Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ತೀರ್ಥದಿಂದ ವಿಷ ಮಾಯ

Thursday, 21.12.2017, 3:03 AM       No Comments

| ಮಹಾಬಲಮೂರ್ತಿ ಕೊಡ್ಲೆಕೆರೆ

ಈ ಆಧುನಿಕಯುಗದಲ್ಲೂ ಶ್ರದ್ಧೆಗೆ ತನ್ನದೇ ಆದ ಮಹತ್ವವಿದೆ. ಡಿ.ವಿ.ಜಿ.ಯವರು ಹೇಳಿದಂತೆ, ‘ಶ್ರದ್ಧೆಯೆಂದರೆ ನಂಬಿಕೆ; ಆದರೆ ಕುರುಡುನಂಬಿಕೆಯಲ್ಲ.’ ಅಂಥ ಶ್ರದ್ಧಾಕೇಂದ್ರವೊಂದರ ಕಿರು ಪರಿಚಯ ಇಲ್ಲಿದೆ.

ಮಲ್ಲನಗೌಡ ಪಾಟೀಲ ಉಗರಗೋಳ

ಹಾವು ಕಚ್ಚಿದಾಗ ಆಸ್ಪತ್ರೆಗೆ ಹೋದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದುಂಟು. ಆದರೆ ಇಲ್ಲಿನ ದೇವಸ್ಥಾನಕ್ಕೆ ಬಂದು ಮೂರೇ ಹನಿ ತೀರ್ಥ ಕುಡಿದರೂ ಪ್ರಾಣಾಪಾಯದಿಂದ ಪಾರಾಗಬಹುದು! ಇದು ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಶ್ರೀ ಶಾಂತಾದುರ್ಗಾ ದೇವಸ್ಥಾನದ ವೈಶಿಷ್ಟ್ಯ ಇದು ದೈವಭಕ್ತಿಯೋ ಅಥವಾ ಅಚ್ಚರಿಯೋ ಗೊತ್ತಿಲ್ಲ. ಒಟ್ಟಾರೆ ಸರ್ಪದೋಷ ನಿವಾರಿಸುವ ಮತ್ತು ಸರ್ಪದ ಕಡಿತಕ್ಕೆ ಒಳಗಾದವರನ್ನು ರಕ್ಷಿಸುವ ಭಕ್ತಿಮಂದಿರವಾಗಿ ಸ್ಥಾನ ಪಡೆದುಕೊಂಡಿದೆ. ಬೆಳಗಾವಿಯಷ್ಟೇ ಅಲ್ಲದೆ ಧಾರವಾಡ ಮತ್ತು ಗದಗ ಜಿಲ್ಲೆಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ.

ಈ ದೇವಸ್ಥಾನದ ಅರ್ಚಕರು ದತ್ತಾತ್ರೇಯ ರಾಮಚಂದ್ರ ದಳವಿ (ಶೆಣೈ). ಗೋವಾ ಮೂಲದವರು. ಈ ಹಿಂದೆ ಬ್ರಿಟಿಷರ ದಬ್ಬಾಳಿಕೆಯ ವೇಳೆ ದತ್ತಾತ್ರೇಯರ ಪೂರ್ವಜರು ಕುಟುಂಬಸಹಿತವಾಗಿ ಹಂಚಿನಾಳ ಗ್ರಾಮಕ್ಕೆ ಬಂದು ನೆಲೆಸಿದರು. ಅಲ್ಲಿಂದ ಬರುವಾಗ ಪೋಂಡಾ ಪಟ್ಟಣದ ಕವಳೆ ಗ್ರಾಮದಲ್ಲಿದ್ದ ಶಾಂತಾದುರ್ಗಾ ದೇವಸ್ಥಾನದ ದೈವಶಕ್ತಿಯನ್ನು ತಂದು, ಹಂಚಿನಾಳದಲ್ಲಿ ಪ್ರತಿಷ್ಠಾಪಿಸಿದರು. ಇದಕ್ಕೆ ಗದ್ದುಗೆ ನಿರ್ವಿುಸಿ, ಅದರ ಮೇಲೆ ಆದಿಶಕ್ತಿ ಶಾಂತಾದುರ್ಗೆಯ ಭಾವಚಿತ್ರವನ್ನು ಇಡಲಾಗಿದೆ. ಇದಕ್ಕೆ ಪ್ರತಿನಿತ್ಯ ಪೂಜೆ-ಪುನಸ್ಕಾರಗಳು ನೆರವೇರುತ್ತವೆ.

ಪೂಜೆಯ ವೇಳೆ ಬಳಸಿದ ನೀರನ್ನೇ ಭಕ್ತರಿಗೆ ತೀರ್ಥದ ರೂಪದಲ್ಲಿ ನೀಡಲಾಗುತ್ತಿದೆ. ಹಾವು ಕಡಿತಕ್ಕೊಳಗಾದವರು ಆದಿಶಕ್ತಿ ಶ್ರೀ ಶಾಂತಾದುರ್ಗಾ ದೇವಸ್ಥಾನಕ್ಕೆ ಬಂದು ಮೂರು ಬಾರಿ ತೀರ್ಥ ಕುಡಿದರೆ, ತಕ್ಷಣವೇ ವಿಷಕಾರಿ ಅಂಶ ಶರೀರದಿಂದ ಹೊರಹೋಗುತ್ತದೆ. ಹಾವಿನ ಕಡಿತಕ್ಕೆ ಒಳಗಾದವರು ಪ್ರಾಣಾಪಾಯದಿಂದ ಪಾರಾಗುತ್ತಾರೆ. ‘ಹೀಗೆ ತಿಂಗಳಿಗೆ ಎಂಟರಿಂದ ಹತ್ತು ಪ್ರಕರಣಗಳಾದರೂ ನಡೆಯುತ್ತಲೇ ಇರುತ್ತವೆ’ ಎನ್ನುತ್ತಾರೆ ಗ್ರಾಮಸ್ಥರು.

ಈ ದೇವಸ್ಥಾನದಲ್ಲಿ ದೈವೀಶಕ್ತಿ ಅಡಗಿದೆ. ಹಾಗಾಗಿಯೇ ಹಾವು ಕಡಿತಕ್ಕೊಳಗಾದವರು ಬರುತ್ತಾರೆ. ಇಲ್ಲಿನ ತೀರ್ಥವನ್ನು ಕುಡಿದು ಉಪಶಮನ ಹೊಂದಿದ್ದಾರೆ. ಹಾವು ಕಡಿತಕ್ಕೊಳಗಾಗಿ ಇಲ್ಲಿಗೆ ಬಂದವರಲ್ಲಿ ಒಬ್ಬರೂ ಮೃತಪಟ್ಟಿಲ್ಲ.

| ದತ್ತಾತ್ರೇಯ ಶೆಣೈ ಅರ್ಚಕ

ನನ್ನ ಮಗಳು ಡಿಪ್ಲೊಮಾ ಪರೀಕ್ಷೆಯೊಂದರಲ್ಲಿ ಒಂದು ವಿಷಯ ಪಾಸಾಗುವುದಕ್ಕೆ ಸಾಹಸಪಡುತ್ತಿದ್ದಾಳೆ. ಓದುತ್ತಾಳಾದರೂ ಯಾಕೋ ನೆನಪು ಕೈಕೊಡುತ್ತಿದೆ. ಇದೇ ಸಮಸ್ಯೆಯಿಂದಾಗಿ ಪರೀಕ್ಷೆಯಲ್ಲಿ ಪೇಪರ್ ಸರಿಯಾಗಿ ಉತ್ತರಿಸಲಾಗುತ್ತಿಲ್ಲ. ಇಂಜಿನಿಯರಿಂಗ್ ಮುಗಿಸುವ ಆಸೆ ಕೂಡ ಇದೆ. ಕೈಗೂಡುತ್ತದಾ? ಪರಿಹಾರ ತಿಳಿಸಿ.

| ವಿಠ್ಠಲಮೂರ್ತಿ ಪುಣೆ

ಒಂದೇ ವಿಷಯ ಎಂಬುದು ಕೆಲವರಿಗೆ ಸರಳವಾಗಿಯೂ ಕಾಣಬಹುದು. ಜಟಿಲವಾಗಿಯೂ ಕಾಣಬಹುದು. ಮಾನಸಿಕ ಪರಿಧಿಯ ಮೇಲೆ ಇದು ನಿಂತಿದೆ. ಒತ್ತಡವನ್ನು ತಾಳುವ ಶಕ್ತಿಯನ್ನೂ ಅವಲಂಬಿಸಿದೆ. ಜಾತಕದಲ್ಲಿ ಕುಜ, ಬುಧ ಮತ್ತು ಶನೈಶ್ಚರರು ಒಂದುರೀತಿಯ ನಕಾರಾತ್ಮಕ ಶಕ್ತಿಯನ್ನು ಜಾಸ್ತಿ ಮಾಡಿದ್ದಾರೆ. ಶುಕ್ರನ ಸಂಬಂಧವಾದ ಶಕ್ತಿಯು ಚಂದ್ರನ ಕಾರಣಕ್ಕಾಗಿ ವಿಸ್ತರಿಸಲಿರುವುದು ಜಾತಕದ ಬಹು ದೊಡ್ಡ ನಿಧಿಯಾಗಿದೆ. ಮುಂದೆ ಒಳ್ಳೆಯ ಕೆಲಸವೂ ಸಿಗಲಿದೆ. ಶುಕ್ರನಿಂದ ಕೆಲಸ ಸಿಗುವ ವಿಚಾರ ಉಂಟಾಗಿ ಚಂದ್ರನಿಂದ ಸುಖವು ಒದಗಿಬರಬೇಕಾಗಿದೆ. ಮಗಳು ಆ ವಿಷಯ ಪಾಸಾಗುತ್ತಾಳೆ. ಸುಬ್ರಹ್ಮಣ್ಯ, ಗಣಪತಿ ಹಾಗೂ ಶಿವನ ಸ್ತುತಿ ಕ್ಷೇಮಕರ.

=ನಮ್ಮದು ಅಂತರ್ಜಾತೀಯ ವಿವಾಹ. ಇಷ್ಟಪಟ್ಟು ನನ್ನ ಸಹೋದ್ಯೋಗಿಯನ್ನು ಮದುವೆ ಆದೆ. ಇಬ್ಬರು ಮಕ್ಕಳೂ ಆಗಿದ್ದಾರೆ. ನಾವಿಬ್ಬರೂ ಒಳ್ಳೆಯ ಕೆಲಸದಲ್ಲಿದ್ದೇವೆ. ಎಲ್ಲವೂ ಸರಿಹೋಗಿದೆ, ಜೀವನ ಗೆದ್ದಿತು ಎಂಬಷ್ಟರಲ್ಲಿ ಈಗ ನಮ್ಮ ಮನೆಯವರು ಇನ್ನೂ ದೊಡ್ಡ ಮತ್ತೊಂದು ಕೆಲಸ ಸಿಕ್ಕಿತು ಎಂದು ಇದ್ದ ಕೆಲಸ ಕೈಬಿಟ್ಟರು. ಈಗ ಅತಂತ್ರ ಪರಿಸ್ಥಿತಿ. ಎಲ್ಲದಕ್ಕೂ ತಡೆಗೋಡೆ ಎಂದು ನನ್ನನ್ನೇ ನಿಂದಿಸುತ್ತಿದ್ದಾರೆ. ನಿತ್ಯವೂ ಜಗಳ. ಇದು ಮಕ್ಕಳ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರುತ್ತದೆಯೋ ತಿಳಿಯದು. ಬೇರೆ ಕೆಲಸ ಸಿಗಬಹುದೆ? ಪರಿಹಾರ ಏನು?

| ಜಯಸುಧಾ ರೆಡ್ಡಿ ಬಳ್ಳಾರಿ

ಜೀವನದ ಸಂದರ್ಭ ಹೀಗೆ ಆಗಬಾರದು. ಜೀವನ ಗೆದ್ದಿತು ಎಂಬುದರೊಳಗೆ ಮನೆಯಲ್ಲಿ ಬಿರುಗಾಳಿ ಬೀಸಿದ್ದು ದುರದೃಷ್ಟಕರ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಎಂಬ ಕವಿಯ ಕಲ್ಪನೆಯು ವಾಸ್ತವವೇ ಆಗಿದೆ ಎಂಬುದು ನಿಮ್ಮ ಜೀವನದಲ್ಲಿ ಈಗ ಸ್ಪಷ್ಟ. ಕೆಲವು ದಿನಗಳ ಕಾಲ ಸಹಿಸಿಕೊಳ್ಳಿ. ಈ ಸಂದರ್ಭದಲ್ಲಿ ಪಾರದರ್ಶಕವಾಗಿರುವುದು ಏನು, ಸಂತೋಷ ಎಲ್ಲಿದೆ ಎಂಬ ವಿಚಾರದ ಮೇಲೆ ರಾಹುವು ಕರಿನೆರಳು ತಂದಿದ್ದಾನೆ, ಬುದ್ಧಿಗೆ ವೈಪರೀತ್ಯ ಒದಗಿಸಿದ್ದಾನೆ. ಸದ್ಯ ಕೆಲಸ ಸಿಗುವುದು ಕಷ್ಟಕರ ಎಂಬ ವಿಚಾರವನ್ನು ನಿಮ್ಮ ಮನೆಯವರು ಗಂಭೀರವಾಗಿ ತೆಗೆದುಕೊಳ್ಳಲಿ. ಇನ್ನೊಂದು ಹೆಣ್ಣಿನ ಬಲೆಯಿಂದ ಹೊರಬರುವುದು, ಕೆಲಸ ಸಿಗಬೇಕಾದುದು ಇತ್ಯಾದಿ ಸದ್ಯ ಸರಳವಾಗಿಲ್ಲ. ಅರಿಶಿಣ ಕುಂಕುಮದಿಂದ ಮಹಾಲಕ್ಷ್ಮೀಯ ಅರ್ಚನೆ ಮಾಡಿ. ಪ್ರತಿ ಗುರುವಾರ ಗುರುಚರಿತ್ರೆಯ ಪಠಣ ನಡೆಸಿ. ನಿಮ್ಮ ಜೀವನದ ಬಂಡಿಯು ಮತ್ತೆ ಹಳಿಗಳ ಮೇಲೆ ಬರಬಹುದಾದ ಪವಾಡ ಸಾಧ್ಯ.

=ಎಲ್ಲವೂ ಸರಿ ಇದೆ ಎಂದಾದರೂ ಮನೆಯಲ್ಲಿ ಪತ್ನಿಗೆ ಅನ್ಯಾಯ ಮಾಡುತ್ತಿದ್ದೇನೆ ಎನಿಸುತ್ತಿದೆ. ಯಾವ ಋಣಾನುಬಂಧವೋ ನಿಮ್ಮನ್ನು ಬಿಡಲಾಗದು ಎಂದು ಅನ್ಯ ಸ್ತ್ರೀಯೋರ್ವಳು ನನ್ನ ಬಳಿ ಬಂದಿದ್ದಾಳೆ. ಸಾಕಷ್ಟು ವಿಮರ್ಶೆ ಮಾಡಿಕೊಂಡೆ. ಅಶಾಂತಿಯ ಜೀವನವಾಗಿದೆ. ಮನೆಯಲ್ಲಿ ನನ್ನನ್ನು ನಂಬಿ ಬಂದವಳು, ನನ್ನದಲ್ಲದ ಪರಿಧಿಯ ಹೊರಸುತ್ತಿನಲ್ಲಿ ಇನ್ನೊಬ್ಬಳು. ಮನಸ್ಸನ್ನು ನಿಯಂತ್ರಿಸಲು ಆಗುತ್ತಿಲ್ಲ. ಎರಡನೆಯದನ್ನು ಬಿಡಲು ಏನೋ ಒಂದು ತಡೆ ಅನುವು ಮಾಡಿಕೊಡುತ್ತಿಲ್ಲ. ಹಣ ಇದೆ. ನೈತಿಕ ಪ್ರಜ್ಞೆ ಸುಡುತ್ತಿದೆ. ಪರಿಹಾರ ಇದೆಯೇ?

| ಪರಮೇಶ್ವರ ಕೆ. ಎನ್. ಯಾದಗೀರ್

ಅನ್ಯಸ್ತ್ರೀ ಸಂಬಂಧ ಯಾವುದೇ ಹಂತದಲ್ಲೂ ಅಂಗೈಯಲ್ಲಿ ಬಂದು ಸೇರಿದ ಉರಿ ಕೆಂಡವೇ ಆಗಿದೆ. ಶನಿಕಾಟ; ಭ್ರಮಾಲೋಕಕ್ಕೆ ಮಿಂಚಿನ ಲೇಪ ತಂದಿಡುತ್ತಿರುವ ಘಾತಕ ಚಂದ್ರ; ನೀಚಭಂಗ ರಾಜಯೋಗ ನೀಡುವ ಬುಧನ ದಶಕಾಲ (ಬುಧನೇ ವ್ಯಕ್ತಿತ್ವದ ಸಿದ್ಧಿ ಕೊಡಬೇಕಾದವನು) ನಿಮ್ಮನ್ನು ಈಗ ತುಸು ಯಾತನೆಯಲ್ಲಿ ಇಡಿಸಿದೆ. ರವಿಯ ಜತೆಗಿನ ನೀಚ ಬುಧ (ನೀಚಭಂಗ ರಾಜಯೋಗವಿದೆ) ತಪ್ಪು ದಾರಿಯನ್ನು ಹಿಡಿಯುವ ಹುಂಬ ಧೈರ್ಯ ನೀಡಿದ್ದಾನೆ. ನೀವು ಸ್ವರ್ಗದ ಕನಕರೇಖೆಯನ್ನು ತಲುಪಿದ್ದೇನೆ ಎಂದು ಅಂದುಕೊಂಡಿರುವಾಗಲೇ ಕೆಲಸದ ಸ್ಥಳದಲ್ಲಿ ಹಿನ್ನಡೆ ಹೊಂದುವಿರಿ. ಹೊರಗೆ ಬನ್ನಿ. ಭ್ರಮೆಯನ್ನು ಮೆಟ್ಟುವ ವಾಸ್ತವ ಅರಿತರೆ ಕ್ಷೇಮ. ಶ್ರೀ ವಜ್ರನೇತ್ರಾ ದೇವಿಯನ್ನು ಸ್ತುತಿಸಿ. ಕ್ಷೇಮ.

=ಗುರೂಜಿ, ನಮಸ್ಕಾರ. ನನ್ನನ್ನು ನಂಬಿ. ಹೋದೆಡೆಯೆಲ್ಲ ನಿರ್ಜೀವ ವಸ್ತುಗಳೂ ತಂತಮ್ಮ ಆಕೃತಿಯಲ್ಲೇ ಜೀವ ತಳೆದಂತಾಗಿ ಮಾತಾಡುತ್ತವೆ. ನೋವು ಸಾಕಾಗಿದೆ, ರಕ್ಷಣೆ ಬೇಕು ಎಂದು ಮಾತನಾಡುತ್ತವೆ. ಜಿರಲೆ, ಪಕ್ಷಿಗಳು, ಬೆಕ್ಕು – ಹೀಗೆ ಇಷ್ಟೇ ಇವುಗಳೇ ಎಂದಲ್ಲ. ಇವುಗಳ ಆತ್ಮಗಳೂ ನನ್ನನ್ನು ಮುತ್ತಿಕೊಳ್ಳುತ್ತವೆ. ಇವು ಕೇವಲ ಭ್ರಮೆ ಎನಿಸಬಹುದು. ನಿಖರವಾಗಿ ಇಂಥವರಿಗೆ ಇದೇ ರೀತಿ ಆಗುತ್ತದೆ ಎಂದು ತಿಳಿಯುತ್ತದೆ. ಆದರೆ ಒಳ್ಳೆಯದು ಯಾವುದೂ ಮುಂಚೆಯೇ ತಿಳಿಯದು. ಕೆಟ್ಟದ್ದು ಮಾತ್ರ ತಿಳಿಯುತ್ತದೆ. ಹೇಳುವುದು ಹೇಗೆ ಎಂಬ ಕಷ್ಟ ಎದುರಾಗುತ್ತದೆ. ನನ್ನ ಪತ್ನಿ ನನ್ನನ್ನು ಹುಚ್ಚ ಎಂದೇ ತಿಳಿದು ಕ್ಯಾತೆ ತೆಗೆಯುತ್ತಾಳೆ. ಆತ್ಮಹತ್ಯೆಗೂ ಮನಸ್ಸು ಪ್ರಶ್ನಿಸುತ್ತದೆ. ಪರಿಹಾರ ಹೇಗೆ ಸಾಧ್ಯ?

| ದತ್ತಾತ್ರೇಯ ಶೇಟ್ ಭೋಪಾಲ್

ನಿಮ್ಮ ತೊಂದರೆಗಳನ್ನು, ನಿಮ್ಮನ್ನು ಸುತ್ತುವರಿಯುವ ಆತ್ಮಗಳ ವಿಚಾರಗಳನ್ನು, ನಿಮ್ಮ ವಿಶಿಷ್ಟವಾದ ನಿಗೂಢ ಶಕ್ತಿರಹಸ್ಯಗಳನ್ನು ನೀವು ಹಂಚಿಕೊಳ್ಳಲು ಸಾಧ್ಯವಾಗದು. ಜಾತಕದಲ್ಲಿ ರಾಹುವಿನ ಸ್ಥಾನ ಅಷ್ಟಮದಲ್ಲಿ ಆದಾಗ ಕೆಲವು ಸಮಸ್ಯೆಗಳು ಎದ್ದೇಳುತ್ತವೆ. ಅದರಲ್ಲೂ ಶುಕ್ರನ ಕಾರಣದಿಂದ ಬುಧಾದಿತ್ಯ ಯೋಗ ದಿಕ್ಕು ತಪ್ಪಿದೆ. ಒಂದು ತಪ್ಪು ರೇಖೆಯಲ್ಲಿ ಉತ್ತರಾಷಾಢ ನಕ್ಷತ್ರಕ್ಕೆ ರಾಹುಘಾತ (ಅಷ್ಟಮ ಸ್ಥಾನದಲ್ಲಿ) ಹರಳುಗಟ್ಟಿದಾಗ ನೀವು ಎದುರಿಸುತ್ತಿರುವ ಸಮಸ್ಯೆ ಬರುತ್ತದೆ. ಗುರು ಹಾಗೂ ಚಂದ್ರರು ನೀವು ಬೈರಾಗಿಯಾಗಿ ಜೀವನ ಕಳೆಯುವ ವಿಚಾರವನ್ನು ತಪ್ಪಿಸಿದ್ದಾರೆ. ನಿಗೂಢಗಳನ್ನು ಅರಿಯುವ ಕೊಂಡಿ ತಪ್ಪಿದೆ. ತಪ್ಪಿದರೂ ತಪ್ಪದಂತಿದೆ. ಶ್ರೀದೇವಿ ಖಡ್ಗಮಾಲಿನಿಯ ಆರಾಧನೆ ಮಾಡಿ. ಕೆಲಸ ಬಿಡುವ ಅಥವಾ ಆತ್ಮಹತ್ಯೆಯ ಯೋಚನೆಯನ್ನು ಖಂಡಿತ ಮಾಡದಿರಿ. ದಿವ್ಯಗುರು ದತ್ತಾತ್ರೇಯ ಹಾಗೂ ಗುರು ನರಸಿಂಹ ಸಹಸ್ರನಾಮಾವಳಿ ಓದಿ. ಒಳಿತಿದೆ.

=ನಮಗೆ ಇಬ್ಬರು ಮಕ್ಕಳು. ಇಬ್ಬರ ಜಾತಕಗಳನ್ನೂ ಕಳಿಸುತ್ತಿದ್ದೇನೆ. ಸುಮಾರು ಒಂದು ವಾರದ ಅಂತರದಲ್ಲಿ ಮೂರು ಬಾರಿ ಪ್ರಾಣಹಾನಿ ಆಗುವಂಥ ಆಘಾತಗಳಿಂದ ಕೂದಲೂ ಕೊಂಕದೆ ಪಾರಾಗಿದ್ದಾರೆ. ನಮ್ಮ ಮನೆಯವರಿಗೆ ಕಾರ್ ಡ್ರೖೆವ್ ಮಾಡುವಾಗ ಯಾರೋ ಏನೋ ಕಪ್ಪು ಪಟ್ಟಿಯನ್ನು ಕಟ್ಟಿದಂತೆ ಆಗುತ್ತದಂತೆ. ನನ್ನ ಬಲಗಾಲಿನ ಹೆಬ್ಬೆರಳಿಗೆ ಏಟು ಬಿದ್ದಿತ್ತು. ಇನ್ನೊಮ್ಮೆ ನಾನು ಜತೆಗಿರಲಿಲ್ಲ. ಮನೆಯವರಿಗೆ ಏನೂ ಆಗಿಲ್ಲ. ಧಡ್ ಅಂತ ಬ್ರೇಕ್ ಒತ್ತುತ್ತಾರೆ. ಮಕ್ಕಳು ಎರಡು ಬಾರಿ ಹಣೆಗೆ ಏಟು ತಗುಲಿಸಿಕೊಂಡಿದ್ದಾರೆ. ಸ್ಕ್ಯಾನಿಂಗ್ ರಿಪೋರ್ಟ್​ನಲ್ಲಿ ದೋಷ ಬಂದಿಲ್ಲ. ಇದರಿಂದ ಮುಕ್ತಿ ಇದೆಯೇ?

| ಪೂರ್ಣಿಮಾ ಹರಿಹರ ಇಚಲಕರಂಜಿ

ಮಕ್ಕಳ ಜಾತಕ ಕಳಿಸಿದ್ದೀರಿ. ಮನೆಯವರ ಜಾತಕ ಕಳಿಸಿಲ್ಲ. ಸೂಕ್ಷ್ಮವಾದ ಘಟ್ಟಗಳಲ್ಲಿ ರಾಹು-ಕುಜ, ರಾಹು-ಚಂದ್ರ, ರಾಹು-ಗುರು, ರಾಹು-ಶನಿಗ್ರಹಗಳು ಇಂಥ ಅನಿಷ್ಟ ರೂಪಿಸಬಲ್ಲ ಘಟಕಗಳು. ಬರುವ 2020ರ ಜನವರಿ 23ನೇ ದಿನಾಂಕದವರೆಗೆ ನಿಮ್ಮ ಮಕ್ಕಳ ಬಗ್ಗೆ ಎಚ್ಚರ ಬೇಕು. ರಾಮರಕ್ಷಾ ಸ್ತೋತ್ರ, ಪಂಚಮುಖಿ ಹನುಮಂತ ಕವಚ ಓದಿ. ಮಕ್ಕಳು ಚಿಕ್ಕವರಾದುದರಿಂದ ಮನೆಯವರು ಅಥವಾ ನೀವೇ ಓದಿ. ಮನೆಯವರ ಜಾತಕವನ್ನೂ ಕಳಿಸಿಕೊಡಿ. ಲೌಕಿಕದ ವಿಚಾರ ನಿರ್ಲಕ್ಷಿಸಲಾಗದು. ಮನೆಯವರು ವೈದ್ಯರನ್ನು ಕಂಡು ಅಭಿಪ್ರಾಯ ಕೇಳಲಿ. ಮನೆಯವರು ಪ್ರತಿನಿತ್ಯ ಸ್ನಾನಾನಂತರ ಒಂದರ್ಧ ಘಂಟೆ ಶ್ರೀ ಮಂಗಳಚಂಡಿಕಾ ಸ್ತೋತ್ರ, ದುರ್ಗಾ ಮೂಲ ಬೀಜಾಕ್ಷರ ಮಂತ್ರ ಓದಲಿ. ವೈನತೇಯ ಗಾಯತ್ರಿ ಪಠಿಸಲಿ.

(ಲೇಖಕರು ಕಥೆಗಾರರು ಮತ್ತು ಜ್ಯೋತಿಷ ವಿಜ್ಞಾನ ಸಂಶೋಧಕರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top