ದಕ್ಷತೆಯಿಂದ ಕಾರ್ಯ ನಿರ್ವಹಿಸಿ

ಹಾವೇರಿ: ಆಯೋಗದ ಮಾರ್ಗಸೂಚಿಯಂತೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ವ್ಯವಸ್ಥಿತ ಮತದಾನ ಪ್ರಕ್ರಿಯೆ ನಡೆಸಲು ನಿಯಮಾವಳಿಗಳನ್ನು ನಿಖರವಾಗಿ, ಸ್ಪಷ್ಟವಾಗಿ ತಿಳಿದುಕೊಳ್ಳುವಂತೆ ಮತದಾನ ಪ್ರಕ್ರಿಯೆಗೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿಗೆ ಕೇಂದ್ರ ಚುನಾವಣಾ ಸಾಮಾನ್ಯ ವೀಕ್ಷಕ ಡಾ. ಅಖ್ತರ್ ರಿಯಾಜ್ ಸೂಚಿಸಿದರು.

ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿ ಮತಗಟ್ಟೆ ಸಹಾಯಕರಿಗೆ ನಗರದ ಹುಕ್ಕೇರಿಮಠದ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಎರಡನೇ ಸುತ್ತಿನ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮತಕೇಂದ್ರ, ಮತಯಂತ್ರಗಳ ಸಿದ್ಧತೆ ಹಾಗೂ ಚುನಾವಣಾ ಕೈಪಿಡಿಯಂತೆ ವಿವಿಧ ಮತಗಟ್ಟೆ ಅಧಿಕಾರಿಗಳ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದ ಅವರು, ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆಯಾದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಿ ಎಂದರು.

ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಮತದಾನದ ಹಿಂದಿನ ದಿನ ಮಸ್ಟರಿಂಗ್ ಕೇಂದ್ರದಲ್ಲಿ ವಿತರಣೆಯಾಗುವ ಚುನಾವಣಾ ಸಾಮಗ್ರಿಗಳನ್ನು ಜವಾಬ್ದಾರಿ ಯುತವಾಗಿ ಪರಿಶೀಲಿಸಬೇಕು. ನಿಗದಿಪಡಿಸಿದ ಮತಗಟ್ಟೆ ಕೇಂದ್ರಗಳಿಗೆ ತೆರಳಿದ ನಂತರ ಅಂದು ಸಂಜೆಯೇ ಮತಗಟ್ಟೆ ಕೇಂದ್ರ ಸಿದ್ಧಪಡಿಸಿಕೊಳ್ಳಬೇಕು ಎಂದರು.

ಮತದಾನ ಆರಂಭವಾಗುವ ಒಂದು ಗಂಟೆ ಮುಂಚಿತವಾಗಿ ಬೆಳಗ್ಗೆ 6ಗಂಟೆಗೆ ಮೈಕ್ರೋಅಬ್ಜರವರ್ ಹಾಗೂ ವಿವಿಧ ಪಕ್ಷಗಳ ಮತಗಟ್ಟೆ ಏಜೆಂಟರ ಸಮ್ಮುಖದಲ್ಲಿ ಅಣುಕು ಮತದಾನ ನಡೆಸಿ ಅಭ್ಯರ್ಥಿವಾರು ಮತದಾನವಾಗಿರುವ ಕುರಿತಂತೆ ಎಣಿಕೆ ಮಾಡಿ ಸಹಿ ಪಡೆಯಬೇಕು. ನಂತರ ಮತಯಂತ್ರದಲ್ಲಿ ಅಣುಕು ಮತದಾನದ ಸಂಖ್ಯೆಗಳನ್ನು ತೆಗೆದುಹಾಕಿ ಹೊಸದಾಗಿ ಶೂನ್ಯದಿಂದ ವಾಸ್ತವ ಮತದಾನ ಪ್ರಕ್ರಿಯೆಯನ್ನು ಬೆಳಗ್ಗೆ 7ಗಂಟೆಯಿಂದ ಆರಂಭಿಸಬೇಕು ಎಂದರು.

ತಹಸೀಲ್ದಾರ್ ಎಚ್.ಸಿ. ಶಿವಕುಮಾರ, ತರಬೇತಿ ಅಧಿಕಾರಿಗಳು ಉಪಸ್ಥಿತರಿದ್ದರು.

ಚಾಲೆಂಜ್ಡ್ ವೋಟ್ …!

ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಗೂ, ಮತದಾನ ಮಾಡಲು ಬಂದಿರುವ ವ್ಯಕ್ತಿಗೂ ವ್ಯತ್ಯಾಸವಿದೆ ಎಂದು ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದಾಗ ವ್ಯಕ್ತಿ ನಕಲಿಯೋ ಅಥವಾ ಅಸಲಿಯೋ ಎಂದು ಮತಗಟ್ಟೆ ಅಧಿಕಾರಿ ಸಂಕ್ಷಿಪ್ತ ವಿಚಾರಣೆ ನಡೆಸಬೇಕು. ಮತ ಚಲಾಯಿಸಲು ಬಂದಿರುವ ವ್ಯಕ್ತಿ ನಕಲಿ ಎಂದು ಕಂಡುಬಂದರೆ ಪೊಲೀಸರಿಗೆ ಒಪ್ಪಿಸಬೇಕು. ನೈಜ ವ್ಯಕ್ತಿಯಾದರೆ ಮತದಾನ ಮಾಡಲು ಅವಕಾಶ ಕಲ್ಪಿಸಬೇಕು. ಈ ಪ್ರಕ್ರಿಯೆಯನ್ನು ಚಾಲೆಂಜ್ಡ್ ವೋಟ್ ಎಂದು ಕರೆಯಲಾಗುತ್ತದೆ. ಈ ಸೂಕ್ಷ್ಮ ಅರಿತು ಕಾರ್ಯ ನಿರ್ವಹಿಸಲು ಎನ್. ತಿಪ್ಪೇಸ್ವಾಮಿ ತಿಳಿಸಿದರು.

ಟೆಂಡರ್​ವೋಟ್ ಮಾಹಿತಿ

ಅಧಿಕೃತ ಮತದಾರರ ಬದಲಿಗೆ ಬೇರೊಬ್ಬರು ಮತ ಚಲಾಯಿಸಿದ ನಂತರ ಅಧಿಕೃತ ವ್ಯಕ್ತಿ ಮತದಾನ ಮಾಡಲು ಬಂದರೆ ಆ ವ್ಯಕ್ತಿಗೆ ಮತದಾನ ಮಾಡಲು ಅವಕಾಶ ನೀಡಬೇಕು. ಈ ಮತವನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಈ ಪ್ರಕ್ರಿಯೆಯನ್ನು ಟೆಂಡರ್​ವೋಟ್ ಎಂದು ಕರೆಯಲಾಗುತ್ತದೆ. ಎಚ್ಚರಿಕೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಇಲ್ಲವಾದರೆ ಮತಗಟ್ಟೆ ಅಧಿಕಾರಿಗಳು ಆಯೋಗದ ಕ್ರಮ ಎದುರಿಸಬೇಕಾಗುತ್ತದೆ.

Leave a Reply

Your email address will not be published. Required fields are marked *