ತಿಂಗಳಲ್ಲಿ ತೀವ್ರಗೊಳ್ಳಲಿದೆ ಕುಡಿಯುವ ನೀರಿನ ಸಮಸ್ಯೆ !

| ಬಾಬು ಸುಂಕದ

ಹುಕ್ಕೇರಿ: ಬಿಸಿಲ ಬೇಗೆ ಏರುತ್ತಿದ್ದು, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಸದ್ಯಕ್ಕೆ ಸಮಸ್ಯೆ ಇಲ್ಲವಾದರೂ ಮಾರ್ಚ್ ಕೊನೆಯಿಂದ ಜೂನ್ 15ರವರೆಗೆ ತಾಲೂಕಿನ ಯಾದಗೂಡ, ಹಂದಿಗೂಡ, ಬೋರಗಲ್ಲ, ಬಾಡ, ಕಣಗಲಾ, ಶಿಪ್ಪುರ ಒಳಗೊಂಡು 14 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆ ಇದೆ.

ಹಿರಣ್ಯಕೇಶಿ, ಘಟಪ್ರಭಾ ಮತ್ತು ಮಾರ್ಕಂಡೇಯ ಈ 3 ನದಿಗಳು ಹಾಗೂ ಹಿಡಕಲ್ ಮತ್ತು ಶಿರೂರ 2 ಜಲಾಶಯಗಳಿದ್ದರೂ ತಾಲೂಕಿನಲ್ಲಿ ನೀರಿನ ಬವಣೆ ತಪ್ಪಿಲ್ಲ. ಉತ್ತರ ಮತ್ತು ಪಶ್ಚಿಮ ಭಾಗದ ಕೆಲ ಗ್ರಾಮಗಳು ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಸಾಮಾನ್ಯ ಎನಿಸಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಶಾಸಕ ಉಮೇಶ ಕತ್ತಿ ಅವರು ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಜತೆಗೆ ಮುನ್ನೆಚ್ಚರಿಕೆ ವಹಿಸಲು ತಾಲೂಕಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

ಸಮಸ್ಯೆ ನೀಗಿಸಲು ಏನು ಕ್ರಮ?: ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಉದ್ದೇಶದಿಂದ ಟಾಸ್ಕ್ ಪೋರ್ಸ್ ಸಮಿತಿ ಪ್ರತಿ 15 ದಿನಕ್ಕೊಮ್ಮೆ ಸಭೆ ಸೇರಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಸೂಚಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಯ 14 ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಹೆಚ್ಚು ಆದ್ಯತೆ ನೀಡಲು ನಿರ್ದೇಶಿಸಿದ್ದು, ಹೆಚ್ಚಿನ ಅನುದಾನಕ್ಕೆ ಶಾಸಕರ ಅನುದಾನದಿಂದ ನೆರವು ನೀಡುವುದಾಗಿ ತಿಳಿಸಲಾಗಿದೆ.

ಎಲಿಮುನ್ನೋಳಿಯಿಂದ ಯಾದಗೂಡಕ್ಕೆ ಹೋಗುವ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಪೈಪಲೈನ್‌ನ್ನು ಹಣಜ್ಯಾನಟ್ಟಿ ಗ್ರಾಮಸ್ಥರು ಕೊರೆದು ಅಕ್ರಮವಾಗಿ ನೀರು ಪಡೆಯುತ್ತಿದ್ದಾರೆ. ಇದರಿಂದ ಯಾದಗೂಡ ನಿವಾಸಿಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ. ತಾಲೂಕು ಪಂಚಾಯಿತಿ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದವರು ಸಮಸ್ಯೆ ಆಲಿಸುತ್ತಿಲ್ಲ ಎಂದು ಯಾದಗೂಡ ಗ್ರಾಮಸ್ಥರು ದೂರುತ್ತಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಆಡಳಿತ ಚುನಾವಣೆಯತ್ತ ಕೇಂದ್ರೀಕೃತವಾಗುತ್ತದೆ. ಹೀಗಾದರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸಾಧ್ಯವಾಗಬಹುದೇ ಎಂದು ಜನರು ಕೇಳುತ್ತಿದ್ದಾರೆ.

ಲೋಕಸಭೆ ಚುನಾವಣೆ ನೆಪದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ನಿರ್ಲಕ್ಷ್ಯ ವಹಿಸಿದರೆ ಸಂಬಂಧಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ.ಗ್ರಾಮ ಪಂಚಾಯಿತಿ ಅನುದಾನದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆ ನೀಡಬೇಕು.ಹಣಕಾಸಿನ ತೊಂದರೆಯಾದಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ಗಮನಕ್ಕೆ ತಕ್ಷಣ ತರಬೇಕು ಎಂದು ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ.

ಈಗಾಗಲೇ ತಾಲೂಕಿನ 80 ಹಳ್ಳಿಗಳಿಗೆ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ 169 ಕೋಟಿ ರೂ.ವೆಚ್ಚದ ಜಲಧಾರಾ ಯೋಜನೆಗೆ ನೀಲನಕ್ಷೆ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಯೋಜನೆ ಹಾಸನದಲ್ಲಿ ಮಾತ್ರ ಜಾರಿಯಲ್ಲಿದ್ದು ಮಂಜೂರಾತಿ ದೊರಕಿದಲ್ಲಿ ರಾಜ್ಯದ ಎರಡನೇ ತಾಲೂಕು ನಮ್ಮದಾಗುತ್ತದೆ.

ಹುಕ್ಕೇರಿ ಮತ್ತು ಸಂಕೇಶ್ವರ ಪಟ್ಟಣಗಳಿಗೆ ನಿರಂತರ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ. ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ನನ್ನ ಗಮನಕ್ಕೆ ತಂದಲ್ಲಿ ಪರಿಹರಿಸಲಾಗುವುದು.
| ಉಮೇಶ ಕತ್ತಿ. ಶಾಸಕರು ಮತ್ತು ಅಧ್ಯಕ್ಷರು ಟಾಸ್ಕ್‌ಪೋರ್ಸ ಸಮಿತಿ

ಉಳ್ಳಾಗಡ್ಡಿ ಖಾನಾಪುರ ಭಾಗದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಕೈಗೊಂಡಿರುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಿಂದ ಯಾವುದೇ ಸಮಸ್ಯೆ ಇಲ್ಲ. ತಾಂತ್ರಿಕ ತೊಂದರೆಯಿಂದ ಸಮಸ್ಯೆ ಉಂಟಾದರೂ ತಾತ್ಕಾಲಿಕವಾಗಿರುತ್ತದೆ. – ಎಂ.ಎಸ್.ಕುಂದಿ ಗವನಾಳ ಸಮಸ್ಯೆ ಬಾಧಿತ ಪ್ರದೇಶಗಳಿಗೆ ಟ್ಯಾಂಕರ್ ಅಥವಾ ಬೇರೆ ವ್ಯವಸ್ಥೆ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುತ್ತೇನೆ. ಜನರು ನೀರನ್ನು ಪೋಲಾಗದಂತೆ ಹಿತಮಿತವಾಗಿ ಬಳಸಲು ಕೋರುತ್ತೇನೆ.
| ರೇಷ್ಮಾ ತಾಳಿಕೋಟೆ, ತಹಸೀಲ್ದಾರ್ ಹುಕ್ಕೇರಿ

ಹಿಡಕಲ್ ಜಲಾಶಯದಿಂದ ಸರಬರಾಜು ಆಗುವ ಪೈಪಲೈನ್ ಸೋರಿಕೆಯಿಂದ ಸರಿಯಾಗಿ ನೀರು ಬರುತ್ತಿಲ್ಲ. ಗ್ರಾಮಸ್ಥರು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. 2 ಕಿ.ಮೀ ವರೆಗೆ ತೆರಳಿ ಬೋರವೆಲ್‌ಗಳಿಂದ ನೀರನ್ನು ತರುವ ಪರಿಸ್ಥಿತಿ ನಮ್ಮದಾಗಿದೆ.
| ಶಿವನಗೌಡ ಪಾಟೀಲ ಗ್ರಾ.ಪಂ ಮಾಜಿ ಉಪಾಧ್ಯಕ್ಷ,ಯಾದಗೂಡ.

ಎಲ್ಲವೂ ಸರಿ ಇದೆ. ಕುಡಿಯುವ ನೀರಿನ ಸಮಸ್ಯೆಯೇ ಇಲ್ಲ.
| ರವೀಂದ್ರ ಮುರಗಾಲಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಸಹಾಯಕ ಅಭಿಯಂತ.