ತ್ರಿವಳಿ ತಲಾಕ್ ನಿಲ್ಲದಿದ್ದರೆ ಸರ್ಕಾರ ಮಧ್ಯಪ್ರವೇಶ

ಅಮರಾವತಿ: ತ್ರಿವಳಿ ತಲಾಕ್ ಪದ್ಧತಿಯನ್ನು ಇಸ್ಲಾಂ ಸಮುದಾಯ ನಿಲ್ಲಿಸದಿದ್ದರೆ ಸರ್ಕಾರವು ಸೂಕ್ತ ಕ್ರಮಗಳ ಮೂಲಕ ಅದನ್ನು ತಡೆಯಲು ಮಧ್ಯಪ್ರವೇಶಿಸಲಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಶನಿವಾರ ತಿಳಿಸಿದ್ದಾರೆ. ಮುಸ್ಲಿಂ ಸಮುದಾಯ ಅವರ ಒಳಿತಿಗಾಗಿ ತಲಾಕ್ ಪದ್ಧತಿಯನ್ನು ಕೈಬಿಡಬೇಕು, ಅದರ ಹೊರತಾಗಿ ಅವರು ತಲಾಕ್ ಮುಂದುವರಿಸಿದರೆ ಸರ್ಕಾರವು ತಲಾಕ್​ಗೆ ನಿಷೇಧ ಹೇರಲು ಅಗತ್ಯ ಕಾನೂನು ಜಾರಿಮಾಡಲಿದೆ ಎಂದಿದ್ದಾರೆ.

ತಲಾಕ್ ನಿಷೇಧ ವಿಚಾರ ಮತ್ತೊಬ್ಬರ ವೈಯಕ್ತಿಕ ವಿಚಾರದಲ್ಲಿ ಪ್ರವೇಶಿಸುವುದಲ್ಲ. ಅದರ ಬದಲಾಗಿ ಮಹಿಳೆಯರಿಗೆ ನ್ಯಾಯ ಒದಗಿಸುವುದಾಗಿದೆ. ಎಲ್ಲ ಮಹಿಳೆಯರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶ ನೀಡಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಹಿಂದು ಸಮುದಾಯದಲ್ಲೂ ಕೆಲ ಕೆಟ್ಟ ಆಚರಣೆಗಳು ಮತ್ತು ಪದ್ಧತಿಗಳಿದ್ದವು. ಬಾಲ್ಯ ವಿವಾಹ, ಸತಿ ಮತ್ತು ವರದಕ್ಷಿಣೆಯಿಂದ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದರು. ಆದರೆ ಸರ್ಕಾರವು ಕಾನೂನಿನ ಮೂಲಕ ಅದನ್ನು ನಿಷೇಧಿಸಿತು. ಹಿಂದುಗಳು ಕೂಡ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದರು ಎಂದು ಅವರು ನೆನಪಿಸಿಕೊಂಡಿದ್ದಾರೆ.

– ಏಜೆನ್ಸೀಸ್

Leave a Reply

Your email address will not be published. Required fields are marked *