ತೆರೆದ ಮ್ಯಾನ್​ಹೋಲ್​ಗಳಿವೆ ಎಚ್ಚರ..!

ಹುಬ್ಬಳ್ಳಿ: ತೆರೆದ ಮ್ಯಾನ್​ಹೋಲ್, ಹದಗೆಟ್ಟ ರಸ್ತೆಯಿಂದಾಗಿ ವಾಹನ ಸವಾರರು, ಪಾದಚಾರಿಗಳು ಅಪಘಾತಕ್ಕೀಡಾಗುವುದು ಅವಳಿ ನಗರದಲ್ಲಿ ಸಾಮಾನ್ಯ ಸಂಗತಿ ಎಂಬಂತಾಗಿದೆ.

ಇಂತಹ ರಸ್ತೆಗಳಲ್ಲಿ ನಿತ್ಯ ಮಹಾನಗರ ಪಾಲಿಕೆ ಅಧಿಕಾರಿಗಳು ಸುತ್ತಾಡುತ್ತಿದ್ದರೂ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕರು ಪಾಲಿಕೆ ಕಚೇರಿಗೆ ಕರೆ ಮಾಡಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.

ಕೆಲ ದಿನಗಳ ಹಿಂದೆ ಇಲ್ಲಿಯ ಭವಾನಿ ನಗರದ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದ ಹತ್ತಿರ ಒಂದು ಚೇಂಬರ್ ತೆರೆದುಕೊಂಡಿತ್ತು. ಸ್ಥಳೀಯರು ಪಾಲಿಕೆಗೆ ಕರೆ ಮಾಡಿ ತಿಳಿಸಿದ್ದರು. ಆದರೂ ಅಧಿಕಾರಿಗಳು ಸಕಾಲದಲ್ಲಿ ಬರದಿದ್ದುದರಿಂದ ತೆರೆದ ಮ್ಯಾನ್​ಹೋಲ್ ಹಾಗೆಯೇ ದುರ್ವಾಸನೆ ಸೂಸುತ್ತ ಇತ್ತು. ಅಲ್ಲಿ ಮ್ಯಾನ್​ಹೋಲ್ ತೆರೆದಿದೆ ಎಂದು ಸೂಚಿಸುವ ಯಾವುದೇ ವ್ಯವಸ್ಥೆ ಸಹ ಮಾಡಿರಲಿಲ್ಲ.

ಮೂರು ದಿನ ಹಿಂದೆ ರಾತ್ರಿ ಮನೆಗೆ ತೆರಳುತ್ತಿದ್ದ ಸುನೀಲ ಮಹೀಂದ್ರಕರ ಎಂಬವರು ಮ್ಯಾನ್​ಹೋಲ್ ಕಾಣದೇ ಬಿದ್ದು ಅಪಘಾತವಾಗಿದೆ. ಅವರ ಬಲಗೈ ಮೂಳೆ ಮುರಿದಿದ್ದು, ವೈದ್ಯಕೀಯ ಉಪಚಾರ ಪಡೆದುಕೊಂಡಿದ್ದಾರೆ. ಗುಣ ಮುಖವಾಗಲು ಇನ್ನೂ ಹಲವು ದಿನ ಬೇಕು. ಅನಿವಾರ್ಯವಾಗಿ ನೋವನ್ನು ನುಂಗಿ ಕೊಂಡು ತಮ್ಮ ಉದ್ಯೋಗ ಮಾಡಬೇಕಿದೆ. ಮೂಳೆ ಕೂಡಿದರೂ ಮನಸ್ಸಿಗಾದ ನೋವು ಹೋಗಲು ಸಾಧ್ಯವೇ ಎಂಬ ಅವರ ಪ್ರಶ್ನೆಗೆ ಉತ್ತರಿಸುವವರು ಯಾರು?

ಅಂತೂ ಪಾಲಿಕೆಯವರು ಶುಕ್ರವಾರ ಆ ಮ್ಯಾನ್​ಹೋಲ್ ಮುಚ್ಚಿದ್ದಾರೆ. ರಸ್ತೆ ಹೊಂಡಕ್ಕೆ ಮಣ್ಣು ಹಾಕಿದ್ದಾರೆ. ಈ ಕೆಲಸವನ್ನು ಸಕಾಲದಲ್ಲಿ ಮಾಡಿದ್ದರೆ ಮಹೀಂದ್ರಕರ ಅವರು ಸಂಕಷ್ಟಕ್ಕೀಡಾ ಗುವುದನ್ನು ತಪ್ಪಿಸಬಹುದಿತ್ತು.

ಇನ್ನೊಂದು ಬಾಕಿ ಇದೆ: ಭವಾನಿ ನಗರ ರಾಯರಮಠದ ಕೂಗಳತೆ ದೂರದಲ್ಲಿ ಮತ್ತೊಂದು ತೆರೆದ ಮ್ಯಾನ್​ಹೋಲ್ ಇದ್ದು, ಆತಂಕಕ್ಕೀಡು ಮಾಡಿದೆ. ಈ ಬಡಾವಣೆಯ ಮಕ್ಕಳು ನಿತ್ಯ ಈ ರಸ್ತೆಯಲ್ಲಿ ಆಟ ಆಡುವುದರಿಂದ ಪಾಲಕರು ಭೀತಿಯಲ್ಲಿಯೇ ಕಾಲ ಕಳೆಯುವಂತಾಗಿದೆ. ರಾತ್ರಿ ಸಮಯದಲ್ಲಂತೂ ಈ ತೆರೆದ ಮ್ಯಾನ್​ಹೋಲ್ ಮತ್ತಷ್ಟು ಅಪಾಯಕಾರಿ. ಶುಕ್ರವಾರ ರಾತ್ರಿವರೆಗೂ ತೆರೆದುಕೊಂಡೇ ಇರುವ ಮ್ಯಾನ್​ಹೋಲ್​ನಲ್ಲಿ ಮತ್ತೆ ಇನ್ನಾರಾದರೂ ಬಿದ್ದು ಗಾಯಗೊಂಡ ನಂತರವೇ ಪಾಲಿಕೆ ಅಧಿಕಾರಿಗಳಿಗೆ ಎಚ್ಚರ ಆಗುವುದೇ ಎಂದು ಸ್ಥಳೀಯರು ಖಾರವಾಗಿ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *