ತುಂಗಾ ಚೆಕ್ ಡ್ಯಾಂಗೆ ವಿಷ ಬೆರಕೆ ಇಲ್ಲ

ಶಿವಮೊಗ್ಗ: ಹೊಸಹಳ್ಳಿ-ಮತ್ತೂರು ಸಮೀಪದ ತುಂಗಾನದಿಯ ಚೆಕ್ ಡ್ಯಾಂಗೆ ವಿಷ ಬೆರಕೆ ಮಾಡಿಲ್ಲ. ಬದಲಾಗಿ ನದಿ ದಡದಲ್ಲಿರುವ ಜಮೀನುಗಳಿಂದ ಕೃಷಿ ಚಟುವಟಿಕೆಗಳಿಗೆ ಬಳಸುವ ರಾಸಾಯನಿಕ ತ್ಯಾಜ್ಯಗಳು ನೀರಿಗೆ ಸೇರ್ಪಡೆಗೊಂಡಿದೆ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ದೃಢಪಡಿಸಿದೆ.

ಹೊಸಹಳ್ಳಿ ಮತ್ತು ಮತ್ತೂರು ಭಾಗದಲ್ಲಿ ಮಾತ್ರ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಮೀನುಗಳು ಮೃತಪಟ್ಟಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದರು. ಅಕ್ರಮವಾಗಿ ಮೀನು ಹಿಡಿಯುವವರು ನೀರಿಗೆ ವಿಷ ಬೆರಸಿದ್ದಾರೆಂಬ ಆರೋಪಗಳು ಕೇಳಿಬಂದಿದ್ದವು. ಆದರೆ ಇದಕ್ಕೆ ಭದ್ರಾವತಿಯ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ತೆರೆ ಎಳೆದಿದೆ. ಅಲ್ಲದೆ, ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿದ್ದ ಎಲ್ಲ ಗೊಂದಲ ಮತ್ತು ಆತಂಕಗಳು ದೂರ ಆಗುವಂತೆ ಮಾಡಿದೆ.

ತುಂಗಾ ನದಿ ಇಕ್ಕೆಲಗಳಲ್ಲಿ ಅಡಕೆ ತೋಟಗಳು ಮತ್ತು ಭತ್ತದ ಗದ್ದೆಗಳಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಬೆಳೆಗಳಿಗೆ ಸಿಂಪಡಿಸಿದ ರಾಸಾಯನಿಕ ಸೇರಿ ಇನ್ನಿತರೆ ತ್ಯಾಜ್ಯಗಳು ನದಿ ನೀರಿಗೆ ಸೇರ್ಪಡೆಗೊಂಡಿದೆ. ಇದರಿಂದ ನೀರಿನಲ್ಲಿದ್ದ ಆಮ್ಲಜನಕ ಅಂಶ ಕಡಿಮೆ ಆಗಿದ್ದು, ಉಸಿರಾಟದ ತೊಂದರೆಯಿಂದ ಮೀನುಗಳು ನೀರಿನಿಂದ ಹೊರಬಂದು ಮೃತಪಟ್ಟಿವೆ. ಕೃಷಿ ಚಟುವಟಿಕೆ ತ್ಯಾಜ್ಯವು ನೀರಿಗೆ ಮಿಶ್ರಣಗೊಂಡಾಗ ನೀರಿನಲ್ಲಿದ್ದ ಆಲ್ಗೆ ಅಂಶ ಕುಗ್ಗುತ್ತದೆ. ಇದರಿಂದ ಆಮ್ಲಜನಕ ಕೊರತೆ ಉಂಟಾಗಿ ಜಲಚರ ಜೀವಿಗಳು ಸಹಜವಾಗಿಯೇ ಮೃತಪಡುತ್ತವೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಇನ್ನೂ ಟ್ಯಾಂಕರ್ ನೀರು ಸರಬರಾಜು: ನೀರಿನಲ್ಲಿ ವಿಷ ಬೆರೆಸಿಲ್ಲ ಎಂಬ ಅಂಶ ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದ್ದರೂ ಕೃಷಿ ಚಟವಟಿಕೆಯ ತ್ಯಾಜ್ಯ ನೀರಿಗೆ ಸೇರಿ ಹಸಿರು ಬಣ್ಣಕ್ಕೆ ತಿರುಗಿದೆ. ಹೀಗಾಗಿ ಎರಡು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಯನ್ನು ತಾತ್ಕಾಲಿಕವಾಗಿ ಮುಂದುವರಿಸಲಾಗಿದೆ. ಹೊಸಹಳ್ಳಿ ವ್ಯಾಪ್ತಿಯ ಹೊಸಹಳ್ಳಿ, ಲಕ್ಷಿ್ಮೕಪುರ ತಾಂಡಾ, ಜಾಫರ್ ಕಾಲನಿ, ಹೊಸಕೊಪ್ಪ ಹಾಗೂ ಮತ್ತೂರು ಗ್ರಾಪಂ ವ್ಯಾಪ್ತಿಯ ಎರಡು ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಗಾಜನೂರು ಡ್ಯಾಂನಿಂದ ನದಿಗೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಬಳಕೆಗೆ ನದಿ ನೀರನ್ನೇ ಬಳಸುವಂತೆ ಸೂಚಿಸಲಾಗಿದೆ. ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಬಳಕೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಹೊಸಹಳ್ಳಿ ಗ್ರಾಪಂ ಪಿಡಿಒ ನಾಗರಾಜ್.

ಮಂಗಳೂರು, ದಾವಣಗೆರೆ ಲ್ಯಾಬ್​ಗೆ ಸ್ಯಾಂಪಲ್: ಹೊಸಹಳ್ಳಿ-ಮತ್ತೂರು ಚೆಕ್ ಡ್ಯಾಂನಲ್ಲಿದ್ದ ಸತ್ತ ಮೀನು ಮತ್ತು ನೀರಿನ ಮಾದರಿಗಳನ್ನು ಲ್ಯಾಬ್​ಗೆ ಕಳುಹಿಸಲಾಗಿತ್ತು. ಭದ್ರಾವತಿ ಲ್ಯಾಬ್​ನ ವರದಿ ವಿಷ ಬೆರೆಸಿಲ್ಲ ಎಂಬುದು ದೃಢವಾಗಿದೆ. ಮಂಗಳೂರಿಗೆ ಸತ್ತ ಮೀನಿನ ಮಾದರಿ ರವಾನಿಸಿದ್ದು, ಅಲ್ಲಿಂದ ವರದಿಗೆ ಕಾಯುತ್ತಿದ್ದೇವೆ. ಶುಕ್ರವಾರ ದಾವಣಗೆರೆಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿಗೆ ಎರಡೂ ಮಾದರಿ ರವಾನಿಸಿದ್ದು, ವರದಿ ಎದುರು ನೋಡುತ್ತಿದ್ದೇವೆ. ಆನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಎಸ್.ಷಡಕ್ಷರಿ.

ಚೆಕ್​ಡ್ಯಾಂಗೆ ಪೊಲೀಸ್ ಭದ್ರತೆ: ಚೆಕ್​ಡ್ಯಾಂನಲ್ಲಿ ಮೀನುಗಳ ಸಾವು ಹೆಚ್ಚುತ್ತಿದ್ದು, ವಿಷ ಬೆರಕೆ ಆರೋಪ ಕೇಳಿ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಭದ್ರತೆ ಕೈಗೊಂಡಿದೆ. ಚೆಕ್​ಡ್ಯಾಂಗೆ ತುಂಗಾನಗರ ಠಾಣಾ ವ್ಯಾಪ್ತಿಯ ಪೇದೆಯನ್ನು ಕರ್ತವ್ಯಕ್ಕೆ ನಿಯೋಜಿಸಿದೆ. ಈ ಹಿಂದೆ ಶನಿವಾರ ಮತ್ತು ಭಾನುವಾರ ಮಾತ್ರ ಪೇದೆ ನಿಯೋಜಿಸಲಾಗುತ್ತಿತ್ತು. ಆದರೆ ಘಟನೆ ನಂತರ ಪೇದೆಯೊಬ್ಬರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

Leave a Reply

Your email address will not be published. Required fields are marked *