ತ.ನಾಡು-ಕರ್ನಾಟಕ ಸಿಎಂ ಸಭೆ ಕರೆಯಿರಿ

ನವದೆಹಲಿ: ಮೇಕೆದಾಟು ಯೋಜನೆ ಬಗ್ಗೆ ರ್ಚಚಿಸಲು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಏರ್ಪಡಿಸುವಂತೆ ಕೇಂದ್ರ ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ, ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಮೇಕೆದಾಟು ಯೋಜನೆ ಬಗ್ಗೆ ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ಕೇಂದ್ರ ಜಲ ಆಯೋಗ ಕರ್ನಾಟಕಕ್ಕೆ ಸೂಚನೆ ನೀಡಿದ ದಿನದಿಂದ ತಮಿಳುನಾಡು ವಿರೋಧ ಮಾಡುತ್ತಿದೆ. ಈ ಯೋಜನೆಯಿಂದ ತಮಿಳುನಾಡಿಗೂ ಅನುಕೂಲವಿದೆ ಎಂಬ ವಾಸ್ತವದ ಬಗ್ಗೆ ವಿವರಣೆ ನೀಡಿದರೂ ಒಪ್ಪುತ್ತಿಲ್ಲ. ನೀವು ಅವರಿಗೆ ಕಿವಿಮಾತು ಹೇಳಬೇಕೆಂದು ಸಿಎಂ ಎಚ್.ಡಿ.ಕುಮಾರಸ್ವಾಮಿ, ಗಡ್ಕರಿ ಭೇಟಿ ವೇಳೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಈ ಸಮಸ್ಯೆಗಳನ್ನು ರಾಜ್ಯಗಳ ಪ್ರತಿನಿಧಿಗಳು ಕುಳಿತು ಮಾತುಕತೆ ಮೂಲಕ ಬಗೆಹರಿಸಬೇಕು ಎಂದು ಸಲಹೆ ನೀಡಿದರು. ಮಾತುಕತೆಗೆ ಆಹ್ವಾನ ನೀಡಿದರೂ ಅವರು ಒಪ್ಪುತ್ತಿಲ್ಲ. ನಾವು ಪತ್ರವನ್ನೂ ಬರೆದಿದ್ದೇವೆ ಎಂದು ಸಿಎಂ ವಿವರಿಸಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಉಭಯ ರಾಜ್ಯಗಳ ಸಭೆ ಕರೆದು ಅವರನ್ನು ಮನವೊಲಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಮಹದಾಯಿ ಐತೀರ್ಪಿನ ಅಧಿಸೂಚನೆ ಕುರಿತು ಕೇಂದ್ರ ಸಚಿವರ ಗಮನ ಸೆಳೆದಾಗ, ವಿವಾದ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಧಿಕರಣದಲ್ಲಿ ತೀರ್ಪಿನ ಸ್ಪಷ್ಟೀಕರಣ ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಹೀಗಾಗಿ ಸದ್ಯಕ್ಕೆ ಅಧಿಸೂಚನೆ ಪ್ರಕಟಿಸುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಗಡ್ಕರಿ ಸ್ಪಷ್ಟಪಡಿಸಿದರು. ರಾಜ್ಯದ ವಿವಿಧ ರಸ್ತೆ ನಿರ್ಮಾಣ ಯೋಜನೆಗಳ ಬಗ್ಗೆಯೂ ಗಡ್ಕರಿ ಅವರೊಂದಿಗೆ ಸಿಎಂ ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ರ್ಚಚಿಸಿ ಪ್ರಸ್ತಾವನೆ ಸಲ್ಲಿಸಿದರು.

ಗುರುವಾರ ಸಿಎಂ ಕುಮಾರಸ್ವಾಮಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಕಲ್ಲಿದ್ದಲು ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಲಿದ್ದಾರೆ. ಪ್ರಧಾನಿ ಮೋದಿ ಭೇಟಿಗೂ ಸಮಯ ಕೇಳಲಾಗಿದ್ದರೂ, ಪ್ರಧಾನಿ ಕಾರ್ಯಾಲಯದಿಂದ ಈವರೆಗೆ ಪ್ರತಿಕ್ರಿಯೆ ಬಂದಿಲ್ಲ.

ರಾಹುಲ್ ಭೇಟಿ?

ರಾಜ್ಯ ಸಚಿವ ಸಂಪುಟ ಬಿಕ್ಕಟ್ಟು ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಚರ್ಚೆ ನಡೆಸಬೇಕೆಂಬ ಉದ್ದೇಶ ಸಿಎಂ ಅವರಲ್ಲಿದ್ದರೂ, ಸಭೆ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಮೈತ್ರಿ ಮೂಲಕವೇ ಚುನಾವಣೆ ಎದುರಿಸುವುದೋ ಅಥವಾ ಪ್ರತ್ಯೇಕವಾಗಿ ಎದುರಿಸುವುದೋ ಎಂಬ ಬಗ್ಗೆ ಜೆಡಿಎಸ್ ನಾಯಕರ ಮಧ್ಯೆಯೇ ಗೊಂದಲವಿರುವುದರಿಂದ ಈ ಬಗ್ಗೆ ರಾಹುಲ್ ಜತೆಗೆ ರ್ಚಚಿಸಲು ಎಚ್ಡಿಕೆ ಮುಂದಾಗಿದ್ದಾರೆ.