ತೆರೆಮೇಲೆ ಒಂದಾದ ಸಹೋದರರು

ಬೆಂಗಳೂರು: ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಅಭಿನಯದ ‘ಭರಾಟೆ’ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಕ್ಲೈಮ್ಯಾಕ್ಸ್ ಶೂಟಿಂಗ್​ನಲ್ಲಿ ಚಿತ್ರತಂಡ ಮಗ್ನವಾಗಿದೆ. ಆರಂಭದಿಂದಲೂ ಅತೀ ಹೆಚ್ಚು ವಿಲನ್​ಗಳಿರುವ ಸಿನಿಮಾ ಎಂಬ ಕಾರಣಕ್ಕೆ ‘ಭರಾಟೆ’ ಸುದ್ದಿಯಾಗಿತ್ತು. ಜತೆಗೆ ಸಹೋದರರಾದ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಮೊದಲ ಬಾರಿಗೆ ಒಟ್ಟಿಗೆ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಮತ್ತೊಂದು ವಿಶೇಷತೆಯಾಗಿತ್ತು. ಸದ್ಯ ಕ್ಲೈಮ್ಯಾಕ್ಸ್ ಶೂಟಿಂಗ್​ನಲ್ಲಿ ಮೂವರು ಸಹೋದರರು ಪಾಲ್ಗೊಂಡಿದ್ದು, ಅದರ ಫೋಟೋಗಳು ಹೊರಬಿದ್ದಿವೆ.

ಮೂವರು ಚಿತ್ರರಂಗದಲ್ಲಿ ಬಿಜಿ ಇರುವ ಕಲಾವಿದರು. ಆದರೂ, ಒಟ್ಟಿಗೆ ನಟಿಸಲು ಇದುವರೆಗೂ ಸಾಧ್ಯವಾಗಿರಲಿಲ್ಲ. ಈ ಹಿಂದೆ ‘ಮಾಸ್ಟರ್​ಪೀಸ್’ ಚಿತ್ರದಲ್ಲಿ ರವಿಶಂಕರ್-ಅಯ್ಯಪ್ಪ ಜತೆಯಾಗಿ ಕಾಣಿಸಿಕೊಂಡಿದ್ದರು. ಆದರೆ, ಅಲ್ಲಿ ಸಾಯಿಕುಮಾರ್ ಇರಲಿಲ್ಲ. ಒಟ್ಟಿಗೆ ನಟಿಸಬೇಕೆಂಬ ಸಹೋದರರ ಆಸೆ ‘ಭರಾಟೆ’ ಮೂಲಕ ಈಡೇರಿದೆ. ಕ್ಲೈಮ್ಯಾಕ್ಸ್ ಫೈಟ್​ಗಾಗಿಯೇ ನೆಲಮಂಗಲದ ಬಳಿ 60 ಲಕ್ಷ ರೂ. ವೆಚ್ಚದಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಎಂಟು ದಿನಗಳ ಚಿತ್ರೀಕರಣ ನಡೆಯಲಿದೆ. ಇನ್ನು, ಇದರ ಸಾಹಸ ಸಂಯೋಜನೆ ರವಿವರ್ಮ ಅವರದ್ದು. ಅದಕ್ಕಾಗಿ 80 ಜನ ಬಾಡಿ ಬಿಲ್ಡರ್​ಗಳು, 400 ಜೂನಿಯರ್ ಕಲಾವಿದರು ಈ ಫೈಟ್​ನಲ್ಲಿ ಪಾಲ್ಗೊಂಡಿದ್ದಾರೆ.

ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಜತೆಗೆ ಶರತ್ ಲೋಹಿತಾಶ್ವ, ‘ಉಗ್ರಂ’ ಮಂಜು, ದೀಪಕ್ ಶೆಟ್ಟಿ, ರಾಜ್ ವಾಡೆ, ಅವಿನಾಶ್, ಅಶ್ವತ್ಥ್ ‘ನೀನಾಸಂ’, ಮನಮೋಹನ್ ಖಳರಾಗಿ ಕಾಣಿಸಿಕೊಂಡಿದ್ದಾರೆ. ‘ಬಹದ್ದೂರ್’, ‘ಭರ್ಜರಿ’ ಸಿನಿಮಾಗಳ ನಂತರ ಚೇತನ್​ಕುಮಾರ್ ‘ಭರಾಟೆ’ಗೆ ಆಕ್ಷನ್-ಕಟ್ ಹೇಳುತ್ತಿದ್ದು, ಇದುವರೆಗೂ ಕಥೆಯ ಗುಟ್ಟನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಶ್ರೀಮುರಳಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದು, ಸುಪ್ರಿತ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.