ನವಲಗುಂದ: ಕ್ಷೇತ್ರದಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಇದರಿಂದ ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳದಲ್ಲಿ ನೆರೆಹಾವಳಿ ಉಂಟಾಗಿ ರೈತರು ಸಮಸ್ಯೆ ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಎರಡೂ ಹಳ್ಳಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.

ನವಲಗುಂದ ವಿಧಾನಸಭೆ ಕ್ಷೇತ್ರದ ಗ್ರಾಮಗಳಾದ ಬ್ಯಾಹಟ್ಟಿ, ಕುಸುಗಲ್, ಯಮನೂರು, ಪಡೇಸೂರ, ಶಾನವಾಡ, ಹಾಲಕುಸುಗಲ್, ಬಳ್ಳೂರ, ಶಿರೂರ, ಗುಮ್ಮಗೋಳ, ಹನಸಿ, ಶಿರಕೋಳ ಗ್ರಾಮಗಳಲ್ಲಿ ಉಂಟಾದ ಬೆಳೆ, ಮನೆ ಹಾನಿ ಮತ್ತು ಹದಗೆಟ್ಟ ರಸ್ತೆ, ಸೇತುವೆಗಳನ್ನು ಸೋಮವಾರ ಪರಿಶೀಲಿಸಿ ಅವರು ಮಾತನಾಡಿದರು.
ನೀರಾವರಿ ಇಲಾಖೆಯಿಂದ ಮೊದಲ ಹಂತದಲ್ಲಿ ತುಪ್ಪರಿಹಳ್ಳದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈಗಾಗಲೇ 50 ಲಕ್ಷ ರೂ. ವೆಚ್ಚದಲ್ಲಿ ಡ್ರೋನ್ ಮೂಲಕ ಸರ್ವೆ ನಡೆಸಿದ್ದು, ಯೋಜನಾ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ತುಪ್ಪರಿಹಳ್ಳದಿಂದ ಪ್ರವಾಹ ಉಂಟಾಗದಂತೆ ನೋಡಿಕೊಂಡು ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಕೆಲ ಊರುಗಳಿಗೆ ಪ್ರವಾಹದ ನೀರು ನುಗ್ಗದಂತೆ ನೋಡಿಕೊಳ್ಳಲಾಗುವುದು. ಅದೇ ರೀತಿ ಬೆಣ್ಣಿಹಳ್ಳದ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗುತ್ತದೆ ಎಂದರು.
ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರವಾಹಕ್ಕೆ ತುತ್ತಾದ ಗುಡಿಸಾಗರ, ಬಸಾಪೂರ, ಕೊಂಗವಾಡ, ಅರಹಟ್ಟಿ, ಅಮರಗೋಳ ಗ್ರಾಮಗಳನ್ನು ಸ್ಥಳಾಂತರಿಸಲಾಗಿತ್ತು. ಈ ಬಾರಿ ಆಹೆಟ್ಟಿ ಗ್ರಾಮ ಸ್ಥಳಾಂತರ ಮಾಡುವ ಉದ್ದೇಶವಿದೆ. ಈಗಾಗಲೇ ಸ್ಥಳಾಂತರಗೊಳ್ಳುವ ಮನೆಗಳಿಗೆ 5 ಲಕ್ಷ ರೂ. ನೀಡಲಾಗುವುದು. ಮನೆ ನಿರ್ವಿುಸಿಕೊಂಡವರಿಗೆ ಮಾತ್ರ ಮೂರು ಹಂತದಲ್ಲಿ ಹಣ ನೀಡಲಾಗುತ್ತದೆ ಎಂದು ಶಾಸಕರು ಹೇಳಿದರು. ಜಿ.ಪಂ. ಸದಸ್ಯ ಎ.ಬಿ. ಹಿರೇಮಠ, ಬಿಜೆಪಿ ತಾಲೂಕಾಧ್ಯಕ್ಷ ಎಸ್.ಬಿ. ದಾನಪ್ಪಗೌಡ್ರ, ತಹಸೀಲ್ದಾರ್ ನವೀನ ಹುಲ್ಲೂರ, ಇದ್ದರು.
ಆಹೆಟ್ಟಿ ಬಳಿ ಪೇರಲ ತೋಟ, ಹನಸಿ, ಶಿರಕೋಳ ಬಳಿ ರಾಜ್ಯ ಹೆದ್ದಾರಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಯಮನೂರ ಮತ್ತು ಶಾನವಾಡ ಬಳಿ ಪ್ರವಾಹದಿಂದ ಹೆಸರು, ಹತ್ತಿ, ಶೇಂಗಾ, ಗೋವಿನ ಜೋಳ ಮತ್ತಿತರ ತೋಟಗಾರಿಕೆ ಬೆಳೆ ಹಾನಿಯಾಗಿದೆ. ತಾಲೂಕಿನಲ್ಲಿ 61 ಮನೆಗೆಳು ಕುಸಿದಿವೆ. ಮನೆ ಕುಸಿದು ಹಾನಿಗೊಳಗಾದವರ ಮಾಹಿತಿ ಪಡೆದು ತಕ್ಷಣ ಪರಿಹಾರ ನೀಡಬೇಕು ಎಂದು ತಹಸೀಲ್ದಾರ್ ನವೀನ ಹುಲ್ಲೂರ ಅವರಿಗೆ ಸೂಚಿಸಲಾಗಿದೆ.
| ಶಂಕರ ಪಾಟೀಲ ಮುನೇನಕೊಪ್ಪ ಶಾಸಕ, ಕರ್ನಾಟಕ ನಗರ ಮೂಲ ಸೌಕರ್ಯ ಹಾಗೂ ಹಣಕಾಸು ನಿಗಮ ಅಧ್ಯಕ್ಷ