ತೆರಿಗೆ ವಸೂಲಿಗೆ ನಿರ್ಲಕ್ಷ್ಯ ಬೇಡ

ಮುಳಬಾಗಿಲು: ಪುರಸಭೆ ಮೇಲ್ದರ್ಜೆಗೇರಿದ್ದು, ಸಾರ್ವಜನಿಕರ ಅಗತ್ಯಕ್ಕೆ ತಕ್ಕಂತೆ ಸೌಲಭ್ಯ ನೀಡಬೇಕಿದೆ.

ಯಾವುದೇ ಕಾರಣಕ್ಕೂ ತೆರಿಗೆ ವಸೂಲಿ ಮಾಡದೆ ನಿರ್ಲಕ್ಷ್ಯ ತೋರಬೇಡಿ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆಗೆ ಶನಿವಾರ ದಿಢೀರ್ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದ ಅವರು, 2011-12ರವರೆಗೆ ಆಡಿಟ್ ಆಗಿದ್ದು,

2013ರಿಂದ ನಿರ್ಲಕ್ಷ್ಯ ತೋರಲಾಗಿದೆ, 2016ನೇ ಸಾಲಿನಲ್ಲಿ ಎಸ್​ಎಫ್​ಸಿ ಹಾಗೂ 14ನೇ ಹಣಕಾಸು ಯೋಜನೆಯ 2 ಕೋಟಿ ಹಣ ದುರುಪಯೋಗ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತನಿಖೆ ನಡೆಸಿ ವರದಿ ಸಲ್ಲಿಸಿ ಎಂದು ಸೂಚಿಸಿದರು.

2018-19ನೇ ಸಾಲಿನಲ್ಲಿ 2 ಕೋಟಿ ಅನುದಾನ ಬೇಡಿಕೆಯಿದ್ದು, ತೆರಿಗೆ ಸಂಗ್ರಹಣೆ ಮಾಡದೆ ನಗರಸಭೆ ನಡೆಸುವುದು ಸಾಧ್ಯವಿಲ್ಲ. ಕಾಯಂ ನೌಕರರು, ಹೊರಗುತ್ತಿಗೆ ನೌಕರರಿಗೆ ಸಂಬಳ ನೀಡಬೇಕಾದ ಜವಾಬ್ದಾರಿ ನಗರಸಭೆಯದ್ದೇ ಆಗಿದೆ, ಹೊರಗುತ್ತಿಗೆ ನೌಕರರಿಗೆ ಫೆಬ್ರವರಿಯಿಂದ ವೇತನ ನೀಡದಿದ್ದರೆ ಅವರು ಜೀವನ ಸಾಗಿಸುವುದು ಹೇಗೆ ? ಎಂದು ಪೌರಾಯುಕ್ತ ಎಸ್.ರಾಜು ಸೇರಿ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.

2011ರ ಜನಗಣತಿ ಪ್ರಕಾರ 56ಸಾವಿರ ಜನಸಂಖ್ಯೆಗೆ 30 ಕಾಯಂ, 53 ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುತ್ತೀರಿ, 700 ಜನಸಂಖ್ಯೆಗೆ ಒಬ್ಬ ಪೌರಕಾರ್ವಿುಕನನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಉಲ್ಲಂಘನೆಯಾಗಬಾರದೆಂದು ಎಚ್ಚರಿಸಿದರು.

ತಹಸೀಲ್ದರ್ ಬಿ.ಎನ್.ಪ್ರವೀಣ್, ಆರ್​ಒ ವಠಾರ್, ಲೆಕ್ಕಾಧಿಕಾರಿ ಬಿ.ಎನ್.ಅರ್ಚನಾ, ನೀರುಸರಬರಾಜು ವಿಭಾಗದ ಗೋವಿಂದಪ್ಪ ಇದ್ದರು.

ಇಷ್ಟು ಕಡಿಮೆ ಬಾಡಿಗೆ ಏಕೆ?: 2010ರಿಂದ ನಗರಸಭೆಯ ವಾಣಿಜ್ಯ ಮಳಿಗೆ ಬಾಡಿಗೆ ಬರುತ್ತಿಲ್ಲ. ಪ್ರತಿ ಅಂಗಡಿಗೆ 1200 ರೂಪಾಯಿ ಬಾಡಿಗೆ ಇದ್ದು, ಯಾರೂ ಕೊಡುತ್ತಿಲ್ಲ ಎಂದಾಗ ಡಿಸಿ ಆಶ್ಚರ್ಯ ವ್ಯಕ್ತಪಡಿಸಿದರು. ಅಲ್ಲದೇ ಇಷ್ಟು ಕಡಿಮೆ ಬಾಡಿಗೆ ಏಕೆ ಮುಂದುವರಿಸಿಕೊಂಡು ಹೋಗುತ್ತಿದ್ದೀರಿ, ಲೀಸ್ ಅವಧಿ ಮುಗಿದರೂ ಅವರನ್ನೇಕೆ ಇಟ್ಟುಕೊಂಡಿದ್ದೀರಿ, ನ್ಯಾಯಾಲಯದಲ್ಲಿ ಪ್ರಕರಣ ಅಫೀಲು ಹೋದರೂ ಸ್ಟೇ ಇಲ್ಲದ ಕಾರಣ ಇದರ ಬಗ್ಗೆ ನಗರಸಭೆ ಅಧಿಕಾರ ಚಲಾಯಿಸಬಹುದು. ಕೆಲ ಶಿಥಿಲ ಕಟ್ಟಡಗಳನ್ನು ತೆರವುಗೊಳಿಸಿ ಎಂದು ಆದೇಶಿಸಿದರು.

ಲೀಸ್ ಇರುವವರನ್ನ ಹೊರಹಾಕಿ: ತಾಪಂ ವಾಣಿಜ್ಯ ಕಟ್ಟಡಗಳಿಂದ 99 ಲಕ್ಷ ರೂಪಾಯಿ ತೆರಿಗೆ ಬಾಕಿ ಇದೆ ಎಂದು ಸಿಬ್ಬಂದಿ ತಿಳಿಸಿದಾಗ

ಇಒ ಡಾ.ಕೆ.ಸರ್ವೆಶ್ ಅವರನ್ನು ಮೊಬೈಲ್ ಮೂಲಕ ಸಂರ್ಪಸಿದ ಜಿಲ್ಲಾಧಿಕಾರಿ, ತೆರಿಗೆ ತಕ್ಷಣ ಕಟ್ಟಿ ಎಂದರು.

ವಾಣಿಜ್ಯ ಮಳಿಗೆ ಬಾಡಿಗೆ ವಸೂಲಿಯಾಗುತ್ತಿಲ್ಲ ಎಂದು ಇಒ ಪ್ರತಿಕ್ರಿಯಿಸಿದಾಗ, ಕಾನೂನು ಕ್ರಮ ತೆಗೆದುಕೊಂಡು ಲೀಸ್ ಇರುವವರನ್ನು ಹೊರಹಾಕಿ ಹೊಸ ಪ್ರಕ್ರಿಯೆ ನಡೆಸಿ ಎಂದು ಸೂಚಿಸಿದರು.

31ಕ್ಕೆ ಡೆಡ್ ಲೈನ್: ನಗರ ನೀರು ಸರಬರಾಜು ಯೋಜನೆಯಡಿ 27 ಕೋಟಿ ರೂಪಾಯಿ ವೆಚ್ಚದಲ್ಲಿ 82 ಕೊಳವೆಬಾವಿಯಲ್ಲಿ 59 ಕೊಳವೆಬಾವಿ ಕೊರೆಸಿದ್ದು, ನೀರು ಸರಬರಾಜು ಮಾಡುವ ಕಾಮಗಾರಿ ಕುಂಠಿತಗೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಸಿ, ನಗರ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಅವರನ್ನು ಸಂರ್ಪಸಿ ಕೊರೆಸಿರುವ 27 ಕೊಳವೆಬಾವಿಗಳಿಗೆ ತಕ್ಷಣ ಪಂಪುಮೋಟರ್ ಅಳವಡಿಸಿ ನಗರಸಭೆಗೆ ಹಸ್ತಾಂತರ ಮಾಡಿ ಎಂದರು.

ಈ ಸಂಬಂಧ ಸಬೂಬು ಹೇಳಬೇಡಿ. ಉಳಿದ ಕಾಮಗಾರಿ ಪ್ರಗತಿ ಮುಂದುವರಿಸಬೇಕು. ಇದಕ್ಕೆ ಮೇ 31 ಡೆಡ್ ಲೈನ್ ಎಂದು ಎಚ್ಚರಿಸಿದರು. ನಗರದಲ್ಲಿ 120 ಕೊಳವೆಬಾವಿಗಳಲ್ಲಿ ಅಲ್ಪಪ್ರಮಾಣದ ನೀರು ಸಿಗುತ್ತಿದ್ದು, 48 ಕೊಳವೆಬಾವಿಗಳು ಬತ್ತಿವೆ. ಪ್ರತಿದಿನ 2 ವಾರ್ಡ್​ಗಳಿಗೆ ನೀರು ಪೂರೈಸುತ್ತಿದ್ದರೆ 5 ದಿನಗಳಿಗೊಮ್ಮೆ ಉಳಿದ ವಾರ್ಡ್​ಗಳಲ್ಲಿ ನಲ್ಲಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. 4 ವಾರ್ಡ್​ಗಳಲ್ಲಿ ನೀರಿನ ಅಭಾವ ತೀವ್ರವಾಗಿದೆ, ನಗರಸಭೆಯ 4 ಟ್ಯಾಂಕರ್​ಗಳ ಮೂಲಕ ಪ್ರತಿದಿನ ನೀರು ಪೂರೈಕೆ ಮಾಡುತ್ತಿರುವುದಾಗಿ ಪೌರಾಯುಕ್ತ ಎಸ್.ರಾಜು ತಿಳಿಸಿದರು.

Leave a Reply

Your email address will not be published. Required fields are marked *