ತೆರಿಗೆ ಕಟ್ಟಿ, ಇಮ್ರಾನ್ ಮನವಿ: ಆಸ್ತಿ ಘೋಷಣಾ ಯೋಜನೆ 30ಕ್ಕೆ ಅಂತ್ಯ

ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ದಿನೇ ದಿನೆ ಕುಸಿಯುತ್ತಿದ್ದು, ಸಾರ್ವಜನಿಕರು ಸರಿಯಾಗಿ ತೆರಿಗೆ ಪಾವತಿಸುವಂತೆ ಪ್ರಧಾನಿ ಇಮ್ರಾನ್ ಖಾನ್ ಮನವಿ ಮಾಡಿದ್ದಾರೆ.

ಕಳೆದ ಮೇ 15ರಂದು ಪಾಕ್​ನಲ್ಲಿ ಆಸ್ತಿ ಘೋಷಣಾ ಯೋಜನೆಯನ್ನು ಆರಂಭಿಸಲಾಗಿತ್ತು. ಇದರಂತೆ 40 ದಿನಗಳೊಳಗಾಗಿ ಅಂದರೆ ಜೂ.30ರೊಳಗೆ ಬೇನಾಮಿ ಆಸ್ತಿಗಳ ಘೋಷಣೆ ಮಾಡಬೇಕು. ವಿದೇಶದಲ್ಲಿರುವ ಬೇನಾಮಿ ಆಸ್ತಿಗಳನ್ನೂ ಇದರ ಮೂಲಕ ಘೋಷಣೆ ಮಾಡಿ, ಇದಕ್ಕೆ ತೆರಿಗೆ ಕಟ್ಟಬೇಕೆಂದು ಮನವಿ ಮಾಡಿದ್ದರು.

ಆದರೆ ಇದಕ್ಕೆ ನಿರೀಕ್ಷಿತ ಪ್ರತಿಕ್ರಿಯೆಗಳು ಬಾರದ ಹಿನ್ನೆಲೆಯಲ್ಲಿ ಸೋಮವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಇಮ್ರಾನ್, ಪ್ರಜೆಗಳೆಲ್ಲರೂ ಆಸ್ತಿ ಘೋಷಣಾ ಯೋಜನೆಯ ಲಾಭವನ್ನು ಪಡೆದುಕೊಂಡು ತೆರಿಗೆ ಕಟ್ಟಬೇಕು ಎಂದು ಮನವಿ ಮಾಡಿದ್ದಾರೆ.

ಇಮ್ರಾನ್​ರ ಈ ಕ್ರಮವನ್ನು ಭಾರತದ ಪ್ರಧಾನಿ 2016ರಲ್ಲಿ ತೆಗೆದುಕೊಂಡ ಕ್ರಮಕ್ಕೆ ಹೋಲಿಕೆ ಮಾಡಲಾಗುತ್ತಿದೆ. ಮೋದಿ 2016ರಲ್ಲಿ 500, 1000 ರೂ. ನೋಟುಗಳ ಅಮಾನ್ಯೀಕರಣದ ಮೂಲಕ ಕಪು್ಪಹಣ ಹೊರತರಲು ಯತ್ನಿಸಿದ್ದರು.

ಪಾಕಿಸ್ತಾನದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ. ರೂಪಾಯಿ ಮೌಲ್ಯ ತೀವ್ರ ಕುಸಿತ ಕಂಡಿದ್ದು, ದಿನ ಬಳಕೆ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಹೀಗಾಗಿ ಸರ್ಕಾರ ತ್ವರಿತವಾಗಿ ಕ್ರಮಕೈಗೊಂಡು ಪರಿಸ್ಥಿತಿ ಹತೋಟಿಗೆ ತರುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಆಸ್ತಿ ಘೋಷಣಾ ಯೋಜನೆ ಜಾರಿಗೆ ತರಲಾಗಿತ್ತು. ಮಂಗಳವಾರ ಇಮ್ರಾನ್ ಸರ್ಕಾರದ ಮೊದಲ ಬಜೆಟ್ ಅಧಿವೇಶನ ಆರಂಭವಾಗಿದ್ದು, ಜನರ ಮೇಲೆ ಇನ್ನಷ್ಟು ತೆರಿಗೆ ಹೊರೆ ಹೊರಿಸುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *