ತಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಪ್ರಸ್ತಾವ

ನವಲಗುಂದ: ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆಲಸಗಳಿಗೆ ಯಾವುದೇ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿರುವ ತಾಪಂ ಅಧ್ಯಕ್ಷೆ ವೆಂಕಮ್ಮ ಚಾಕಲಬ್ಬಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ಕರೆಯುವಂತೆ 13 ಸದಸ್ಯರು ತಾಪಂ ಇಒ ಪವಿತ್ರಾ ಪಾಟೀಲ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ನವಲಗುಂದ ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್​ನ ಐವರು, ಬಿಜೆಪಿ ಮತ್ತು ಜೆಡಿಎಸ್​ನ ತಲಾ ನಾಲ್ವರು, ಒಬ್ಬರು ಪಕ್ಷೇತರ ಸೇರಿ 14 ಸದಸ್ಯರಿದ್ದಾರೆ. ಮೂರು ಪಕ್ಷಕ್ಕೆ ಬಹುಮತ ಸಾಧ್ಯವಾಗದಿದ್ದರಿಂದ ಕಾಂಗ್ರೆಸ್​ನ ಐದು ಸದಸ್ಯರು ಬಿಜೆಪಿಯ 4 ಸದಸ್ಯರ ಬಾಹ್ಯ ಬೆಂಬಲದೊಂದಿಗೆ ಅಧಿಕಾರ ಹಿಡಿದಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷದವರೇ ಆದ ವೆಂಕವ್ವ ಚಾಕಲಬ್ಬಿ ಅಧ್ಯಕ್ಷೆಯಾಗಿದ್ದರು. ಕೆ.ಎನ್. ಗಡ್ಡಿ ನಾಯಕತ್ವದಲ್ಲಿ ಕಾಂಗ್ರೆಸ್ ಮುಖಂಡರು ಸಭೆ ಸೇರಿ ಮೊದಲು 30 ತಿಂಗಳ ಅವಧಿಗೆ ವೆಂಕವ್ವ ಚಾಕಲಬ್ಬಿ, ಇನ್ನುಳಿದ ಅವಧಿಗೆ ಅನ್ನಪೂರ್ಣ ಶಿರಹಟ್ಟಿಮಠ ಅವರಿಗೆ ಅಧ್ಯಕ್ಷ ಸ್ಥಾನ ಅಧಿಕಾರ ಹಂಚಿಕೆ ಮಾಡಬೇಕೆಂದು ಒಳಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಈಗ ನಾಯಕರ ನಿಷ್ಠೆ ಮರೆತ ವೆಂಕವ್ವ ಚಾಕಲಬ್ಬಿ ಅವರು ಅವಧಿ ಮೀರಿ ಮೂರು ತಿಂಗಳಾದರೂ ಅಧಿಕಾರ ಬಿಟ್ಟುಕೊಡುತ್ತಿಲ್ಲ. ಒಪ್ಪಂದದಂತೆ ರಾಜೀನಾಮೆ ಕೊಡದೇ ಕಾಂಗ್ರೆಸ್ ನಾಯಕರ ಮಾತಿನ ವಿರುದ್ಧ ನಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಚಾಕಲಬ್ಬಿಯವರು ನಾನೇ ಐದು ವರ್ಷ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತೇನೆ. ನನ್ನ ಮೂರನೇ ಕಣ್ಣು ನೀವು ನೋಡಿಲ್ಲ ಎಂದು ಕೆಲ ಸದಸ್ಯರ ಬಳಿ ಆಡಿಕೊಂಡ ಪರಿಣಾಮ ಸದಸ್ಯರಲ್ಲಿಯೇ ಭಿನ್ನಾಭಿಪ್ರಾಯ ಉಂಟಾಗಿ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದಾರೆ.
ನಾಯಕರ ಒಮ್ಮತ

ಕೆ.ಎನ್. ಗಡ್ಡಿ, ಶಾಸಕ ಮುನೇನಕೊಪ್ಪ, ಮಾಜಿ ಶಾಸಕ ಕೋನರಡ್ಡಿ ಮತ್ತು ಕಾಂಗ್ರೆಸ್ ಮುಖಂಡ ವಿಜಯ ಕುಲಕರ್ಣಿ ಒಮ್ಮತದ ಮೇರೆಗೆ ತಾಪಂ ಸದಸ್ಯರು ಸೇರಿ ವೆಂಕವ್ವ ಚಾಕಲಬ್ಬಿ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ನಿರ್ಧರಿಸಿದ್ದಾರೆ. ತಾಲೂಕಿನ ಅಭಿವೃದ್ಧಿಗೋಸ್ಕರ ಮತ್ತು ಪಕ್ಷದ ಹಿತದೃಷ್ಟಿಯಿಂದ, ಒಳ ಒಪ್ಪಂದದಂತೆ ಯಾರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೋ, ಆ ಅವಧಿಯೊಳಗೆ, ಅವರು ರಾಜೀನಾಮೆ ಸಲ್ಲಿಸಬೇಕು. ಯಾವುದೇ ಪಕ್ಷ ಇರಲಿ. ಆ ಅಭ್ಯರ್ಥಿ ಮಾತಿಗೆ ತಪ್ಪಿದರೆ, ವಚನಭ್ರಷ್ಟರಾದರೆ, ಮುಂದೆ ಇಂತಹ ಘಟನೆ ನಡೆಯಬಾರದೆಂದು ಮಂದಿನವರಿಗೆ ದಿಕ್ಸೂಚಿಯಾಗಲೆಂದು ಅವಿಶ್ವಾಸ ನಿರ್ಣಯ ಪ್ರಸ್ತಾವನೆ ಮಂಡಿಸಿದ್ದಾರೆ.