ತೆರವಿಗೆ ಸುಪ್ರೀಂನಿಂದ ಐದೇ ತಿಂಗಳ ಗಡುವು

ಕಾರವಾರ:ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಯ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ಜಿಲ್ಲೆಯ 65 ಸಾವಿರ ಜನರಲ್ಲೀಗ ತೆರವಿನ ಭೀತಿ ಶುರುವಾಗಿದೆ.
ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿ ತಿರಸ್ಕೃತವಾದ ಅರ್ಜಿದಾರರ ಅತಿಕ್ರಮಣವನ್ನು ಜುಲೈ 24ರೊಳಗೆ ತೆರವು ಮಾಡಿ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿರುವುದು ಈ ಆತಂಕಕ್ಕೆ ಕಾರಣವಾಗಿದೆ. ಅತಿಕ್ರಮಣ ತೆರವಾಗಿರುವ ಬಗೆಗೆ ಸೆಟಲೈಟ್ ನಕಾಶೆಯನ್ನು ತೆಗೆದು ಸಲ್ಲಿಸುವಂತೆ ಸರ್ವೆ ಆಫ್ ಇಂಡಿಯಾಗೆ ಸುಪ್ರೀಂ ಆದೇಶಿಸಿದೆ.
ಕಾಯ್ದೆಯಡಿ ಜಿಲ್ಲೆಯಲ್ಲಿ ಒಟ್ಟು 87,640 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಪರಿಶಿಷ್ಟ ಪಂಗಡದ 3,569 ಅರ್ಜಿಗಳಿದ್ದವು. 1,331 ಪರಿಶಿಷ್ಟರಿಗೆ ಹಕ್ಕು ಪತ್ರ ನೀಡಲಾಗಿದೆ. ಸೂಕ್ತ ದಾಖಲೆಗಳಿಲ್ಲದ 2238 ಪರಿಶಿಷ್ಟ ಪಂಗಡದ ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ. ಸಲ್ಲಿಕೆಯಾಗಿದ್ದ ಇತರ ಪಾರಂಪರಿಕ ಅರಣ್ಯವಾಸಿಗಳ 80,683 ಅರ್ಜಿಗಳಲ್ಲಿ ಕೇವಲ 394 ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದೆ. 62,189 ಅರ್ಜಿಗಳನ್ನು ವಿವಿಧ ಹಂತಗಳಲ್ಲಿ ತಿರಸ್ಕರಿಸಲಾಗಿದೆ. 18100 ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. ಪರಿಶಿಷ್ಟರೂ ಸೇರಿ ಜಿಲ್ಲೆಯ ಒಟ್ಟಾರೆ 64,427 ಅರ್ಜಿದಾರರಿಗೆ ತೆರವಿನ ಆತಂಕ ಕಾಡಿದೆ.
ಸಮುದಾಯಕ್ಕೂ ಕುತ್ತು?: ಶಾಲೆ, ದೇವಸ್ಥಾನ, ಚರ್ಚ್, ಅಂಗನವಾಡಿ, ಸಭಾಭವನ ಸೇರಿ ಸಮುದಾಯಿಕ ಉದ್ದೇಶಗಳಿಗೆ ಅತಿಕ್ರಮಣ ಮಾಡಿ ಬಳಕೆ ಮಾಡುತ್ತಿರುವವರಿಗೆ ಹಕ್ಕು ನೀಡಲು ಅವಕಾಶವಿತ್ತು. ಸಮುದಾಯ ಹಕ್ಕಿನಡಿ ಸಲ್ಲಿಕೆಯಾಗಿದ್ದ 3,388 ಅರ್ಜಿಗಳ ಪೈಕಿ 1,127 ಅರ್ಜಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಸಮರ್ಪಕ ದಾಖಲೆ ಇಲ್ಲದ 2,261 ಅರ್ಜಿಗಳು ತಿರಸ್ಕೃತವಾಗಿದ್ದು, ಶಾಲೆ, ಅಂಗನವಾಡಿಗಳಂತಹ ಕಟ್ಟಡಗಳನ್ನೂ ತೆರವು ಮಾಡಲಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಯಾವ ತಾಲೂಕಿನಲ್ಲಿ ಎಷ್ಟು?: ಇತರೆ ಪಾರಂಪರಿಕ ಅರಣ್ಯವಾಸಿಗಳಿಂದ ಕಾರವಾರದಲ್ಲಿ 3177 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 2296 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅಂಕೋಲಾದಲ್ಲಿ 4969 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 3019 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಕುಮಟಾದಲ್ಲಿ 6204 ಅರ್ಜಿಗಳು ಸ್ವೀಕೃತವಾಗಿದ್ದು, 5674ತಿರಸ್ಕೃತವಾಗಿವೆ. ಹೊನ್ನಾವರದಲ್ಲಿ 12091 ಅರ್ಜಿಗಳು ಸ್ವೀಕೃತವಾಗಿದ್ದು, 9223 ತಿರಸ್ಕೃತವಾಗಿವೆ. ಭಟ್ಕಳದಲ್ಲಿ 7657 ಅರ್ಜಿಗಳು ಸಲ್ಲಿಕೆಯಾಗಿದ್ದು, 6014 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಶಿರಸಿಯಲ್ಲಿ 14718 ಅರ್ಜಿಗಳನ್ನು ಪಡೆಯಲಾಗಿದ್ದು, 13155 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸಿದ್ದಾಪುರದಲ್ಲಿ 105030 ಅರ್ಜಿಗಳನ್ನು ಪಡೆಯಲಾಗಿದ್ದು, 9616 ತಿರಸ್ಕೃತವಾಗಿವೆ. ಯಲ್ಲಾಪುರದಲ್ಲಿ 8209 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 5167 ಅರ್ಜಿಗಳು ತಿರಸ್ಕಾರವಾಗಿವೆ. ಮುಂಡಗೋಡಿನಲ್ಲಿ 6210 ಅರ್ಜಿಗಳನ್ನು ಪಡೆಯಲಾಗಿದ್ದು, 3209 ತಿರಸ್ಕೃತವಾಗಿವೆ. ಹಳಿಯಾಳದಲ್ಲಿ 3212 ಅರ್ಜಿಗಳನ್ನು ಪಡೆಯಲಾಗಿದ್ದು, 1983 ಅರ್ಜಿಗಳು ತಿರಸ್ಕೃತವಾಗಿವೆ. ಜೊಯಿಡಾದಲ್ಲಿ ಪಡೆಯಲಾದ 3706 ಅರ್ಜಿಗಳ ಪೈಕಿ 2860 ಅರ್ಜಿಗಳು ತಿರಸ್ಕೃತವಾಗಿವೆ.
ಪರ್ಯಾಯವೇನು? : ಜಿಲ್ಲೆಯಲ್ಲಿ ಸಲ್ಲಿಕೆಯಾಗಿದ್ದ ಒಟ್ಟು ಅರ್ಜಿಗಳ ಪೈಕಿ 11006 ಅರ್ಜಿಗಳು ಗ್ರಾಮ ಅರಣ್ಯ ಸಮಿತಿ ಮಟ್ಟದಲ್ಲಿ ಹಾಗೂ 51129 ಅರ್ಜಿಗಳು ಉಪವಿಭಾಗ ಮಟ್ಟದಲ್ಲಿ ತಿರಸ್ಕೃತವಾಗಿವೆ. ಗ್ರಾಮ ಮಟ್ಟದಲ್ಲಿ ತಿರಸ್ಕೃತವಾದ ಅರ್ಜಿಗಳಿಗೆ ಉಪವಿಭಾಗ ಮಟ್ಟದಲ್ಲಿ ಹಾಗೂ ಉಪವಿಭಾಗ ಮಟ್ಟದಲ್ಲಿ ತಿರಸ್ಕೃತವಾದ ಅರ್ಜಿಗಳಿಗೆ ಜಿಲ್ಲಾ ಮಟ್ಟದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು. ಮೇಲ್ಮನವಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಬೇಕು. ಆಗ ಸದ್ಯ ಬೀಸುವ ದೊಣ್ಣೆಯಿಂದ ಅತಿಕ್ರಮಣದಾರರು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎ.ರವೀಂದ್ರನಾಥ ನಾಯ್ಕ ಸಲಹೆ ನೀಡುತ್ತಾರೆ.
ಬಡವರೇ ಹೆಚ್ಚು: ಜಿಲ್ಲೆಯಲ್ಲಿ ಕೃಷಿ ಕೈಗೊಳ್ಳುವ ಉದ್ದೇಶಕ್ಕಿಂತ ಹೆಚ್ಚಾಗಿ ಮನೆ ಕಟ್ಟಿಕೊಳ್ಳುವ ಕಾರಣದಿಂದಲೇ ಅರಣ್ಯ ಅತಿಕ್ರಮಣ ಮಾಡಿಕೊಂಡವರ ಸಂಖ್ಯೆಯೇ ಅಧಿಕ ಪ್ರಮಾಣದಲ್ಲಿದೆ. ಕೃಷಿ ಮಾಡಿದವರೂ ಅರ್ಧ, ಒಂದು ಎಕರೆ ಮಾತ್ರ ಅರಣ್ಯ ಒತ್ತುವರಿ ಮಾಡಿಕೊಂಡಿದ್ದಾರೆ. ಅವರಲ್ಲಿ ಹಾಲಕ್ಕಿ ಒಕ್ಕಲಿಗರು, ಕರೆ ಒಕ್ಕಲಿಗರು, ಕುಣಬಿಗಳು, ಮರಾಠಿಗರು ಸೇರಿ ಬಡ ಅರಣ್ಯವಾಸಿ ಕುಟುಂಬಗಳೇ ಹೆಚ್ಚಿದ್ದಾರೆ.
ಸಿಸಿಎಫ್ ಕಚೇರಿಗೆ ಮುತ್ತಿಗೆ: ಅರಣ್ಯ ಹಕ್ಕು ಕಾಯ್ದೆ ಹಾಗೂ ಕೇಂದ್ರ, ರಾಜ್ಯ ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದಾಗ್ಯೂ ಜಿಲ್ಲೆಯ ಅರಣ್ಯಾಧಿಕಾರಿಗಳು ಅತಿಕ್ರಮಣದಾರರಿಗೆ ಪದೇಪದೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಫೆ. 23 ರಂದು ಶಿರಸಿ ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕೇಂದ್ರ ಬುಡಕಟ್ಟು ಮಂತ್ರಾಲಯ ಹಾಗೂ ರಾಜ್ಯ ಸರ್ಕಾರವು ಅರಣ್ಯ ಹಕ್ಕು ಕಾಯ್ದೆಯ ಅಡಿ ಹಕ್ಕಿಗೆ ಸಂಬಂಧಿಸಿ ಅರ್ಜಿ ಸಲ್ಲಿಸಿದಂತಹ ಅರಣ್ಯ ಅತಿಕ್ರಮಣದಾರರ ಅರ್ಜಿ ವಿಲೇವಾರಿ ಆಗುವವರೆಗೂ ಒಕ್ಕಲೆಬ್ಬಿಸ ಬಾರದೆಂದು ಸೂಚಿಸಿದೆ. ಆದರೆ, ಅಧಿಕಾರಿಗಳು ಅದಕ್ಕೆ ಬೆಲೆ ಕೊಡದೇ ಇರುವ ಹಿನ್ನೆಲೆಯಲ್ಲಿ ಸಿಸಿಎಫ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ತಿಳಿಸಿದ್ದಾರೆ.
2019ರ ಜನವರಿ ಅಂತ್ಯದವರೆಗೆ ಜಿಲ್ಲೆಯಲ್ಲಿ 5621 ಕುಟುಂಬವನ್ನು ಒಕ್ಕಲೆಬ್ಬಿಸಿ ಅತಿಕ್ರಮಣದಾರರಿಂದ 3159.35 ಹೆಕ್ಟೇರ್ ಪ್ರದೇಶವನ್ನು ವಶಪಡಿಸಿಕೊಂಡಿರುವುದಾಗಿ ಸರ್ಕಾರಕ್ಕೆ ಅರಣ್ಯ ಇಲಾಖೆ ವರದಿ ನೀಡಿದೆ. ಒಕ್ಕಲೆಬ್ಬಿಸಲಾಗಿದೆ ಎಂಬ ಅತಿಕ್ರಮಣದಾರರ ಹೆಸರು, ಒಕ್ಕಲೆಬ್ಬಿಸಿದ ದಿನಾಂಕ, ಪ್ರದೇಶದ ಮಾಹಿತಿ ನೀಡಲು ಆಗ್ರಹಿಸಲಾಗುವುದು ಎಂದಿದ್ದಾರೆ.
“ಅತಿಕ್ರಮಣದಾರರ ವಿರುದ್ಧದ ಸುಪ್ರೀಂ ಕೋರ್ಟ್ ಆದೇಶದಿಂದ ಉತ್ತರ ಕನ್ನಡದ ಬಹುಸಂಖ್ಯಾತ ಬಡ ಜನರು ನಿರಾಶ್ರಿತರಾಗುವ ಆತಂಕ ಎದುರಾಗಿದೆ. ಈ ಹಿನ್ನಡೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯೇ ಕಾರಣ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸುವ ಸಂದರ್ಭದಲ್ಲಿ ಅತಿಕ್ರಮಣದಾರರ ಸಮಸ್ಯೆ ಹಾಗೂ ಸಕ್ರಮಾತಿಯ ಅವಶ್ಯಕತೆಯ ಕುರಿತು ಮನವರಿಕೆ ಮಾಡಿಕೊಡಬಹುದಿತ್ತು. ಈ ಕಾರ್ಯದಲ್ಲಿ ಸರ್ಕಾರ ವಿಫಲವಾಗಿದೆ. ಏನೇ ಆದರೂ ನಾವು ಅತಿಕ್ರಮಣದಾರರ ಪರ ಹೋರಾಟ ಮುಂದುವರಿಸಲಿದ್ದೇವೆ.”
ಎ. ರವೀಂದ್ರನಾಥ ನಾಯ್ಕ ಉತ್ತರ ಕನ್ನಡ ಜಿಲ್ಲಾ ಅರಣ್ಯ ಹಕ್ಕು ಅತಿಕ್ರಮಣದಾರರ ಹೋರಾಟ ವೇದಿಕೆ ಅಧ್ಯಕ್ಷ