ತಾಲೂಕಾಸ್ಪತ್ರೆಗೆ ಆರೋಗ್ಯ ಸಚಿವರ ದಿಢೀರ್ ಭೇಟಿ

ನರಗುಂದ: ಪಟ್ಟಣದ ಬಾಬಾಸಾಹೇಬ ಭಾವೆ 100 ಹಾಸಿಗೆಯ ತಾಲೂಕಾಸ್ಪತ್ರೆಗೆ ಭಾನುವಾರ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆಲ ಕೊಠಡಿಗಳ ಕೀಲಿಯೊಂದಿಗೆ ತೆರಳಿದ ಸಚಿವರು, ಗೈರಾಗಿದ್ದ ಆಸ್ಪತ್ರೆಯ ದ್ವಿತೀಯ ದರ್ಜೆ ಸಹಾಯಕ ಬೀರಪ್ಪ ಗೋರವನಕೊಳ್ಳ ಅವರನ್ನು ಕರ್ತವ್ಯ ಲೋಪದಡಿ ಅಮಾನತು ಮಾಡುವಂತೆ ಡಿಎಚ್​ಒ ವಿರೂಪಾಕ್ಷ ಮಾದೇನೂರ ಅವರಿಗೆ ಸೂಚಿಸಿದರು.

‘2016ರಿಂದ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ‘ಡಿ’ ದರ್ಜೆ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಈ ಕುರಿತು ಹಿಂದಿನ ನೌಕರರನ್ನೇ ನೇಮಿಸಿಕೊಳ್ಳುವಂತೆ ತಾವು ಹಿಂದೆ ಆದೇಶಿಸಿದ್ದರೂ ನಮ್ಮನ್ನು ಸಂಬಂಧಪಟ್ಟ ಅಧಿಕಾರಿಗಳು ಕರ್ತವ್ಯಕ್ಕೆ ನೇಮಿಸಿಕೊಳ್ಳುತ್ತಿಲ್ಲ’ ಎಂದು ಕರ್ತವ್ಯ ವಂಚಿತ ಕೆಲ ‘ಡಿ’ ದರ್ಜೆ ನೌಕರರು ಸಚಿವರ ಎದುರು ಅಲವತ್ತುಕೊಂಡರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆಯೇ ಗದಗ ಜಿಪಂ ಸಾಮಾನ್ಯ ಸಭೆಯಲ್ಲಿ ಮೊದಲಿದ್ದ ‘ಡಿ’ ದರ್ಜೆ ನೌಕರರನ್ನು ಪುನಃ ಸೇವೆಯಲ್ಲಿ ಮುಂದುವರಿಸುವಂತೆ ಕೈಗೊಂಡ ನಿರ್ಣಯಕ್ಕೆ ಶಿಫಾರಸು ನೀಡಿದ್ದೆ. ಆದರೆ, ಅವರನ್ನು ಸೇವೆಗೆ ಸೇರಿಸಿಕೊಳ್ಳುವಲ್ಲಿ ಗುತ್ತಿಗೆದಾರ ಕಂಪನಿಯವರು ತಾರತಮ್ಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಚುನಾವಣೆ ನಂತರ ಪರಿಶೀಲಿಸಲಾಗುವುದು ಎಂದು ಹೇಳಿದರು.

ಆಸ್ಪತ್ರೆ ವೈದ್ಯರು, ಸ್ಟಾಫ್ ನರ್ಸ್​ಗಳು ಸಮಯಕ್ಕೆ ಸರಿಯಾಗಿ ಬಂದು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ನಿಷ್ಕಾಳಜಿ ತೋರುವ ವೈದ್ಯರು, ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು. ಖಾಲಿ ಇರುವ ವೈದ್ಯರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಯಲ್ಲಿ ಬೆಳಕಿನ ಕೊರತೆಯಿದೆ. ಅಗತ್ಯವಿದ್ದೆಡೆ ವಿದ್ಯುತ್ ಬಲ್ಬ್​ಗಳನ್ನು ಹಾಕಿಸಬೇಕು ಎಂದು ಸಚಿವರು ಡಿಎಚ್​ಒ ಅವರಿಗೆ ಸೂಚಿಸಿದರು. ಬಳಿಕ ಆಸ್ಪತ್ರೆಯಲ್ಲಿರುವ ವಿವಿಧ ವಿಭಾಗಗಳ ಸೌಲಭ್ಯಗಳನ್ನು ಪರಿಶೀಲಿಸಿದರು.

ತಾಲೂಕು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರವೀಣ ಮೇಟಿ. ಡಾ. ಜಡೇಶ ಭದ್ರಗೌಡ್ರ, ಡಾ. ಸುಪ್ರಿಯಾ, ಆಸ್ಪತ್ರೆ ಸಿಬ್ಬಂದಿ ಮೌಲಾಸಾಬ್ ಠಾಣೇದ, ಸಂತೋಷ, ಭಾರತಿ ಪಾಟೀಲ, ಹಸೀನಾ ನದಾಫ್, ಇತರರಿದ್ದರು.