ಬರ ಪರಿಹಾರ ನಿರ್ವಹಣೆಯಲ್ಲಿ ಕಲಬುರಗಿ ಜಿಲ್ಲಾಡಳಿತ ನಿರ್ಲಕ್ಷ್ಯ: ಶಾಸಕ ಖಂಡನೆ

ಕಲಬುರಗಿ: ಆಳಂದ ತಾಲೂಕಿನಾದ್ಯಂತ ಕುಡಿವ ನೀರಿಗೆ ತೊಂದರೆಯಾಗಿದ್ದು, ಬರ ಪರಿಹಾರ ನಿರ್ವಹಣೆಯಲ್ಲಿ ಜಿಲ್ಲಾಡಳಿತವು ನಿರ್ಲಕ್ಷ್ಯ ವಹಿಸಿದೆ ಎಂದು ಆಳಂದ ಶಾಸಕ ಸುಭಾಷ ಗುತ್ತೇದಾರ ಅಸಮಾಧಾನ ವ್ಯಕ್ತ ಪಡಿಸಿದರು.

ತಾಲೂಕಿನ 103ಹಳ್ಳಿಗಳಲ್ಲಿ ಮತ್ತು 36 ತಾಂಡಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಜಿಲ್ಲೆಯ ಉಳಿದ ಎಲ್ಲ ತಾಲೂಕುಗಳಿಗೆ ಬರಪರಿಹಾರದಡಿ ಕುಡಿಯುವ ನೀರಿಗಾಗಿ ತಲಾ 1.50ಕೋಟಿ ರೂ.ಬಿಡುಗಡೆ ಮಾಡಿದೆ. ಆದರೆ, ಆಳಂದ ತಾಲೂಕಿನ ಕುಡಿಯುವ ನೀರಿನ ಸಮಸ್ಯೆಪರಿಹಾರಕ್ಕೆ ಜಿಲ್ಲಾಡಳಿತವು ಕೇವಲ 50ಲಕ್ಷ ರೂ.ಮಾತ್ರ ಬಿಡುಗಡೆ ಮಾಡಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮಳೆಯ ಕೊರತೆಯಿಂದಾಗಿ ಅಂತರ್ಜಲ ಸಂಪೂರ್ಣ ಬತ್ತಿ ಹೋಗಿದ್ದರಿಂದ ಕೊಳವೆಬಾವಿಗಳು ವಿಫಲವಾಗುತ್ತಿವೆ. ಅನುದಾನದ ಅಲಭ್ಯತೆಯಿಂದಾಗಿ ಯಾವುದೇ ರೀತಿಯ ಪರಿಹಾರ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಹಿಂಗಾರು ಮತ್ತು ಮುಂಗಾರು ಬರಪರಿಶೀಲನೆಗೆ ಬಂದಿದ್ದ ಅಧಿಕಾರಿಗಳ ತಂಡವು ಸಕರ್ಾರಕ್ಕೆ ತಪ್ಪು ಮಾಹಿತಿ ನೀಡಿದ್ದರ ಪರಿಣಾಮವಾಗಿ ತಾಲೂಕಿಗೆ ಅನ್ಯಾಯವಾಗಿದೆ. ಅಧಿಕಾರಿಗಳು ಮಾಡಿದ ತಪ್ಪಿಗೆ ತಾಲೂಕಿನ ಜನ ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯಸರ್ಕಾರ ಕೇವಲ ತಾಂತ್ರಿಕ ಕಾರಣ ಮುಂದಿಟ್ಟುಕೊಂಡು ಬರಗಾಲದಲ್ಲಿಯೂ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಬರಗಾಲದ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ ತಾಲೂಕಿನಲ್ಲಿ ಎದುರಾಗಿರುವ ಭೀಕರ ಪರಿಸ್ಥಿತಿಯನ್ನು ಎದುರಿಸಲು ಅನುಕೂಲವಾಗುವಂತೆ ಟ್ಯಾಂಕರ್ ಮತ್ತು ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಒದಗಿಸಲು ಜಿಲ್ಲಾಧಿಕಾರಿ ನಿಧಿಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಆಳಂದ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳ, ಜಿಪಂ ಸದಸ್ಯ ಮಹಬೂಬ್ ನಿಂಬರ್ಗ, ಮುಖಂಡ ರಾಜಶೇಖರ ಮಲಶೆಟ್ಟಿ ಇತರರಿದ್ದರು.

ರೈತರಿಗೆ ಒಮ್ಮೆ ನೀರು ಬಿಡಿ

ಅಮರ್ಜಾ ನದಿ ಪಾತ್ರದ ಹೊಲಗಳಲ್ಲಿ ರೈತರು ಬೆಳೆದಿರುವ ಕಬ್ಬಿನ ಬೆಳೆಗೆ ಕೇವಲ ಒಂದು ಬಾರಿ ನೀರು ಬಿಡುವ ಅಗತ್ಯತೆ ಇದೆ. ಸಧ್ಯಕ್ಕೆ ಅಮರ್ಜಾ ನದಿಯಲ್ಲಿ 2.50 ಟಿಎಂಸಿ ನೀರಿನ ಸಂಗ್ರಹವಿದೆ. ಈ ಪ್ರಾಂತ್ಯದಲ್ಲಿ ರೈತರ ಪಂಪಸೆಟ್ನ ವಿದ್ಯುತ್ ಸಂಪರ್ಕ ಕಟ್ ಮಾಡಿದ್ದರಿಂದ ಕಬ್ಬು ಒಣಗುತ್ತಿದೆ. ಬೆಳೆದು ನಿಂತ ಬೆಳೆ ಕೈಗೆ ಬಂದರೆ ರೈತರಿಗೆ ಅನುಕೂಲವಾಗುತ್ತದೆ. ಮತ್ತೆ ವಿದ್ಯುತ್ ಸಂಪರ್ಕ ಕಲ್ಪಿಸಿ ರೈತರಿಗೆ ಅನುಕೂಲ ಮಾಡಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಮನವಿ ಮಾಡಿದರು.