ತಿಂಗಳಲ್ಲೇ 24 ಕೋಟಿ ರೂ. ಸಂಗ್ರಹ

ಸಂತೋಷ ವೈದ್ಯ ಹುಬ್ಬಳ್ಳಿ:ಶೇ. 5ರ ರಿಯಾಯಿತಿ ಪಡೆಯಲು ಹು-ಧಾ ಅವಳಿ ನಗರದ ಆಸ್ತಿ ಧಾರಕರು ಏಪ್ರಿಲ್ ತಿಂಗಳಲ್ಲಿ ಮುಗಿಬಿದ್ದು ಆಸ್ತಿ ತೆರಿಗೆ ಪಾವತಿಸಿದ್ದಾರೆ. ಇದರಿಂದ ಹು-ಧಾ ಮಹಾನಗರ ಪಾಲಿಕೆಯ ಖಜಾನೆಗೆ ಕಳೆದ ತಿಂಗಳೊಂದರಲ್ಲಿಯೇ 24 ಕೋಟಿ ರೂ. ಹರಿದು ಬಂದಿದೆ.

2019-20ನೇ ಆರ್ಥಿಕ ವರ್ಷಕ್ಕೆ ಪಾಲಿಕೆಯ ಆಸ್ತಿ ತೆರಿಗೆ ಗುರಿ 57 ಕೋಟಿ ರೂ. ಇಲ್ಲಿಯವರೆಗೆ (ಏಪ್ರಿಲ್ 1ರಿಂದ ಮೇ 20ರವರೆಗೆ) ಆಸ್ತಿ ತೆರಿಗೆ ಸಂಗ್ರಹ ಸುಮಾರು 30 ಕೋಟಿ ರೂ. ತಲುಪಿದೆ. ನಿಖರ ಲೆಕ್ಕ ಮೇ ಅಂತ್ಯಕ್ಕೆ ಲಭ್ಯವಾಗಲಿದೆ.

ಏಪ್ರಿಲ್ ತಿಂಗಳಲ್ಲಿ ಆಸ್ತಿ ಮೇಲಿನ ತೆರಿಗೆ ಮಾತ್ರದಿಂದ 17,01,18,295 ರೂ. ಸಂಗ್ರಹವಾಗಿದೆ. ಎಸ್​ಡಬ್ಲ್ಯುಎಂ (ಘನತ್ಯಾಜ್ಯ ನಿರ್ವಹಣೆ) ಸೆಸ್, ಇನ್​ಫ್ರಾ ಸೆಸ್ ಹಾಗೂ ಮೊಬೈಲ್ ಟಾವರ್ ಶುಲ್ಕವನ್ನು ಸೇರಿಸಿ ಆಸ್ತಿ ತೆರಿಗೆಯನ್ನು ಆಕರಣೆ ಮಾಡಲಾಗುತ್ತದೆ. (ಇದರಲ್ಲಿ ಎಸ್​ಡಬ್ಲ್ಯುಎಂ ಎಸ್ ಹಾಗೂ ಇನ್​ಫ್ರಾ ಸೆಸ್ ಕಡ್ಡಾಯವಾಗಿರುತ್ತದೆ). ಈ ಮೂರು ಸೇರಿಸಿ ಆಸ್ತಿ ತೆರಿಗೆಯಿಂದ ಒಟ್ಟಾರೆ 18,62,56,810 ರೂ. ಪಾಲಿಕೆ ಖಚಾನೆಗೆ ಭರ್ತಿಯಾಗಿದೆ. ಇದು ಕೇವಲ ಹು-ಧಾ ಒನ್ ಕೇಂದ್ರ ಹಾಗೂ ಪಾಲಿಕೆ ವಲಯ ಕಚೇರಿಗಳ ಮೂಲಕ ಸಂಗ್ರಹವಾಗಿರುವ ಮೊತ್ತ. ಇದಲ್ಲದೇಬ್ಯಾಂಕ್​ಗಳಲ್ಲಿ ಆರ್​ಟಿಜಿಎಸ್, ಚೆಕ್ ಹಾಗೂ ಡಿಡಿ ಮೂಲಕ ಸಂದಾಯವಾಗಿರುವ ಮೊತ್ತ 5.5 ಕೋಟಿ ರೂ. ಇರುತ್ತದೆ ಎಂದು ಪಾಲಿಕೆ ತಿಳಿಸಿದೆ. ಹು-ಧಾ ಒನ್ ಕೇಂದ್ರ, ಪಾಲಿಕೆ ವಲಯ ಕಚೇರಿಗಳು ಹಾಗೂ ಬ್ಯಾಂಕ್​ಗಳಲ್ಲಿ ಪಾವತಿಯಾಗಿರುವ ಒಟ್ಟಾರೆ ಆಸ್ತಿ ತೆರಿಗೆ ಮೊತ್ತ 24 ಕೋಟಿ ರೂ. ದಾಟಿದೆ.

ಮೇ 1ರಿಂದ 20ರ ವರೆಗೆ ಹು-ಧಾ ಒನ್ ಕೇಂದ್ರ ಹಾಗೂ ಪಾಲಿಕೆ ವಲಯ ಕಚೇರಿಗಳ ಮೂಲಕ 4,28,26,121 ರೂ. ಸಂಗ್ರಹವಾಗಿದೆ. ಬ್ಯಾಂಕ್​ಗಳಲ್ಲಿ ಆರ್​ಟಿಜಿಎಸ್, ಚೆಕ್ ಹಾಗೂ ಡಿಡಿ ಮೂಲಕ ಸಂದಾಯವಾಗಿರುವ ತೆರಿಗೆ ಮೊತ್ತ ಮೇ ಅಂತ್ಯಕ್ಕೆ ತಿಳಿದು ಬರಬೇಕಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪಾವತಿಯಾಗಿರುವ ತೆರಿಗೆ ಮೊತ್ತದ ವ್ಯತ್ಯಾಸವನ್ನು ಗಮನಿಸಿದರೆ ಆಸ್ತಿ ಮಾಲೀಕರು ರಿಯಾಯಿತಿಯ ಲಾಭ ಪಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಸ್ವಯಂ ಘೊಷಿತ ಆಸ್ತಿ ತೆರಿಗೆ ಪದ್ಧತಿ ಅಳವಡಿಸಿಕೊಂಡಿವೆ. ಅದರನ್ವಯ ಆರ್ಥಿಕ ವರ್ಷದ ಆರಂಭದಲ್ಲಿ ಅಂದರೆ ಏಪ್ರಿಲ್ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿಸಿದರೆ ತೆರಿಗೆ ಮೊತ್ತದ ಮೇಲೆ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಮೇ ಹಾಗೂ ಜೂನ್ ತಿಂಗಳಲ್ಲಿ ರಿಯಾಯಿತಿ ಇರುವುದಿಲ್ಲ. ಜುಲೈ ತಿಂಗಳಿನಿಂದ ಪ್ರತಿ ತಿಂಗಳಿಗೆ ಶೇ. 2ರಷ್ಟು ದಂಡ ಆಕರಣೆ ಮಾಡಲಾಗುತ್ತದೆ. ರಿಯಾಯಿತಿಯ ಲಾಭ ಪಡೆಯಲು ಹಾಗೂ ದಂಡದಿಂದ ತಪ್ಪಿಸಿಕೊಳ್ಳಲು ಹೆಚ್ಚಿನ ಆಸ್ತಿ ಮಾಲೀಕರು ಏಪ್ರಿಲ್ ತಿಂಗಳಲ್ಲಿಯೇ ತೆರಿಗೆ ಪಾವತಿಸುತ್ತಾರೆ.

ಪ್ರಸಕ್ತ ಸಾಲಿನ ಏಪ್ರಿಲ್-ಮೇ ತಿಂಗಳಲ್ಲಿ ಸುಮಾರು 30 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. 2018-19ಕ್ಕೆ ಹೋಲಿಸಿದರೆ ಇದು 2.5 ಕೋಟಿ ರೂ. ಹೆಚ್ಚಳವಾಗಿದೆ.

|ಎಂ.ಗಂಗಣ್ಣ ಉಪ ಆಯುಕ್ತ (ಕಂದಾಯ), ಹು-ಧಾ ಮಹಾನಗರ ಪಾಲಿಕೆ

Leave a Reply

Your email address will not be published. Required fields are marked *