ತೂಬಿನಕೆರೆ ಶಾಲೆಯಲ್ಲಿ ಮಕ್ಕಳ ಸಂತೆ

ಮದ್ದೂರು: ಮಕ್ಕಳಲ್ಲಿನ ಕೌಶಲಾಭಿವೃದ್ಧಿ ಹೊರಹೊಮ್ಮಲು ಮಕ್ಕಳ ಸಂತೆಯಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಲಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಲರಾಮು ಅಭಿಪ್ರಾಯಪಟ್ಟರು.

ತಾಲೂಕಿನ ತೂಬಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಕರು ಹಾಗೂ ಪಾಲಕರು ಮಕ್ಕಳನ್ನು ಕೇವಲ ಪಠ್ಯ, ಪುಸ್ತಕಗಳಿಗಷ್ಟೇ ಸೀಮಿತಗೊಳಿಸಬೇಡಿ. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಮೌಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು. ಆ ಮೂಲಕ ಅವರಲ್ಲಿ ಇರುವ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ಸಂತೆಯಲ್ಲಿ ವಿದ್ಯಾರ್ಥಿಗಳು ತಾವೇ ಮನೆಯಲ್ಲಿ ಸಿದ್ಧಪಡಿಸಿದ ತಿಂಡಿ, ತಿನಿಸುಗಳನ್ನು ಮಾರಾಟ ಮಾಡಿದರು. ಶಿಕ್ಷಕರು ಹಾಗೂ ಪಾಲಕರು ವಸ್ತುಗಳನ್ನು ಖರೀದಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡಿದರು.

ಮುಖ್ಯಶಿಕ್ಷಕಿ ಭಾಗ್ಯಲಕ್ಷ್ಮೀ, ಶಿಕ್ಷಕರಾದ ಶೋಭಾರಾಣಿ, ಮಂಜುಳಾ, ಮುಖಂಡ ನಂಜುಂಡಸ್ವಾಮಿ, ಪಾಲಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.