ತಿಂಗಳಾಂತ್ಯಕ್ಕೆ ಸಂಬಳ ನೀಡುವ ಭರವಸೆ

ಕುಮಟಾ: ಕಳೆದ 8 ತಿಂಗಳಿನಿಂದ ಸಂಬಳ ಪಾವತಿ ಆಗದ್ದರಿಂದ ಹೋರಾಟ ನಡೆಸಿರುವ ಬಿಎಸ್​ಎನ್​ಎಲ್ ಗುತ್ತಿಗೆ ಆಧಾರಿತ ದಿನಗೂಲಿ ನೌಕರರು ಕುಮಟಾ ಕಚೇರಿಗೆ ಮಂಗಳವಾರ ಆಗಮಿಸಿದ್ದ ಪ್ರಧಾನ ವ್ಯವಸ್ಥಾಪಕ (ಜಿಎಂ)ರಾಜಕುಮಾರ ಅವರನ್ನು ಭೇಟಿಯಾಗಿ ಸಮಸ್ಯೆ ತೋಡಿಕೊಂಡರು.

ದಿನಗೂಲಿ ನೌಕರ ಮಂಜನಾಥ ಶೆಟ್ಟಿ ಮಾತನಾಡಿ, ಕುಮಟಾ ಹಾಗೂ ಹೊನ್ನಾವರ ವ್ಯಾಪ್ತಿಯಲ್ಲಿ ಕಳೆದ 15-20 ವರ್ಷಗಳಿಂದ ನಾವು ಬಿಎಸ್​ಎನ್​ಎಲ್​ನಲ್ಲಿ ಕೆಲಸ ಮಾಡುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ಸಮಯಕ್ಕೆ ಸರಿಯಾಗಿ ಸಂಬಳ ಸಿಗುತ್ತಿಲ್ಲ. ಅಲ್ಲದೆ, ಕಳೆದ 8 ತಿಂಗಳಿನಿಂದ ಸಂಬಳವೇ ಬಂದಿಲ್ಲ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮೌಖಿಕ ಹಾಗೂ ಲಿಖಿತವಾಗಿ ದೂರು ನೀಡಿದ್ದೇವೆ ಎಂದರು.

ಕಾರವಾರದಲ್ಲಿರುವ ಬಿಎಸ್​ಎನ್​ಎಲ್ ಕಾರ್ಯಾಲಯದ ಎದುರು ಧರಣಿ ಮಾಡಿ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೇವೆ. ಆದರೆ, ಯಾವುದೆ ಪ್ರಯೋಜನವಾಗಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದೆ. ಮೇ 3ರಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸುವ ನಿರ್ಧಾರ ಮಾಡಲಾಗಿತ್ತು. ಆದರೂ ನಾವು ಸದ್ಯ ಕೆಲಸ ಮಾಡುತ್ತಲೇ ನ್ಯಾಯಯುತ ಬೇಡಿಕೆಗಾಗಿ ಹೋರಾಟ ನಡೆಸಿದ್ದೇವೆ. ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಮನವಿ ಮಾಡಿದರು.

ಪ್ರಧಾನ ವ್ಯವಸ್ಥಾಪಕ ರಾಜಕುಮಾರ ಮಾತನಾಡಿ, ನಿಮ್ಮ ಸಮಸ್ಯೆ ನಮ್ಮ ಗಮನದಲ್ಲಿದೆ. ನಿಮ್ಮ ಪರಿಶ್ರಮದ ಆದಾಯ ಎಲ್ಲೂ ಹೋಗುವುದಿಲ್ಲ. ನಿಮಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಕಾರಣಾಂತರದಿಂದ ಸಂಬಳ ಬಟವಡೆ ವಿಳಂಬವಾಗಿದೆ. ಈ ತಿಂಗಳಾಂತ್ಯದೊಳಗೆ ಸಾಧ್ಯವಾದಷ್ಟು ಸಂಬಳ ಪಾವತಿ ಮಾಡಿಸುವುದಾಗಿ ಭರವಸೆ ನೀಡಿದರು.

ಬಿಎಸ್​ಎನ್​ಎಲ್ ಕಾರವಾರ ಕಚೇರಿ ಉಪ ಪ್ರಧಾನ ವ್ಯವಸ್ಥಾಪಕ ನಂದಿ, ಕುಮಟಾ ಹಾಗೂ ಹೊನ್ನಾವರ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಬಿಎಸ್​ಎನ್​ಎಲ್ ದಿನಗೂಲಿ ನೌಕರರಾದ ಗೋವಿಂದ ಮುಕ್ರಿ, ರತ್ನಾಕರ ನಾಯ್ಕ, ಶ್ರೀಧರ ನಾಯ್ಕ, ಆನಂದ ಬಂಟ, ಗಣಪತಿ ನಾಯ್ಕ, ಸುರೇಶ ಹಳ್ಳೇರ, ಶೇಖರ ನಾಯ್ಕ, ದಿನಕರ ಭಂಡಾರಿ, ಸಂತೋಷ ಶೆಟ್ಟಿ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *