More

  ತಿಪ್ಪೇಶನ ಮುಕ್ತಿ ಬಾವುಟ 61 ಲಕ್ಷ ರೂ.ಗೆ ಹರಾಜು

  ಚಿತ್ರದುರ್ಗ: ರಾಜ್ಯದ ಐತಿಹಾಸಿಕ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ರಥೋತ್ಸವದ ಅಂಗವಾಗಿ ಮಂಗಳವಾರ ಜರುಗಿದ ಹರಾಜು ಪ್ರಕ್ರಿಯೆಯಲ್ಲಿ ಮುಕ್ತಿ ಬಾವುಟವನ್ನು 61 ಲಕ್ಷ ರೂ.ಗೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಪಡೆದರು. ಅಸಂಖ್ಯಾತ ಭಕ್ತರು ಇದಕ್ಕೆ ಸಾಕ್ಷಿಯಾದರು.

  ಚುನಾವಣಾ ವರ್ಷಗಳಲ್ಲಿ ಅತಿ ದೊಡ್ಡ ಮೊತ್ತಕ್ಕೆ ಮುಕ್ತಿ ಬಾವುಟ ಹರಾಜಾಗುತ್ತಲೇ ಇದೆ. ಅದರಂತೆ ಈ ಬಾರಿಯೂ ಸರ್ಕಾರಿ ಸವಾಲ್ 1 ಕೋಟಿ ರೂ.ಗೆ ನಿಗದಿ ಪಡಿಸಲಾಯಿತು. 5 ಲಕ್ಷ ರೂ.ನಿಂದ ಆರಂಭವಾದ ಪ್ರಕ್ರಿಯೆ 61 ಲಕ್ಷ ರೂ.ಗೆ ಮುಕ್ತಾಯವಾಯಿತು. ದಾವಣಗೆರೆಯ ವಜ್ರ ಮಹೇಶ್ 60 ಲಕ್ಷ ರೂ.ವರೆಗೂ ಕೂಗಿ ಹಿಂದೆ ಸರಿದರು. ಐದಾರು ಮಂದಿ ಮುಕ್ತಿ ಬಾವುಟಕ್ಕಾಗಿ ತೀವ್ರ ಪೈಪೋಟಿ ನಡೆಸಿದರು.

  2018ರ ಚುನಾವಣಾ ಸಂದರ್ಭದಲ್ಲಿಯೂ ಮುಖೇಶ್ ಎಂಬುವವರು 72 ಲಕ್ಷ ರೂ.ಗೆ ಮುಕ್ತಿ ಬಾವುಟ ಪಡೆದಿದ್ದರು. 2019ರಲ್ಲೂ 62 ಲಕ್ಷ ರೂ.ಗೆ ಹರಾಜಾಗಿತ್ತು. 2023ರಲ್ಲಿ ಡಿ.ಸುಧಾಕರ್‌ 55 ಲಕ್ಷ ರೂ.ಗೆ ಮುಕ್ತಿಬಾವುಟ ಪಡೆದಿದ್ದರು. ಈ ಬಾರಿಯೂ 60 ಲಕ್ಷದ ನಂತರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು 61 ಲಕ್ಷ ರೂ.ಗೆ ಮುಕ್ತಿ ಬಾವುಟ ಪಡೆದುಕೊಂಡರು.

  ಹರಾಜು ನಂತರ ಚಿತ್ತ ನಕ್ಷತ್ರದ ಸಮಯದಲ್ಲಿ ಸ್ವಾಮಿಯ ರಥೋತ್ಸವಕ್ಕೆ ಚಾಲನೆ ದೊರೆಯಿತು. ಆಂಧ್ರ, ಮಹಾರಾಷ್ಟ್ರ ಸೇರಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಮಧ್ಯೆ ವಿರಾಜಮಾನವಾಗಿ ತಿಪ್ಪೇರುದ್ರಸ್ವಾಮಿಯ ತೇರು ಸಾಗಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts