ತಿರುಗೇಟು ಕೊಡಲು ಬಿಜೆಪಿ ತಯಾರಿ

ಹುಬ್ಬಳ್ಳಿ: ಬಿಜೆಪಿ ವಶದಲ್ಲಿದ್ದ ಧಾರವಾಡ ಜಿ.ಪಂ.ದಲ್ಲಿ ಅಧ್ಯಕ್ಷರನ್ನು ಅವಿಶ್ವಾಸ ಗೊತ್ತುವಳಿ ಮೂಲಕ ಪದಚ್ಯುತಿಗೊಳಿಸಿದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ, ಮೋದಿ ಸಮಾವೇಶವನ್ನು ಯಶಸ್ವಿಗೊಳಿಸುವ ಮೂಲಕ ತಿರುಗೇಟು ನೀಡಲು ಬಿಜೆಪಿ ಉದ್ದೇಶಿಸಿದೆ. ಭಾರಿ ಸಂಖ್ಯೆಯ ಜನರನ್ನು ಸೇರಿಸುವ ಮೂಲಕ ಅಭೂತಪೂರ್ವ ಎಂಬಂಥ ಕಾರ್ಯಕ್ರಮ ಮಾಡಿ ತೋರಿಸಲು ಮುಂದಾಗಿದೆ.

ಮಂಗಳವಾರ ಧಾರವಾಡ ಜಿ.ಪಂ.ದಲ್ಲಿ ಜರುಗಿದ ಸಭೆಯಲ್ಲಿ ಅಧ್ಯಕ್ಷೆ ವಿರುದ್ಧ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ಬಿಜೆಪಿಯ ನಾಲ್ವರು ಜಿ.ಪಂ. ಸದಸ್ಯರು ಬೆಂಬಲಿಸುವ ಮೂಲಕ ಯಶಸ್ವಿಗೊಳಿಸಿದ್ದರು. ಇದೊಂದು ‘ಆಪರೇಷನ್ ಹಸ್ತ’ವಾಗಿದ್ದು, ಬಿಜೆಪಿಗೆ ಮುಖಭಂಗವಾಗಿದೆ. ಜೊತೆಗೆ, ಲೋಕಸಭೆ ಚುನಾವಣೆ ಮೇಲೆ ಇದು ಒಂದಿಷ್ಟು ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ, ಆಪರೇಷನ್ ಹಸ್ತಕ್ಕೆ ಬಲಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದರೊಂದಿಗೆ, ಮೋದಿ ಜನಪ್ರಿಯತೆಯಿಂದ ಕಾಂಗ್ರೆಸ್​ನ ಜಂಗಾಬಲ ಉಡುಗಿ ಹೋಗುವಂತೆ ಮಾಡುವುದು ಬಿಜೆಪಿಗೆ ಅನಿವಾರ್ಯವಾಗಿದೆ.

ಪ್ರಧಾನಿ ಮೋದಿಯವರು ಫೆ. 10ರಂದು ಸಂಜೆ 5ಕ್ಕೆ ಚುನಾವಣಾ ಪೂರ್ವಭಾವಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ಧಾರವಾಡ, ಉತ್ತರ ಕನ್ನಡ, ಹಾವೇರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಬಹಿರಂಗ ಸಮಾವೇಶವಾಗಿದೆ. ಆದಾಗ್ಯೂ ಇಲ್ಲಿಯ ರ‍್ಯಾಲಿ ಪರಿಣಾಮ ಇಡೀ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಶಕ್ತಿಯನ್ನು ಹೆಚ್ಚಿಸಬೇಕು ಎನ್ನುವುದು ಪಕ್ಷದ ಪ್ರಮುಖರ ಗುರಿಯಾಗಿದೆ.

ಧಾರವಾಡ, ಹಾವೇರಿ, ಉತ್ತರ ಕನ್ನಡ ಮಾತ್ರವಲ್ಲದೆ, ಪಕ್ಕದ ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲೂ ಬಿಜೆಪಿ ಸಂಸದರೇ ಇದ್ದಾರೆ. ಈ ಕ್ಷೇತ್ರಗಳಷ್ಟೇ ಅಲ್ಲದೆ, ಕಾಂಗ್ರೆಸ್ ಸಂಸದರಿರುವ ಚಿಕ್ಕೋಡಿ ಹಾಗೂ ಬಳ್ಳಾರಿ ಕ್ಷೇತ್ರದಲ್ಲೂ ಪಕ್ಷದ ಪ್ರಭಾವ ಹೆಚ್ಚಿಸುವುದು ಬಿಜೆಪಿ ನಾಯಕರ ಉದ್ದೇಶವಾಗಿದೆ. ರಾಜ್ಯದ ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದೆ ಎಂಬ ಭಾವನೆ ವ್ಯಾಪಕವಾಗಿರುವುದು ಬಿಜೆಪಿಗೆ ಅನುಕೂಲಕರವಾಗಿದೆ.

ಮುಂಬರುವ ಚುನಾವಣೆಗಾಗಿ ರಾಜ್ಯದಲ್ಲಿ ಪ್ರಧಾನಿಯವರ ಮೊದಲ ರ‍್ಯಾಲಿ ಹುಬ್ಬಳ್ಳಿಯಲ್ಲಿ ನಡೆಯುವುದರಿಂದ ಭರ್ಜರಿ ಶುಭಾರಂಭ ಎಂದು ತೋರಿಸಬೇಕಿದೆ. ಹೀಗಾಗಿ 2 ಲಕ್ಷದಷ್ಟು ಕಾರ್ಯಕರ್ತರನ್ನು ಸೇರಿಸಲು ಪಕ್ಷದ ಜಿಲ್ಲಾ, ತಾಲೂಕು ಮಟ್ಟದ ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿ ಹಾಕಲಾಗಿದೆ. ಸ್ವಯಂ ಪ್ರೇರಣೆಯಿಂದ 1 ಲಕ್ಷಕ್ಕಿಂತ ಹೆಚ್ಚು ಸಾರ್ವಜನಿಕರು ಮೋದಿ ಭಾಷಣ ಕೇಳಲು ಬರಲಿದ್ದಾರೆ ಎಂದು ಬಿಜೆಪಿ ಮುಖಂಡರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಹೊರವಲಯದಲ್ಲಿ ವಿಶಾಲ ಮೈದಾನ: ಹುಬ್ಬಳ್ಳಿ ನಗರದ ಹೊರವಲಯದ ಗಬ್ಬೂರಿನಲ್ಲಿ ಪುಣೆ-ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಿರುವ ಕೆಎಲ್​ಇ ಸಂಸ್ಥೆಯ 65 ಎಕರೆ ಜಾಗವನ್ನು ಸಮಾವೇಶಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲಿ ಜಾಗ ಸಮತಟ್ಟು ಮಾಡಲಾಗುತ್ತಿದ್ದು, ಬೃಹತ್ ವೇದಿಕೆ ನಿರ್ವಣವಾಗಲಿದೆ. ವಾಹನ ನಿಲುಗಡೆ ಸೇರಿ ಯಾವುದಕ್ಕೂ ತೊಂದರೆಯಾಗಬಾರದು. ಸುತ್ತಮುತ್ತಲಿನ ಜಿಲ್ಲೆಯ ಜನರು ಹುಬ್ಬಳ್ಳಿ ನಗರ ಪ್ರವೇಶಿಸಿ ಸಂಚಾರ ದಟ್ಟಣೆಯಲ್ಲಿ ಸಿಲುಕದೇ ನೇರವಾಗಿ ಸಮಾವೇಶಕ್ಕೆ ಬರಲು ಅನುಕೂಲವಾಗಬೇಕು ಎಂದು ಈ ಮೈದಾನ ಆಯ್ಕೆ ಮಾಡಿಕೊಳ್ಳಲಾಗಿದೆ.