ತಿರುಮಲ ನೇರ ಪ್ರವೇಶಕ್ಕೆ ನಿರ್ಬಂಧ

ರಾಯಚೂರು: ತಿರುಮಲದ ವೆಂಕಟೇಶ್ವರ ದೇವಸ್ಥಾನದಲ್ಲಿ ಮಠಾಧೀಶರು, ಧರ್ಮಗುರುಗಳಿಗೆ ನೇರ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ಅಸಮಾಧಾನ ಮೂಡಿಸಿದೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.

ಬ್ರಿಟಿಷರ ಕಾಲದಿಂದಲೂ ಪ್ರಮುಖ ದೇವಸ್ಥಾನಗಳಲ್ಲಿ ಮಠಾಧೀಶರಿಗೆ ಪ್ರಾಮುಖ್ಯತೆ ನೀಡುತ್ತ ಬರಲಾಗಿದೆ. ಈಗಿನ ದೇವಸ್ಥಾನಗಳ ಆಡಳಿತ ಮಂಡಳಿಗಳು ಮಠಾಧೀಶರಿಗೆ ಅಗೌರವ ತೋರುವಂಥ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ನಿರ್ಬಂಧದ ನಿರ್ಧಾರ ಸರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದ್ದು, ಧಾರ್ವಿುಕ ಮುಖಂಡರೂ ದೇವಸ್ಥಾನಗಳ ನಿಯಮಗಳಿಗೆ ಬದ್ಧರಾಗಿರಬೇಕು ಎಂದು ಶ್ರೀಮಠದಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು. ಮತದಾನ ಮಾಡಲು ಅಸಡ್ಡೆ ತೋರಬಾರದು. ಆಸೆ-ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಿ, ದೇಶದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು.

| ಶ್ರೀ ಸುಬುಧೇಂದ್ರ ತೀರ್ಥರು, ಮಂತ್ರಾಲಯ ಮಠದ ಪೀಠಾಧಿಪತಿ