ ಖಾತೆಯಲ್ಲಿ ಪೂರ್ವನಿರ್ಧಾರಿತ ಕನಿಷ್ಠತಮ ಶಿಲ್ಕು ಉಳಿಸದಿದ್ದಲ್ಲಿ ಅದಕ್ಕೆ ದಂಡ ವಿಧಿಸುವ, ಶಾಖೆಯಲ್ಲಿ ದಿನವೊಂದಕ್ಕೆ ನಿಗದಿತ ಮಿತಿಗಿಂತ ಹೆಚ್ಚಿನ ಠೇವಣಿ/ಹಿಂಪಡೆತವಾದಲ್ಲಿ ವಿವಿಧ ಸ್ತರದಲ್ಲಿ ಶುಲ್ಕ ವಿಧಿಸುವ ಕ್ರಮಗಳಿಗೆ ಬ್ಯಾಂಕುಗಳು ಮುಂದಾಗಿವೆ. ಈ ವಿಷಯದಲ್ಲಿ ದೇಶದ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳು ತಮ್ಮದೇ ಆದ ನಿಯಮವನ್ನು ಅನುಸರಿಸುತ್ತಿವೆ, ವಿಧಿಸಲಾಗುವ ವೆಚ್ಚಗಳ ಸ್ವರೂಪವೂ ವಿಭಿನ್ನವಾಗಿದೆ ಎಂಬುದಿಲ್ಲಿ ಗಮನಿಸಬೇಕಾದ ಸಂಗತಿ. ಈ ಎಲ್ಲ ಕ್ರಮಗಳು ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ಸದಾಶಯಕ್ಕೆ ದುಬಾರಿಯಾಗಿ ಪರಿಣಮಿಸಲಿದೆಯೇ ಎಂಬುದು ಈಗ ಚರ್ಚೆಯಲ್ಲಿರುವ ವಿಷಯ. ಇದಕ್ಕೆ ಕಾರಣವೂ ಇಲ್ಲದಿಲ್ಲ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶ್ರೀಸಾಮಾನ್ಯರನ್ನು ಬ್ಯಾಂಕಿಂಗ್ ವ್ಯವಹಾರಗಳೆಡೆಗೆ ಸೆಳೆಯುವುದೇ ಈಗಲೂ ದುಸ್ತರವಾಗಿದೆ. ಹೀಗಾಗಿಯೇ ಜನಧನದಂಥ ಯೋಜನೆ ಬಂತು. ಹೀಗಿರುವಾಗ, ತಮ್ಮದೇ ದುಡ್ಡನ್ನು ಬ್ಯಾಂಕಲ್ಲಿ ಇರಿಸುವುದಕ್ಕೆ ಅಥವಾ ತೆಗೆಯುವುದಕ್ಕೂ ಶುಲ್ಕ ತೆರಬೇಕಾಗಿ ಬರುತ್ತದೆ ಎಂದಾದಲ್ಲಿ, ಇಂಥದೊಂದು ವ್ಯವಸ್ಥೆಯ ಮೇಲೆಯೇ ಅವರಲ್ಲಿ ಅನಾದರ ಬೆಳೆಯುವುದಿಲ್ಲವೇ? ಯಾವ ವ್ಯವಹಾರ ಜನಸ್ನೇಹಿಯಾಗಬೇಕಿತ್ತೋ ಅದರಿಂದಲೇ ಜನಕ್ಕೆ ತೊಂದರೆಯಾಗುವುದು ಹಣಕಾಸು ವ್ಯವಹಾರಕ್ಕೆ ಒದಗುವ ಹಿನ್ನಡೆಯಲ್ಲವೇ? ಎಂಬ ಪ್ರಶ್ನೆಗಳಿಲ್ಲಿ ಉದ್ಭವಿಸುತ್ತವೆ. ಜತೆಗೆ ಇಂಥದೊಂದು ಕ್ರಮಕ್ಕೆ ಮುಂದಾಗಿರುವ ಬ್ಯಾಂಕುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್​ಗೆ ಹಿಡಿತವಿಲ್ಲ ಎಂದೂ ಸಾರ್ವಜನಿಕರು ಭಾವಿಸುವಂತಾಗುತ್ತದೆ. ನಗದುರಹಿತ ವ್ಯವಹಾರಗಳ ಪ್ರಮಾಣ ಹೆಚ್ಚಬೇಕು, ಡಿಜಿಟಲ್ ಬ್ಯಾಂಕಿಂಗ್ ಏರುಗತಿಯಲ್ಲಿ ಸಾಗಬೇಕು ಎಂಬ ಸದಾಶಯಗಳೇನೋ ಸರಿಯೇ. ಆದರೆ ವಿವೇಚನೆಯ ತಕ್ಕಡಿಯಲ್ಲಿ ಜನಸ್ನೇಹಿಯಲ್ಲದ ನಡೆಗಳ ಭಾರವೇ ಹೆಚ್ಚಾದಾಗ, ಅದು ಮೂಲ ಆಶಯಕ್ಕೇ ಸಂಚಕಾರ ತಂದೊಡ್ಡಬಹುದು. ಆದ್ದರಿಂದ ಕೇಂದ್ರ ಸರ್ಕಾರ ಮತ್ತು ಆರ್​ಬಿಐ ಈಗಲೇ ಎಚ್ಚೆತ್ತುಕೊಂಡು ಈ ನಿಟ್ಟಿನಲ್ಲಿ ಸಮರ್ಪಕ ಕ್ರಮಗಳಿಗೆ ಮುಂದಾಗಬೇಕಿದೆ.

Leave a Reply

Your email address will not be published. Required fields are marked *