ತಿಗಳರದೊಡ್ಡಿಯಲ್ಲಿ ಬಯಲೇ ಶೌಚಗೃಹ

ರಾಮನಗರ: ಮೂವರು ಮುಖ್ಯಮಂತ್ರಿಗಳು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಈಗಲೂ ಜನರು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ ಎಂದರೆ ನಂಬಲು ಸಾಧ್ಯವೇ? ಆದರೆ, ತಾಲೂಕಿನ ಕೂಟಗಲ್ ಹೋಬಳಿಯ ತಿಗಳರದೊಡ್ಡಿ ಗ್ರಾಮದಲ್ಲಿ ಜನತೆ ಗುಡಿಸಲಿನಲ್ಲಿ ವಾಸ ಮಾಡುವ ಜತೆಗೆ, ಮೂಲಸೌಕರ್ಯ ವಂಚಿತರಾಗಿದ್ದು, ಬಹುತೇಕ ಕೊಳಚೆ ಪ್ರದೇಶದಲ್ಲಿ ಬದುಕುತ್ತಿದ್ದಾರೆ.

ಶೆಡ್ ಇರಬಾರದು ಎಂದಿದ್ದರು: ಪ್ರಸ್ತುತ ಮಾಗಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಗ್ರಾಪಂ ವ್ಯಾಪ್ತಿಗೆ ಸೇರಿರುವ ತಿಗಳರದೊಡ್ಡಿ, 2008ರ ಮೊದಲು ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿತ್ತು. 1994ರಲ್ಲಿ ರಾಮನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್.ಡಿ.ದೇವೇಗೌಡರು, ಈ ಗ್ರಾಮಕ್ಕೆ ಮತಯಾಚನೆಗೆ ಬಂದಾಗ ಗುಡಿಸಲುಗಳನ್ನು ಕಂಡು, ಇನ್ನೊಂದು ವರ್ಷದಲ್ಲಿ ಎಲ್ಲರಿಗೂ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು. ಆದರೆ, ದೇವೇಗೌಡರು ಭರವಸೆ ನೀಡಿ 25 ವರ್ಷ ಕಳೆದರೂ ಕೆಲವರನ್ನು ಹೊರತುಪಡಿಸಿದರೆ ಬಹುತೇಕರು ಇನ್ನೂ ಗುಡಿಸಲಿನಲ್ಲಿಯೇ ವಾಸ ಮಾಡುತ್ತಿದ್ದಾರೆ. ನಂತರದಲ್ಲಿ ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ.

ಶೌಚಗೃಹಗಳಿಲ್ಲ: ಗ್ರಾಮದಲ್ಲಿ 35-40 ಕುಟುಂಬಗಳು ಹಾಗೂ ಸುಮಾರು 200ಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದು, ಬಹುತೇಕ ಕುಟುಂಬಗಳಿಗೆ ಶೌಚಗೃಹಗಳಿಲ್ಲ. ವಿಪರ್ಯಾಸವೆಂದರೆ ಈ ಗ್ರಾಮವನ್ನು ಬಯಲು ಶೌಚಮುಕ್ತ ಗ್ರಾಮ ಎಂದು ಘೊಷಿಸಲಾಗಿದ್ದು, ಇದಕ್ಕೆ ಮಾನದಂಡವೇನು ಎಂಬುದನ್ನು ಜಿಪಂ ಅಧಿಕಾರಿಗಳೇ ಹೇಳಬೇಕು.

ಇಂದಿಗೂ ಗ್ರಾಮದ ಮಹಿಳೆಯರು, ಪುರುಷರಾದಿಯಾಗಿ ಎಲ್ಲರಿಗೂ ಬಯಲೇ ಶೌಚಗೃಹವಾಗಿದೆ.

ಪಕ್ಕದ ಜಮೀನುಗಳಿಗೆ ಹೋದರೆ, ಜಮೀನು ಮಾಲೀಕರಿಂದ ಬೈಗುಳ ಕೇಳಬೇಕು. ಮಹಿಳೆಯರಂತೂ ಕತ್ತಲಾಗುವುದನ್ನೇ ಕಾದು, ಕಾಡು ಪ್ರಾಣಿಗಳ ದಾಳಿಯ ಭಯದಲ್ಲಿಯೇ ಬಹಿರ್ದೆಸೆಗೆ ಹೋಗಬೇಕು. ಅಂತಹ ದುಸ್ಥಿತಿ ಈ ಗ್ರಾಮದಲ್ಲಿದೆ.

ಮೂಲಸೌಕರ್ಯ ಮರೀಚಿಕೆ: ಮನೆ, ಶೌಚಗೃಹದ ಜತೆಗೆ ಗ್ರಾಮದಲ್ಲಿ ಕನಿಷ್ಠ ಮೂಲಸೌಕರ್ಯವೂ ಇಲ್ಲ. ಗುಡಿಸಲಿನಲ್ಲೇ ಸ್ನಾನ, ಸ್ನಾನ ಮಾಡಿದ ನೀರು ಹರಿಯಲು ಚರಂಡಿಯೂ ಇಲ್ಲ. ಬೀದಿದೀಪಗಳು ಕೆಟ್ಟು 2 ತಿಂಗಳು ಕಳೆದರೂ ದುರಸ್ತಿಪಡಿಸಿಲ್ಲ. ಇನ್ನು ಗ್ರಾಮಕ್ಕೆ ಹೋಗಲು ಸರಿಯಾದ ರಸ್ತೆಯೂ ಇಲ್ಲವಾಗಿದೆ.

ಬೇರೆಯದ್ದೇ ಹೇಳುತ್ತಾರೆ: ಮನೆ ಕಟ್ಟಿಕೊಳ್ಳಲು ತಿಗಳರದೊಡ್ಡಿ ಗ್ರಾಮದ ಎಲ್ಲರನ್ನೂ ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ, ಮನೆ ಕಟ್ಟಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ ಎನ್ನುವುದು ಗ್ರಾಪಂ ಅಧಿಕಾರಿಗಳ ಉತ್ತರ. ಒಂದು ವರ್ಷದ ಹಿಂದೆಯೇ ಇಡೀ ಗ್ರಾಮವನ್ನು ಬಯಲು ಶೌಚಮುಕ್ತ ಗ್ರಾಮ ಎಂದು ಘೊಷಣೆ ಮಾಡಲಾಗಿದೆ. ಆದರೆ, ಅವರೇಕೆ ಶೌಚಗೃಹ ಕಟ್ಟಿಕೊಂಡಿಲ್ಲ ಎನ್ನುವುದು ಗೊತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಕಾಡು ಪ್ರಾಣಿಗಳ ಭಯ: ತಿಗಳರದೊಡ್ಡಿ ಗ್ರಾಮ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವುದರಿಂದ ಚಿರತೆ ಮತ್ತು ಕರಡಿ ಕಾಟ ಹೆಚ್ಚಿದೆ. ರಸ್ತೆ ಸರಿ ಇಲ್ಲದ ಕಾರಣ ರಾತ್ರಿ ವೇಳೆ ಗ್ರಾಮಕ್ಕೆ ಹೋಗುವುದೇ ಭಯ ತರುತ್ತದೆ. ಗ್ರಾಮದಲ್ಲಿ ಸಾಕುಪ್ರಾಣಿಗಳಾದ ನಾಯಿ, ಮೇಕೆ, ಕುರಿಗಳನ್ನು ಚಿರತೆಗಳು ಹೊತ್ತೊಯ್ದ ಉದಾಹರಣೆ ಸಾಕಷ್ಟಿದೆ.

ಗ್ರಾಮದ ಎಲ್ಲರಿಗೂ ಮನೆ ಕಟ್ಟಿಕೊಳ್ಳಲು ವಸತಿ ಯೋಜನೆಯಡಿ ಆಯ್ಕೆ ಮಾಡಲಾಗಿದೆಯಾದರೂ, ಯಾರೂ ಮುಂದೆ ಬರುತ್ತಿಲ್ಲ. ಒಂದು ವರ್ಷದ ಹಿಂದೆಯೇ ತಿಗಳರದೊಡ್ಡಿಯನ್ನು ಬಯಲು ಶೌಚಮುಕ್ತ ಗ್ರಾಮವೆಂದು ಘೊಷಿಸಲಾಗಿದೆ. ಬೀದಿದೀಪ ಸಮಸ್ಯೆ ಸರಿಪಡಿಸಲಾಗುವುದು.

| ಮುನಿಯಪ್ಪ, ಗ್ರಾಪಂ ಅಭಿವೃದ್ಧಿ ಅಧಿಕಾರಿ, ಕೂಟಗಲ್ ಗ್ರಾಪಂ

 

ನಮಗೆ ಶೌಚಗೃಹಗಳಿಲ್ಲ. ಕತ್ತಲಾದ ನಂತರವೇ ಬಹಿರ್ದೆಸೆಗೆ ಹೋಗಬೇಕು. ಜಮೀನುಗಳಿಗೆ ಹೋದರೆ ಮಾಲೀಕರು ಬೈಯುತ್ತಾರೆ ಎಂಬ ಚಿಂತೆ ಒಂದುಕಡೆಯಾದರೆ, ಕಾಡು ಪ್ರಾಣಿಗಳ ದಾಳಿಯ ಆತಂಕದಲ್ಲಿಯೇ ಹೋಗಬೇಕಾಗಿದೆ.

| ಪುಟ್ಟ ನಂಜಮ್ಮ, ಚಿಕ್ಕಮುತ್ತಮ್ಮ, ಗ್ರಾಮದ ಮಹಿಳೆಯರು.

 

ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮನೆ, ಶೌಚಗೃಹ, ಚರಂಡಿ ಹೀಗೆ ಹೇಳುತ್ತಾ ಹೋದರೆ ಬಹುತೇಕ ಏನೂ ಇಲ್ಲದ ಗ್ರಾಮ ಇದಾಗಿದೆ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

| ಶ್ರೀನಿವಾಸ್, ಸುರೇಶ್ , ಗ್ರಾಮಸ್ಥರು

Leave a Reply

Your email address will not be published. Required fields are marked *