ತ್ರಿವಳಿ ತಲಾಕ್ ರದ್ದತಿಯಿಂದ ಸಚಿವ ಜಮೀರ್ ಹತಾಶೆ

ರಾಣೆಬೆನ್ನೂರ: ನರೇಂದ್ರ ಮೋದಿ ತ್ರಿವಳಿ ತಲಾಕ್ ರದ್ದುಪಡಿಸಿದ್ದರಿಂದ ಜೀವನ ಪೂರ್ತಿ ಒಂದೇ ಹೆಣ್ಣಿನ ಮುಖ ನೋಡಬೇಕಲ್ಲ ಎನ್ನುವ ಕಾರಣಕ್ಕೆ ಹತಾಶರಾಗಿರುವ ಜಮೀರ್ ಅಹ್ಮದ್ ಮೋದಿ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ ಪೂಂಜಾ ವ್ಯಂಗ್ಯವಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಹೆಣ್ಣುಮಕ್ಕಳ ಪರ ಅನೇಕ ಯೋಜನೆ ಜಾರಿಗೊಳಿಸಿ ತ್ರಿವಳಿ ತಲಾಕ್ ರದ್ದುಪಡಿಸಿದ್ದಾರೆ. ಇದರಿಂದ ಮುಸ್ಲಿಮರು ಮೂರ್ನಾಲ್ಕು ಹೆಂಡತಿಯರನ್ನು ಮಾಡಿಕೊಳ್ಳುವುದು ತಪ್ಪಿದೆ. ಹೀಗಾಗಿ ಜಮೀರ್ ಅಹ್ಮದ್ ಮೋದಿ ಬಗ್ಗೆ ಮಾತನಾಡಲಾಗದೆ ಅವರ ಹೆಂಡತಿ ಕುರಿತು ಮಾತನಾಡುವಷ್ಟು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಚಿವ ಜಮೀರ್ ಅಹ್ಮದ್ ದೇಶದ ಪ್ರಧಾನಮಂತ್ರಿ ಕುರಿತು ಅವಹೇಳನವಾಗಿ ಮಾತನಾಡಿರುವುದು ಖಂಡನೀಯ. ಈ ಕುರಿತು ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಜಮೀರ್ ಅಹ್ಮದ್ ಹಾವೇರಿ ಜಿಲ್ಲೆ ಉಸ್ತುವಾರಿ ವಹಿಸಿಕೊಂಡ ಬಳಿಕ ಕೇರಳದಲ್ಲಿ ನಡೆಯುತ್ತಿದ್ದ ಭಯೋತ್ಪಾದನೆ ಕೃತ್ಯಗಳು ಇಲ್ಲಿಯೂ ನಡೆಯುತ್ತಿವೆ. ಬಸ್ ನಿಲ್ದಾಣದಲ್ಲಿ ನಿವೃತ್ತ ಯೋಧನ ಮೇಲಿನ ಹಲ್ಲೆ, ಪಾಕಿಸ್ತಾನ ಧ್ವಜ ಹಾರಿಸಿರುವುದು, ಗಣರಾಜ್ಯೋತ್ಸವ ದಿನದಂದು ಶಾಲಾ ಮಕ್ಕಳು ನಡೆಸುತ್ತಿದ್ದ ಮೆರವಣಿಗೆ ಯನ್ನು ಮುಸ್ಲಿಮರು ತಡೆದಿರುವ ಘಟನೆಗಳು ಇದಕ್ಕೆ ಸಾಕ್ಷಿಯಾಗಿವೆ. ಇಂಥ ಆತಂಕದ ಸ್ಥಿತಿಯಿಂದ ಜಿಲ್ಲೆಯನ್ನು ಮುಕ್ತಿಗೊಳಿಸಲು ಪ್ರತಿಯೊಬ್ಬರೂ ಬಿಜೆಪಿಗೆ ಬೆಂಬಲ ನೀಡಬೇಕು ಎಂದರು.

ಶಾಸಕ ಬಸವರಾಜ ಬೊಮ್ಮಾಯಿ, ಪಕ್ಷದ ಮುಖಂಡರಾದ ಪ್ರಕಾಶ ಬುರಡಿಕಟ್ಟಿ, ಚೋಳಪ್ಪ ಕಸವಾಳ, ರಾಮಣ್ಣ ಕೋಲಗಾರ, ನಾಗರಾಜ ಅಡ್ಮನಿ, ದೀಪಕ್ ಹರಪನಹಳ್ಳಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಜಮೀರ್ ಹುಚ್ಚಾಸ್ಪತ್ರೆಗೆ ಸೇರಿಕೊಳ್ಳಲಿ..: ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರ ಮಾನಸಿಕ ಸ್ಥಿತಿ ಸರಿಯಿಲ್ಲ. ಲೋಕಸಭೆ ಚುನಾವಣೆ ಅವರನ್ನು ಹತಾಶೆ ಮಾಡಿದೆ. ಮತದಾನ ದಿನ ಹತ್ತಿರ ಬಂದಂತೆ ಬುದ್ಧಿಯ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ನರೇಂದ್ರ ಮೋದಿಯವರ ಬಗ್ಗೆ ಜಮೀರ್ ಹೇಳಿಕೆ ನೀಡಿದ ಬಳಿಕ ನಾನು ಜಮೀರ್ ಅನ್ನುವ ಪದದ ಅರ್ಥ ಹುಡುಕಿದ್ದೇನೆ. ಜಮೀರ್ ಅಂದರೆ ಆತ್ಮ ಅಂತಃಕರಣ ಎಂದರ್ಥ ಎಂಬುದು ಗೊತ್ತಾಗಿದೆ. ಅಂದರೆ ಮಾನಸಿಕ ಸ್ಥಿತಿ ಅಧೋಗತಿಗೆ ತಲುಪಿದೆ ಎಂಬುದಾಗಿದೆ. ಆದ್ದರಿಂದ ಜಮೀರ್ ಅಹ್ಮದ್ ಮೊದಲು ಧಾರವಾಡದ ಹುಚ್ಚಾಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ಸಂಸದ ಶಿವಕುಮಾರ ಉದಾಸಿ ವ್ಯಂಗ್ಯವಾಡಿದರು

Leave a Reply

Your email address will not be published. Required fields are marked *