ತುಮಕೂರು: ಮಹಾನಗರ ಪಾಲಿಕೆಯ 2ನೇ ಅವಧಿಗೂ ಕಾಂಗ್ರೆಸ್-ಜೆಡಿಎಸ್ ‘ಮೈತ್ರಿ’ ಅಧಿಕಾರ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಕಾಂಗ್ರೆಸ್‌ನ 13ನೇ ವಾರ್ಡ್ ಸದಸ್ಯೆ ಫರಿದಾಬೇಗಂ ನೂತನ ಮೇಯರ್ ಆಗುವುದು ನಿಶ್ಚಿತವೆನಿಸಿದೆ.
2ನೇ ಅವಧಿಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಜ.30ರಂದು ಚುನಾವಣೆ ನಡೆಯಲಿದ್ದು, ಮೇಯರ್ ಸ್ಥಾನ- ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಹುದ್ದೆ- ಬಿಸಿಎಂ (ಎ) ಮಹಿಳೆಗೆ ಮೀಸಲಾಗಿದೆ. 35 ಸದಸ್ಯ ಬಲವುಳ್ಳ ಪಾಲಿಕೆಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳಿಗೆ ಸ್ಪಷ್ಟಬಹುಮತ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಜೆಡಿಎಸ್-ಕಾಂಗ್ರೆಸ್ ‘ಮೈತ್ರಿ’ ಮಾಡಿಕೊಂಡು ಅಧಿಕಾರ ಹಿಡಿದಿದ್ದವು. ಮೊದಲ ಅವಧಿಗೆ ಮೇಯರ್ ಹುದ್ದೆಯನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿತ್ತು. ಅಂದು ಮುಂದಿನ ಅವಧಿಗೆ ಕಾಂಗ್ರೆಸ್‌ಗೆ ಅಧಿಕಾರ ಬಿಟ್ಟುಕೊಡಲು ಅಲಿಖಿತ ಒಪ್ಪಂದ ಸಹ ಮಾಡಿಕೊಳ್ಳಲಾಗಿತ್ತು.
ವಾಸು ಮನೆಯಲ್ಲೇ ಅಭ್ಯರ್ಥಿ ಅಖೈರು: ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕ, ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಎಸ್.ರಫೀಕ್ ಅಹ್ಮದ್ ನೇತೃತ್ವದಲ್ಲಿ ಸೋಮವಾರ ಶ್ರೀನಿವಾಸ್ ಮನೆಯಲ್ಲಿ ನಡೆದ ಉಭಯ ಪಕ್ಷಗಳ ಮಹತ್ವದ ಸಭೆಯಲ್ಲಿ ಮೇಯರ್ ಅಭ್ಯರ್ಥಿ ಹೆಸರನ್ನು ಅಖೈರುಗೊಳಿಸಲಾಯಿತು. ಕಾಂಗ್ರೆಸ್‌ನ ಫರಿದಾಬೇಗಂ ಹೆಸರನ್ನು ಮೇಯರ್ ಹುದ್ದೆಗೆ ಉಭಯಪಕ್ಷಗಳ ಮುಖಂಡರು ಸೂಚಿಸಿದ್ದು, ಎಲ್ಲ ಕಾರ್ಪೋರೇಟರ್‌ಗಳು ಸರ್ವಾನುಮತದಿಂದ ಒಪ್ಪಿಕೊಂಡರು.
ಜೆಡಿಎಸ್‌ಗೆ ಉಪಮೇಯರ್: ಉಪಮೇಯರ್ ಸ್ಥಾನವು ಬಿಸಿಎಂಎ ಮಹಿಳೆಗೆ ಮೀಸಲಿರುವುದರಿಂದ ಮುಸ್ಲಿಂ, ತಿಗಳ ಸಮುದಾಯದವರಿಗೆ ಅವಕಾಶವಿತ್ತು. ಜೆಡಿಎಸ್‌ನಲ್ಲಿ ಮೂವರು ಮಹಿಳೆಯರಿದ್ದು ಲಲಿತ ಹಾಲಿ ಮೇಯರ್ ಆಗಿರುವುದರಿಂದ ತಿಗಳ ಸಮುದಾಯದ ಶಶಿಕಲಾ ಹಾಗೂ ನಾಜಿಮಾಬಿಗೆ ಉಪಮೇಯರ್ ಪಟ್ಟ ಒಲಿಯಲಿದೆ. ಪಕ್ಷದ ಆಂತರಿಕ ಒಪ್ಪದಂತೆ ಮೊದಲ 6 ತಿಂಗಳು ಶಶಿಕಲಾ, ಇನ್ನುಳಿದ ಅವಧಿಗೆ ನಾಜಿಮಾಬಿಗೆ ಉಪಮೇಯರ್ ಪಟ್ಟ ನೀಡಲಾಗುವುದು.
ಬಿಜೆಪಿಯ ಆಪರೇಷನ್ ಭೀತಿ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೂಚನೆಯಂತೆ ಕಾಂಗ್ರೆಸ್‌ಗೆ ಅಧಿಕಾರ ಬಿಟ್ಟುಕೊಡಲು ಹಾಗೂ ಕಾಂಗ್ರೆಸ್ ಜತೆ ಮೈತ್ರಿ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಯಿತು. ವಾಸಣ್ಣ ಮನೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮಾಜಿ ಕಾರ್ಪೋರೇಟರ್ ಪ್ರೆಸ್ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.
ಹೊಸೂರು ಕಡೆ ಪ್ರವಾಸ : ಮೈತ್ರಿ ಖಚಿತಗೊಳ್ಳುತ್ತಿದ್ದಂತೆ ಕಾಂಗ್ರೆಸ್-10, ಜೆಡಿಎಸ್-10 ಹಾಗೂ ಇಬ್ಬರು ಪಕ್ಷೇತರು ಸೇರಿ ಒಟ್ಟು 22 ಪಾಲಿಕೆ ಸದಸ್ಯರು ‘ಕಪ್ಪಕಾಣಿಕೆ’ ಸ್ವೀಕರಿಸಿದ ಬಳಿಕ ತಮಿಳುನಾಡಿನ ಹೊಸೂರು ಕಡೆ ಒಂದೇ ಬಸ್‌ನಲ್ಲಿ ಸೋಮವಾರ ರಾತ್ರಿಯೇ ತೆರಳಿದರು. ಜ.30ರಂದು ಚುನಾವಣೆ ದಿನ ಬೆಳಗ್ಗೆ ಈ ತಂಡ ಒಗ್ಗಟ್ಟಾಗಿ ಪಾಲಿಕೆ ಬರಲಿದೆ. ಕಪ್ಪೆಜಿಗಿತ ತಪ್ಪಿಸಲು ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಹಾಗೂ ಮಾಜಿ ಶಾಸಕ ರಫೀಕ್ ಅಹ್ಮದ್ ಸಹ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಪತಿರಾಯಗೆ ಮುಖಭಂಗ : ವಸತಿ ಸಚಿವ ಸೋಮಣ್ಣ ಹಾಗೂ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಮೇಯರ್ ಹುದ್ದೆಗಿಟ್ಟಿಸಿಕೊಳ್ಳಲು ಯತ್ನಿಸಿದ್ದ ಬಿಜೆಪಿಯ ಕಾರ್ಪೋರೇಟರ್ ಅವರ ‘ಪತಿರಾಯ’ರೊಬ್ಬರಿಗೆ ಶಾಸಕ ಜ್ಯೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು ಅವರು ತಮ್ಮನ್ನು ಓವರ್‌ಟೇಕ್ ಮಾಡಿದ್ದಾರೆಂದು ಮುನಿಸಿಕೊಂಡು ಸುಮ್ಮನಾಗಿದ್ದು ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ. ಜೆಡಿಎಸ್‌ನ ಒಡಕಿನ ಲಾಭ ಪಡೆಯದೇ ಬಿಜೆಪಿ ಮೌನವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.