ದತ್ತಮಾಲಾ ಅಭಿಯಾನಕ್ಕೆ ತೆರೆ

ಜಡಿ ಮಳೆಯಲ್ಲಿ ದತ್ತಪೀಠಕ್ಕೆ ಆಗಮಿಸಿದ ಸಹಸ್ರಾರು ಮಾಲಾಧಾರಿಗಳು

ಗುರು ದತ್ತಾತ್ರೇಯ ಜಯಂತಿಯನ್ನು ರಾಜ್ಯದ ಹಲವೆಡೆ ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಚಿಕ್ಕಮಗಳೂರಿನ ದತ್ತಪೀಠದಲ್ಲಿ ಸಹಸ್ರಾರು ದತ್ತ ಮಾಲಾಧಾರಿಗಳು ದತ್ತಪಾದುಕೆಗಳ ದರ್ಶನ ಪಡೆದರು. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲಗಾಣಗಾಪುರದಲ್ಲಿ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವರದಹಳ್ಳಿ ಶ್ರೀಧರ ಆಶ್ರಮದಲ್ಲಿ ಜಯಂತಿ ಪ್ರಯುಕ್ತ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು.

 ಚಿಕ್ಕಮಗಳೂರು: ದಟ್ಟ ಮಂಜು ಮುಸುಕಿದ ವಾತಾವರಣ, ಜಡಿ ಮಳೆ, ಚುಮು ಚುಮು ಚಳಿ ನಡುವೆ ತಾಲೂಕಿನ ದತ್ತಪೀಠದಲ್ಲಿ ಮಂಗಳ ವಾರ ವಿಎಚ್​ಪಿ, ಬಜರಂಗದಳ ಹಮ್ಮಿ ಕೊಂಡಿದ್ದ ದತ್ತಮಾಲಾ, ದತ್ತಜಯಂತಿ ಅಭಿಯಾನಕ್ಕೆ ವೈಭವದ ತೆರೆ ಬಿತ್ತು.

ಪೀಠದಲ್ಲಿ ದತ್ತಪಾದುಕೆಗಳ ದರ್ಶನಕ್ಕೆ ಬೆಳಗ್ಗೆ 6.30ರಿಂದ ಅವಕಾಶ ಕಲ್ಪಿಸಲಾಗಿತ್ತು. ಮಂಗಳೂರು, ಕಾರ್ಕಳ ಭಾಗದಿಂದ ಆಗಮಿಸಿದ್ದ ದತ್ತಮಾಲಾಧಾರಿ ಗಳು ಬೆಳಗಿನ ಜಾವ 4 ಗಂಟೆಯಲ್ಲಿಯೇ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ದತ್ತಪಾದುಕೆಗಳ ದರ್ಶನ ಪಡೆಯಲು ಸರತಿಯಲ್ಲಿ ನಿಂತಿದ್ದರು.

ಹೊನ್ನಮ್ಮನ ಹಳ್ಳದಲ್ಲಿ ಪವಿತ್ರ ಸ್ನಾನ ಮುಗಿಸಿದ ಮಾಲಾಧಾರಿಗಳು ತುಂತುರು ಮಳೆ ಹನಿಗಳಲ್ಲಿ ನೆನೆದು ಪೀಠಕ್ಕೆ ಆಗಮಿಸುತ್ತಿದ್ದುದು ಸಾಮಾನ್ಯ ವಾಗಿತ್ತು. ಸೋಮವಾರ ರಾತ್ರಿಯಿಂದಲೇ ಹೊರ ಜಿಲ್ಲೆಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಗರದಲ್ಲಿ ತಂಗಿದ್ದರು. ಮಂಗಳವಾರ ಬೆಳಗ್ಗೆ 6ರಿಂದ ಬೆಟ್ಟಕ್ಕೆ ಹೋಗಲು ಅವಕಾಶ ನೀಡಲಾಗಿತ್ತು.

ನಗರದ ಕಾಮಧೇನು ದೇವಾಲಯ ಪ್ರಧಾನ ಅರ್ಚಕ ರಘು ಅವಧಾನಿ ನೇತೃತ್ವದಲ್ಲಿ ನಡೆದ ದತ್ತಹೋಮ ಹಾಗೂ ಗಣಹೋಮ ಸೇರಿ ಪೂಜಾ ಕಾರ್ಯಕ್ರಮಗಳಲ್ಲಿ ದತ್ತ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಸಂಸದರು, ಶಾಸಕರು ಪೂರ್ಣಾಹುತಿಗೆ ಸಾಕ್ಷಿಯಾದರು.

ಶ್ರೀಧರಾಶ್ರಮದಲ್ಲಿ ದತ್ತ ಜಯಂತಿ

ಶಿವಮೊಗ್ಗ: ಶ್ರೀಧರ ಸ್ವಾಮಿಗಳ ತಪೋಭೂಮಿ ಹಾಗೂ ಮಹಾ ಸಮಾಧಿಯಾದ ವರದಹಳ್ಳಿಯ ಶ್ರೀಧರಾಶ್ರಮದಲ್ಲಿ ಮಂಗಳವಾರ ದತ್ತ ಜಯಂತಿ ಹಾಗೂ ಶ್ರೀಧರರ 108ನೇ ಜಯಂತಿ ಅಂಗವಾಗಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು. ಶ್ರೀ ದತ್ತ ಮಂತ್ರ ಹಾಗೂ ಶ್ರೀ ಗುರುಮಂತ್ರಗಳಿಂದ ಹವನ, ಗುರುಗಳ ಪಾದುಕೆಗೆ ಸಾಮೂಹಿಕ ಅಭಿಷೇಕ, ಸದ್ಗುರು ಸಮಾಧಿಗೆ ಶತರುದ್ರಾಭಿಷೇಕ, ಶ್ರೀಧರ ಸ್ವಾಮಿಗಳ ಜನ್ಮೋತ್ಸವ, ಪಾಲಕಿ ಉತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಸತ್ಯ ದತ್ತ ವ್ರತ ಮುಂತಾದ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು.

ತೀವ್ರ ತಪಾಸಣೆ

ಜಿಲ್ಲಾಡಳಿತ ಈ ಬಾರಿ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರಿಂದ ನಗರ ಹೊರವಲಯ, ಕೈಮರ ಚೆಕ್​ಪೋಸ್ಟ್​ಗಳಲ್ಲಿ ವಾಹನಗಳನ್ನು ತೀವ್ರ ತಪಾಸಣೆ ಮತ್ತು ಪ್ರತಿ ವಾಹನಕ್ಕೆ ಪ್ರತ್ಯೇಕ ನಂಬರ್ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ಪೀಠದಿಂದ ಹೊರಟ ಐಜಿಪಿ ಅರುಣ್ ಚಕ್ರವರ್ತಿ ಐದಾರು ತಾಸು ಟ್ರಾಫಿಕ್​ನಲ್ಲಿ ಸಿಲುಕಿಕೊಂಡರು.

ಪಾದಯಾತ್ರೆ

ಶಾಸಕರಾದ ಸಿ.ಟಿ.ರವಿ, ಸುನೀಲ್​ಕುಮಾರ್ ಸೇರಿ ದತ್ತಮಾಲಾಧಾರಿಗಳು ಹೊನ್ನಮ್ಮನಹಳ್ಳದವರೆಗೆ ವಾಹನಗಳಲ್ಲಿ ಹೋಗಿ, ಹೊನ್ನಮ್ಮನಹಳ್ಳದಲ್ಲಿ ಸ್ನಾನ ಮುಗಿಸಿದ ನಂತರ ದತ್ತಪೀಠದವರೆಗೆ ಪಾದಯಾತ್ರೆಯಲ್ಲಿ ತೆರಳಿ ದತ್ತಪಾದುಕೆಗಳ ದರ್ಶನ ಪಡೆದರು.

 ರಾಜ್ಯ ಸರ್ಕಾರ ಮಾತುಕತೆ ಮೂಲಕ ವಿವಾದವನ್ನು ಸೌಹಾರ್ದಯುತ ವಾಗಿ ಇತ್ಯರ್ಥಪಡಿಸಿ ಹಿಂದುಗಳಿಗೆ ದತ್ತಪೀಠವನ್ನು ಒಪ್ಪಿಸಬೇಕು.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

 

ದೇವಲಗಾಣಗಾಪುರದಲ್ಲಿ ತೊಟ್ಟಿಲೋತ್ಸವ

ದೇವಲಗಾಣಗಾಪುರ(ಕಲಬುರಗಿ): ಅಫಜಲಪುರ ತಾಲೂಕಿನ ದೇವಲಗಾಣಗಾಪುರದಲ್ಲಿ ಮಂಗಳವಾರ ತ್ರಿಮೂರ್ತಿ ರೂಪ ದತ್ತಾತ್ರೇಯನ ಜಯಂತಿ ಅಸಂಖ್ಯ ಭಕ್ತರ ಜೈಘೊಷಗಳ ಮಧ್ಯೆ ನೆರವೇರಿತು. ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ದತ್ತನ ತೊಟ್ಟಿಲು ಸೇವೆ ಸಲ್ಲಿಸಿ ಕೃತಾರ್ಥರಾದರು. ಮಂಗಳವಾರ ಬೆಳಗಿನ ಜಾವ 2ಕ್ಕೆ ಕಾಕಡಾರತಿ, ವಿಶೇಷ ಪೂಜೆ, ಭಜನೆ, ಮಂಗಳವಾರ ಮಧ್ಯಾಹ್ನ 12ಕ್ಕೆ ಶ್ರೀ ದತ್ತ ಮಹಾರಾಜರ ತೊಟ್ಟಿಲೋತ್ಸವ ನಡೆಯಿತು. ನಂತರ ಮಧುಕರಿ ಪ್ರಸಾದ ವಿತರಣೆ, ಸಂಜೆ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು. ಕಾರ್ಯದರ್ಶಿ ಮಹೇಶ ವಿ.ಭಟ್ಟ ಪೂಜಾರಿ, ನರೇಂದ್ರ ಭಟ್ಟ ಪೂಜಾರಿ, ಹೃಷಿಕೇಶ ಭಟ್ಟ ಪೂಜಾರಿ, ಕೃಷ್ಣ ಭಟ್ಟ ಪೂಜಾರಿ, ರವೀಂದ್ರ ಭಟ್ಟ, ರತ್ನಾಕರ ಭಟ್ಟ ಪೂಜಾರಿ ಮೊದಲಾದವರು ಜಯಂತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಬುಧವಾರ ಸಂಜೆ 5ಕ್ಕೆ ವೈಭವದ ರಥೋತ್ಸವ ನಡೆಯಲಿದೆ.

 

Leave a Reply

Your email address will not be published. Required fields are marked *