ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಫೆ.2ರಂದು

ರಟ್ಟಿಹಳ್ಳಿ:ನೂತನ ರಟ್ಟಿಹಳ್ಳಿ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಫೆ. 2ರಂದು ನಡೆಯಲಿದೆ. ಸರ್ವಾಧ್ಯಕ್ಷರಾಗಿ ಮಾಸೂರಿನ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಹ.ಮು. ತಳವಾರ ಅವರನ್ನು ಕ.ಸಾ.ಪ. ತಾಲೂಕು ಘಟಕ ಮತ್ತು ತಜ್ಞರ ಸಮಿತಿ ಆಯ್ಕೆ ಮಾಡಿದೆ.

ಸ್ಥಳೀಯ ಕಬ್ಬಿಣಕಂತಿ ಮಠದ ಆವರಣದಲ್ಲಿ ಮಂಗಳವಾರ ಜರುಗಿದ ಸರ್ವಾಧ್ಯಕ್ಷರ ಆಯ್ಕೆ ಸಭೆಯಲ್ಲಿ ಮಾತನಾಡಿದ ಕಬ್ಬಿಣಕಂತಿಮಠದ ಶಿವಲಿಂಗಶಿವಾಚಾರ್ಯ ಸ್ವಾಮೀಜಿ, ಸರ್ವಾಧ್ಯಕ್ಷರ ಆಯ್ಕೆಗೆ ಐವರ ಹೆಸರಲ್ಲಿ ಇಬ್ಬರ ಹೆಸರು ಅಂತಿಮಗೊಳಿಸಲಾಗಿತ್ತು. ಅವರಲ್ಲಿ ವಯೋಮಾನ ಆಧಾರದಲ್ಲಿ ಹ.ಮು. ತಳವಾರ ಅವರನ್ನು ಆಯ್ಕೆಗೊಳಿಸಲಾಗಿದೆ. ಸರ್ವಾಧ್ಯಕ್ಷರ ಅಂತಿಮ ಆಯ್ಕೆ ಪಟ್ಟಿಯಲ್ಲಿದ್ದ ಮತ್ತೊಬ್ಬ ಸಾಹಿತಿ ಎಂ.ಎಚ್. ಹರವಿಶೆಟ್ರ ಸಹ ಈ ನಿರ್ಣಯಕ್ಕೆ ಆತ್ಮಸಂತೋಷದಿಂದ ಸಮ್ಮತಿಸಿದ್ದಾರೆ. ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಸಂಪನ್ಮೂಲ ಕ್ರೋಡೀಕರಣ ಅವಶ್ಯವಾಗಿದೆ. ತಾಲೂಕಿನ ಎಲ್ಲ ಗ್ರಾಮಸ್ಥರು, ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳ ಸಹಕಾರ ಅಗತ್ಯವಿದೆ ಎಂದರು.

ಸಾಹಿತಿ ಹ.ಮು. ತಳವಾರ ಮಾತನಾಡಿ, ಎಂ.ಎಚ್. ಹರವಿಶೆಟ್ರ ಮತ್ತು ನಾವು ಒಂದೇ ಜೀವ, ಎರಡು ದೇಹವಿದ್ದಂತೆ. ಅನೇಕ ಕೃತಿಗಳನ್ನು ಅವರ ಸಹಕಾರದಿಂದ ರಚಿಸಿದ್ದೇನೆ. ನೂತನ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ಎಂದರು.

ಕಸಾಪ ಘಟಕಾಧ್ಯಕ್ಷ ಸೋಮೇಶ್ವರ ಮೇಸ್ತಾ, ನಿವೃತ್ತ ಉಪನ್ಯಾಸಕ ಎಂ.ಎಚ್. ಹರವಿಶೆಟ್ರ, ಪರಿಷತ್ ಕಾರ್ಯಾಧ್ಯಕ್ಷ ಆರ್.ಎನ್. ಗಂಗೋಳ, ಸಾಹಿತಿ ನಿಂಗಪ್ಪ ಚಳಗೇರಿ, ಸಮ್ಮೇಳನದ ರೂಪುರೇಷೆಗಳ ಬಗ್ಗೆ ವಿವರಿಸಿದರು.

ಪೂರ್ವಭಾವಿ ಸಭೆ: ಜ. 23ರಂದು ಸಂಜೆ 5ಕ್ಕೆ ಕಸಾಪ ಸಮ್ಮೇಳನ ಪೂರ್ವಭಾವಿ ಸಭೆ ಜರುಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಆಗಮಿಸಬೇಕು ಎಂದು ಸಭೆಯಲ್ಲಿ ಕೋರಲಾಯಿತು.

ಮೌನಾಚರಣೆ: ತುಮಕೂರ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗೆ ಮೌನ ಆಚರಿಸಲಾಯಿತು.

ಎಪಿಎಂಸಿ ಅಧ್ಯಕ್ಷ ವಸಂತ ದ್ಯಾವಕ್ಕಳವರ, ಉಜಿನಪ್ಪ ಬಣಕಾರ, ಎಸ್.ಬಿ. ಪಾಟೀಲ, ಸುರೇಶ ಬೆಣ್ಣಿ, ಮಂಜುನಾಥ ತಳವಾರ, ನಿಂಗನಗೌಡ ಹಳ್ಳಪ್ಪಗೌಡ್ರ, ಪ್ರಭಯ್ಯ ವಿರಕ್ತಮಠ, ನಾಗರಾಜ ಹಿರೇಮಠ, ಎಂ.ಆರ್. ಬಸವನಾಳಮಠ, ಸಿದ್ದೇಶ ಕೊರಡಿ, ಮಲ್ಲೇಶಪ್ಪ ಗುತ್ತೆಣ್ಣನವರ, ಸಂತೋಷ ಹಳ್ಳಪ್ಪಗೌಡ್ರ, ಶಂಭಣ್ಣ ಗೂಳಪ್ಪನವರ, ಇತರರಿದ್ದರು. ಸಿ.ಎಸ್. ಚಕ್ರಸಾಲಿ, ನಜೀರಸಾಬ್ ದೊಡ್ಮನಿ ನಿರ್ವಹಿಸಿದರು.