ತ್ಯಾಜ್ಯ ಗುಂಡಿಗಳಾಗಿವೆ ರಾಜಕಾಲುವೆ

ರಾಮನಗರ: ನಗರದ ರಾಜಕಾಲುವೆಗಳು ತ್ಯಾಜ್ಯದಿಂದ ತುಂಬಿದ್ದು, ರಸ್ತೆಯಲ್ಲಿ ಕೊಳಚೆ ನೀರು ಹರಿಯುವ ಆತಂಕ ಎದುರಾಗಿದೆ.

ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಸಂಪರ್ಕವನ್ನು ನೇರವಾಗಿ ರಾಜಕಾಲುವೆಗೆ ನೀಡಲಾಗಿದೆ. ಅಲ್ಲದೆ ರಾಜಕಾಲುವೆಗೆ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ. ಅದರಲ್ಲೂ ಮಾಂಸದ ಅಂಗಡಿಗಳು, ಹೊಟೇಲ್​ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳೇ ಹೆಚ್ಚಿವೆೆ. ಇದರಿಂದ ಕಲುಷಿತ ನೀರು ಹರಿಯಲು ತೊಡಕಾಗಿದೆ.

ಕಲುಷಿತ ನೀರು ಕಾಲುವೆಯಿಂದ ರಸ್ತೆಗೆ ಹರಿಯುವುದರಿಂದ ಜನ ಮತ್ತು ವಾಹನ ಸಂಚಾರಕ್ಕೆ ತೊಡಕಾಗಲಿದೆ ಹಾಗೂ ಅಕ್ಕಪಕ್ಕದ ಅಂಗಡಿಗಳು, ರಸ್ತೆಯ ಅಂಚಿನಲ್ಲಿರುವ ಮನೆಗಳ ಆವರಣಕ್ಕೂ ನೀರು ನುಗ್ಗಲಿದೆ. ಅಲ್ಲದೆ ನೀರಿನ ವಿವಿಧ ಮೂಲಗಳಿಗೆ ಸೇರಿ ಕುಡಿಯುವ ನೀರು ಕಲುಷಿತಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಇದರಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ ಎನ್ನುತ್ತಾರೆ ಸ್ಥಳೀಯರು.

ಅರ್ಕಾವತಿ ಕಲುಷಿತ: ನಗರದ ರಾಜಕಾಲುವೆಯನ್ನು ಅರ್ಕಾವತಿ ನದಿಗೆ ಸಂರ್ಪಸಲಾಗಿದೆ. ಕಾಲುವೆ ಸೇರುವ ತ್ಯಾಜ್ಯ ನೇರವಾಗಿ ಅರ್ಕಾವತಿ ಒಡಲು ಸೇರಿ ನದಿ ಕೂಡ ಕಲುಷಿತವಾಗಲಿದೆ. ಈಗಾಗಲೇ ವಿವಿಧ ಕಾರಣಗಳಿಂದ ಕಲುಷಿತಗೊಂಡಿರುವ ಅರ್ಕಾವತಿ ಇನ್ನಷ್ಟು ಮಲಿನವಾಗುತ್ತಿದೆ. ನಗರದ ನತೆಗೆ ಅರ್ಕಾವತಿ ನದಿ ನೀರು ಪೂರೈಸುತ್ತಿರುವ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ನೀರಿನ ಅಭಾವದ ಸಮಸ್ಯೆ ಎದುರಾಗಲಿದೆ. ಒಂದು ವೇಳೆ ನದಿ ನೀರನ್ನೇ ಜನರಿಗೆ ಸರಬರಾಜು ಮಾಡಿದರೆ, ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟುಮಾಡುವ ಆತಂಕ ಎದುರಾಗಿದೆ.

ಪ್ರತಿನಿತ್ಯ ಸಮರ್ಪಕವಾಗಿ ಕಸ ಸಂಗ್ರಹಣೆ ಮಾಡುವಲ್ಲಿ ನಗರಸಭೆ ವಿಫಲವಾಗಿದೆ. ಜತೆಗೆ ಎಲ್ಲೆಂದರಲ್ಲಿ ಕಸ ಬಿಸಾಡುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಇದರಿಂದ ರಾಜಕಾಲುವೆ ಕೂಡ ತ್ಯಾಜ್ಯ ಸಂಗ್ರಹಿಸುವ ಗುಂಡಿಯಾಗುತ್ತಿದೆ. ಸಮರ್ಪಕ ಕಸ ಸಂಗ್ರಹ ಮತ್ತು ವಿಲೇವಾರಿಗೆ ನಗರಸಭೆ ಮುಂದಾಗಬೇಕು.

| ಎಸ್.ಗೋವಿಂದ, ರಾಮನಗರ

ನಗರಸಭೆ ವ್ಯಾಪ್ತಿಯ 25, 27ನೇ ವಾರ್ಡ್​ನಲ್ಲಿರುವ ರಾಜಕಾಲುವೆಯನ್ನು ಕೆಲ ತಿಂಗಳುಗಳ ಹಿಂದೆ ಸ್ವಚ್ಛಗೊಳಿಸಲಾಗಿತ್ತು. ಮಳೆಗಾಲ ಆರಂಭಕ್ಕೆ ಮುನ್ನ ಮತ್ತೊಮ್ಮೆ ಸ್ವಚ್ಛಗೊಳಿಸುವ ಜತೆಗೆ ರಾಜಕಾಲುವೆಯಲ್ಲಿ ತ್ಯಾಜ್ಯ ಎಸೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

| ಬಿ. ಶುಭಾ, ಆಯುಕ್ತರು, ನಗರಸಭೆ ರಾಮನಗರ

Leave a Reply

Your email address will not be published. Required fields are marked *