ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿಯ ಪ್ರಕೃತಿ ಆರಾಧನೆಯ ಮಳೆಗಾಲದ ಉತ್ಸವ, ತೊಟ್ಟಿಲ ಮಡುಜಾತ್ರೆ, ಅಷ್ಠ ತೀರ್ಥೋತ್ಸವ ಸೋಮವಾರ ವೈಭವದಿಂದ ನೆರವೇರಿತು.
ಮಕ್ಕಳಭಾಗ್ಯ ಅಪೇಕ್ಷಿತ ದಂಪತಿ ಹರಕೆ ಕಟ್ಟಿಕೊಂಡು ಸ್ವಾಮಿಯ ಪಾದುಕೆಯ ಹಿಂದೆ ಸಾಗಿ ಬಂದರೆ, ಸಹಸ್ರಾರು ಭಕ್ತರು ತೊಟ್ಟಿಲ ಮಡು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ರಾಜಮುಡಿ ಬ್ರಹ್ಮೋತ್ಸವದ ಆರನೇ ತಿರುನಾಳ್ ಅಂಗವಾಗಿ ನಡೆದ ಅಷ್ಠ ತೀರ್ಥೋತ್ಸವದ ಧಾರ್ಮಿಕ ಕೈಂಕರ್ಯಗಳು ಬೆಳಗ್ಗೆ 7 ಗಂಟೆಗೆ ಆರಂಭವಾದವು. ವೇದಾಂತ ದೇಶಿಕರ ಸನ್ನಿಧಿಗೆ ಸ್ವಾಮಿಯ ಪಾದುಕಾ ಪಲ್ಲಕ್ಕಿಯ ಉತ್ಸವ ನಡೆದ ನಂತರ 9ಗಂಟೆಗೆ ವಜ್ರಖಚಿತ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರ ಉತ್ಸವ ಕಲ್ಯಾಣಿಗೆ ನೆರವೇರಿತು.
ನಂತರ ಗಜೇಂದ್ರ ವರದನ ಸನ್ನಿಧಿಯ ಮುಂಭಾಗದಲ್ಲಿ ವೇದಘೋಷದೊಂದಿಗೆ ಸ್ವಾಮಿಯ ಪಾದುಕೆಗೆ ಅಭಿಷೇಕ ನೆರವೇರಿದ ನಂತರ ಅಷ್ಠ ತೀರ್ಥೋತ್ಸವದ ಕಾರ್ಯಕ್ರಮಗಳು ಆರಂಭವಾದವು. ಮಹಿಳೆಯರು ಮಡಿಲು ತುಂಬಿಕೊಂಡು ಕಲ್ಯಾಣಿಯಲ್ಲಿ ಸ್ನಾನ ಮಾಡಿದರು.
ಅರ್ಚಕ ಎಸ್.ನಾರಾಯಣಭಟ್ಟರ್ ಮತ್ತು ಯೋಗಾನಂದಭಟ್ಟರ್ ಕಲ್ಯಾಣಿಯಲ್ಲಿ ಅವಭೃತ ಚೂರ್ಣಿಕಾ ಮಂತ್ರಗಳೊಂದಿಗೆ ಸ್ವಾಮಿಯ ಪಾದುಕೆಗೆ ಕಲ್ಯಾಣಿಯಲ್ಲಿ ಪ್ರಥಮ ಅಭಿಷೇಕ ನೆರವೇರಿಸಿದರು.
ಬೆಳಗ್ಗೆ 10.30ಕ್ಕೆ ದೇವಾಲಯದಿಂದ ಪಲ್ಲಕ್ಕಿಯಲ್ಲಿ ಹೊರಟ ಸ್ವಾಮಿಯ ಸ್ವರ್ಣಪಾದುಕೆಗೆ ಚೆಲುವ ದೈವೀವನದ ಮಧ್ಯೆ ಇರುವ ವೇದಪುಷ್ಕರಣಿ, ಧನುಷ್ಕೋಟಿ, ಯಾದವಾತೀರ್ಥ, ದರ್ಭತೀರ್ಥ, ಪಲಾಶತೀರ್ಥ, ಪದ್ಮತೀರ್ಥ, ನರಸಿಂಹತೀರ್ಥ, ನಾರಾಯಣ ತೀರ್ಥಗಳಲ್ಲಿ ಅಭಿಷೇಕ ನೆರವೇರಿಸಲಾಯಿತು. ಸಂಜೆ 5.30ರ ವೇಳೆಗೆ ವೈಕುಂಠ ಗಂಗೆಯಲ್ಲಿ ಕೊನೆಯ ಅಭಿಷೇಕ ಮಾಡಲಾಯಿತು. ಪ್ರಕೃತಿಯ ಸುಂದರ ಪರಿಸರದ ಮಧ್ಯೆ ಇರುವ ವೈಕುಂಠ ಗಂಗೆ ತೊಟ್ಟಿಲ ಮಡು ಬಳಿ ಸಂಜೆ ನಡೆದ ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿದ್ದರು. ವಿಷ್ಣು ಸಹಸ್ರನಾಮ ಪಾರಾಯಣದೊಂದಿಗೆ ಸಾಗಿದ ಪಾದುಕೆ ಯೋಗಾನರಸಿಂಹನ ಬೆಟ್ಟದ ಗಿರಿ ಪ್ರದಕ್ಷಿಣೆಯೊಂದಿಗೆ ರಾತ್ರಿ 9ಕ್ಕೆ ದೇವಾಲಯ ತಲುಪಿ ಅಷ್ಠತೀರ್ಥೋತ್ಸವ ಮುಕ್ತಾಯವಾಯಿತು.
ಮೇಲುಕೋಟೆ ಗ್ರಾಮ ಪಂಚಾಯಿತಿಯಿಂದ ಅಗತ್ಯ ಸೌಕರ್ಯ ಕಲ್ಪಿಸಲಾಗಿತ್ತು. ಇನ್‌ಸ್ಪೆಕ್ಟರ್ ಸಿದ್ಧಪ್ಪ ಮಾರ್ಗದರ್ಶನದಲ್ಲಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ದೇವಾಲಯದ ಜೋಡೀದಾರ್ ಮನೆತನ ಹಾಗೂ ವಿವಿಧ ಜನಾಂಗದವರು ಕದಂಬ ಪ್ರಸಾದ ತಯಾರಿಸಿ ಭಕ್ತರಿಗೆ ವಿತರಿಸಿದರು.
ರಾಮಾನುಜರ ಸನ್ನಿಧಿಯ ಅರ್ಚಕ ವಿದ್ವಾನ್ ಬಿವಿ ಆನಂದಾಳ್ವಾರ್, ಸ್ಥಾನೀಕರಾದ ಶ್ರೀನಿವಾಸ ನರಸಿಂಹನ್ ಗುರೂಜಿ, ಮುಕುಂದನ್ ಕರಗಂರಾಮಪ್ರಿಯ, ವೇದಪಾರಾಯಣ ಕೈಂಕರ್ಯಪರರು, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ದೇವಾಲಯದ ಇಒ ಎನ್.ಎಸ್ ಶೀಲಾ, ಗ್ರಾಮ ಆಡಳಿತಾಧಿಕಾರಿ ರಮೇಶ್ ಭಾಗವಹಿಸಿದ್ದರು.