More

  ತ್ಯಾಜ್ಯದಿಂದ ಗೊಬ್ಬರ, ಕೂಡಿಬರುತ್ತಿದೆ ಕಾಲ

  ಹುಬ್ಬಳ್ಳಿ: ತ್ಯಾಜ್ಯದಿಂದ ಗೊಬ್ಬರ ತಯಾರಿಕೆಗೆ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಪ್ರತ್ಯೇಕವಾಗಿ ಘಟಕಗಳು ನಿರ್ಮಾಣ ಗೊಂಡಿದ್ದು, ಖಾಸಗಿಯವರಿಂದ ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಮಹಾನಗರ ಪಾಲಿಕೆ ಟೆಂಡರ್ ಕರೆದಿದೆ. ಇಲ್ಲಿ ಪಾಲಿಕೆಗೆ ಆದಾಯ ಸಿಗಬಹುದೇ ಎಂಬುದು ಕುತೂಹಲದ ಸಂಗತಿಯಾಗಿದೆ.

  ಕಾರ್ಯಾಚರಣೆ ಹಾಗೂ ನಿರ್ವಹಣೆಯ ಮಾದರಿಯ ಬಗ್ಗೆ ಆಸಕ್ತಿಯನ್ನು ಅಭಿವ್ಯಕ್ತಿ (ಇಒಐ-ಎಕ್ಸ್​ಪ್ರೆಶನ್ ಆಫ್ ಇಂಟರೆಸ್ಟ್) ಪಡಿಸುವಂತೆ (ಟೆಂಡರ್) ಪಾಲಿಕೆ ಕೋರಿದೆ. ಇಲ್ಲಿ ಖಾಸಗಿಯವರು ಅಭಿವ್ಯಕ್ತಿಪಡಿಸುವ ಮಾದರಿ ಎಂಥದ್ದು?

  ಪಾಲಿಕೆ ಸೃಷ್ಟಿಸಿರುವ ಮೂಲ ಸೌಕರ್ಯಗಳು ಹಾಗೂ ಅವಳಿ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಬಳಸಿಕೊಂಡು ಗೊಬ್ಬರ ಉತ್ಪಾದಿಸುವ ಖಾಸಗಿ ಕಂಪನಿಗಳಿಂದ ಪಾಲಿಕೆ ಏನು ಬಯಸುತ್ತದೆ? ಅವಳಿ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವು ವೈಜ್ಞಾನಿಕವಾಗಿ ವಿಲೇವಾರಿಯಾಗಬೇಕು ಎಂಬುದು ಪಾಲಿಕೆಯ ಮೊದಲ ಆದ್ಯತೆಯಾಗಿದೆ. ತ್ಯಾಜ್ಯದಿಂದ ಗೊಬ್ಬರ ಉತ್ಪಾದಿಸುವ ಕಂಪನಿಗಳು ಅವನ್ನು ಮಾರಾಟ ಮಾಡಿ ಆದಾಯ ಗಳಿಸಲಿವೆ. ಈ ಆದಾಯದಲ್ಲಿ ಪಾಲಿಕೆಗೆ ಪಾಲು ಸಿಗಬಹುದೇ? ಮೇಲಾಗಿ ನಿರ್ವಹಣಾ ವೆಚ್ಚ ನೀಡುವ ಮಾದರಿಯನ್ನು ಒಪ್ಪಿಕೊಳ್ಳುವ ಪರಿಸ್ಥಿತಿ ಪಾಲಿಕೆಗೆ ಬರಲಿದೆಯೇ?

  ಹುಬ್ಬಳ್ಳಿಯಲ್ಲಿ ನಿತ್ಯ 300 ಟನ್ ಹಾಗೂ ಧಾರವಾಡದಲ್ಲಿ 150 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಎರಡು ಕಡೆ ಇರುವ ಡಂಪಿಂಗ್ ಯಾರ್ಡ್​ನಲ್ಲಿ ಪ್ರತ್ಯೇಕವಾಗಿ ಎರೋಬಿಕ್ ವಿಂಡ್ರೋ ಕಂಪೋಸ್ಟಿಂಗ್ ಪ್ಲಾಂಟ್(ತ್ಯಾಜ್ಯದಿಂದ ಗೊಬ್ಬರ ತಯಾರಿಕಾ ಘಟಕ) ನಿರ್ವಿುಸಲಾಗಿದ್ದು, ಇದರ ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಪ್ರತ್ಯೇಕವಾಗಿಯೇ ಇಒಐ (ಟೆಂಡರ್) ಕರೆಯಲಾಗಿದೆ.

  ಆಸಕ್ತ ಕಂಪನಿಗಳು ಇಒಐ ಪ್ರಕಾರ ತ್ಯಾಜ್ಯದಿಂದ ಗೊಬ್ಬರ, ಆರ್​ಡಿಎಫ್ ಹಾಗೂ ಇತರೇ ಘನ ಉತ್ಪನ್ನಗಳ ತಯಾರಿಕೆ ಬಗ್ಗೆ ವಿವರಿಸಬೇಕು. ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ಬೇಕಾದ ಸಿಬ್ಬಂದಿ ಹಾಗೂ ಕಾರ್ವಿುಕರನ್ನು ಒದಗಿಸಬೇಕು. ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿಯಾಗಬೇಕು. ತ್ಯಾಜ್ಯದಿಂದ ಹೊರ ಹೋಗುವ ಲಿಚೆಟ್ ವಿಲೇವಾರಿ ಮಾದರಿಯನ್ನು ತಿಳಿಸಬೇಕು. ಕೊನೆಯಲ್ಲಿ ಉಳಿಯುವ ನಿಷ್ಕ್ರಿಯ ತ್ಯಾಜ್ಯವನ್ನು ಶಿವಳ್ಳಿ ಲ್ಯಾಂಡ್​ಫಿಲ್ ಸೈಟ್​ನಲ್ಲಿ ವೈಜ್ಞಾನಿಕವಾಗಿ ಡಂಪ್ ಮಾಡಬೇಕು. ಇನ್ನೂ ಕೆಲವು ಮಾರ್ಗಸೂಚಿ ಅಳವಡಿಸಲಾಗಿದೆ.

  ಎಫ್​ಸಿಒ ಅನ್ವಯ: ಅಗತ್ಯ ವಸ್ತುಗಳ ಕಾಯ್ದೆ-1955ರ ಪ್ರಕಾರ ರೈತರಿಗೆ ಗೊಬ್ಬರ ಮಾರಾಟ ಮಾಡುವಾಗ ಫರ್ಟಿಲೈಜರ್ ಕಂಟ್ರೋಲ್ ಆರ್ಡರ್ (ಎಫ್​ಸಿಒ) ಪಾಲಿಸಬೇಕಾಗುತ್ತದೆ. ಇದು ಗೊಬ್ಬರ ಗುಣಮಟ್ಟವನ್ನು ಸೂಚಿಸುವ ಮಾನದಂಡ. ಹು-ಧಾ ಅವಳಿ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರ ತಯಾರಿಸಿದ ಬಳಿಕ ಎಫ್​ಸಿಒ ಎಷ್ಟಿರುತ್ತದೆ ಎಂಬುದು ಮುಖ್ಯ. ಕಡಿಮೆಯಿದ್ದರೆ ಹೆಚ್ಚಿಗೆ ಮಾಡುವ ಮಾರ್ಗಗಳು ಇವೆ. ಆದರೆ, ಇದರಿಂದ ತಯಾರಿಕೆ ವೆಚ್ಚ ಹೆಚ್ಚಳವಾಗಲಿದೆ. ಛತ್ತೀಸಗಢ ರಾಜ್ಯದ ಅಂಬಿಕಾಪುರ ನಗರದಲ್ಲಿ ತ್ಯಾಜ್ಯದಿಂದ ಉತ್ಪಾದಿಸಿದ ಗೊಬ್ಬರಕ್ಕೆ ಭಾರಿ ಬೇಡಿಕೆಯಿದ್ದು, ಪ್ರತಿ ಕೆ.ಜಿ.ಗೆ 65 ರೂ. ನಂತೆ ರೈತರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಹು-ಧಾ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಎನ್​ಜಿಟಿ ಇಕ್ಕಳದಲ್ಲಿ: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್​ಜಿಟಿ) ಮಾರ್ಗಸೂಚಿಯಂತೆ ಅವಳಿ ನಗರದಲ್ಲಿ ಈಗಾಗಲೇ ನಿರ್ದಿಷ್ಟ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ, ಮಾರಾಟ ನಿಷೇಧಿಸಲಾಗಿದೆ. ಮುಂದಿನದು ಉತ್ಪತ್ತಿಯಾಗುವ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿಯ ಸರದಿ. ಅವಳಿ ನಗರದಲ್ಲಿನ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ ಪ್ರಸ್ತಾವನೆಯು ಎನ್​ಜಿಟಿ ಮಾರ್ಗಸೂಚಿಯನ್ವಯವೇ ಆಗಿದೆ. ಹಾಗಾಗಿ ಪಾಲಿಕೆ ಇಕ್ಕಳಕ್ಕೆ ಸಿಲುಕಿದೆ.

  ಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿ 11060 ಚದರ ಮೀಟರ್ ವಿಸ್ತೀರ್ಣದ ಎರೋಬಿಕ್ ವಿಂಡ್ರೋ ಕಂಪೋಸ್ಟಿಂಗ್ ಪ್ಲಾಂಟ್ ನಿರ್ವಣಗೊಂಡಿದೆ. 9 ಕೋಟಿ ರೂ. ವೆಚ್ಚದಲ್ಲಿ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ. ತಡೆರಹಿತ ವಿದ್ಯುತ್ ಪೂರೈಕೆಗೆ ಎಕ್ಸ್​ಪ್ರೆಸ್ ಮಾರ್ಗಕ್ಕೆ ಪಾಲಿಕೆ, ಹೆಸ್ಕಾಂಗೆ ಪ್ರಸ್ತಾವನೆ ಸಲ್ಲಿಸಿದೆ. ಧಾರವಾಡ ಘಟಕದ ಕಾಮಗಾರಿ ಪ್ರಗತಿಯಲ್ಲಿದೆ.

  ತ್ಯಾಜ್ಯದಿಂದ ಗೊಬ್ಬರ ತಯಾರಿಕೆಯ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಮಾದರಿಯ ಬಗ್ಗೆ ಖಾಸಗಿ ಕಂಪನಿಗಳಿಂದ ಆಸಕ್ತಿಯನ್ನು ಅಭಿವ್ಯಕ್ತಿ ಪಡಿಸುವಂತೆ ಕೋರಿದ್ದೆವು. ಇದಕ್ಕೆ ಜ. 10 ಕೊನೆಯ ದಿನವಾಗಿದೆ. ಪಾಲಿಕೆಗೆ ಯಾವ ಮಾದರಿ ಅನುಕೂಲಕರ ಎಂಬುದನ್ನು ಪರಾಮಶಿಸಿ ನಿರ್ಣಯ ಕೈಗೊಳ್ಳುತ್ತೇವೆ. ಪುಣೆಯ ಬಿವಿಜಿ ಹಾಗೂ ಅಬೆಲಾನ್ ಇಂಡಿಯಾ ಕಂಪನಿಗಳು ಮೌಖಿಕವಾಗಿ ಆಸಕ್ತಿ ವ್ಯಕ್ತಪಡಿಸಿದ್ದವು.
  | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತರು

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts