ಅವಿನ್ ಶೆಟ್ಟಿ ಉಡುಪಿ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿಯೋಜನೆ, ವರ್ಗಾವಣೆ ರದ್ದುಗೊಳಿಸಿ ಮೂಲ ಸ್ಥಾನಗಳಿಗೆ ಹಿಂದಿರುಗಿಸುವಂತೆ ಸರ್ಕಾರ ಈ ಹಿಂದೆ ಎರಡು ಬಾರಿ ಆದೇಶ ನೀಡಿದ್ದರೂ ಮೇಲಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕೆಲವು ಪಂಚಾಯಿತಿಯ ಪಿಡಿಒಗಳು ತಾಲೂಕು ಪಂಚಾಯಿತಿಗಳಲ್ಲೇ ಠಿಕಾಣಿ ಹೂಡುವಂತಾಗಿದೆ. ಕಳೆದ ವರ್ಷ ಸ್ಥಳೀಯ ಮಟ್ಟದಲ್ಲಿ ವರ್ಗಾವಣೆ, ನಿಯೋಜನೆಗೊಂಡವರನ್ನು ತಕ್ಷಣ ಮೂಲ ಸ್ಥಾನಕ್ಕೆ ಕಳುಹಿಸಿ ನವಂಬರ್ ತಿಂಗಳ ಅಂತ್ಯಕ್ಕೆ ವರದಿ ನೀಡಲು ಸರ್ಕಾರ ಸೂಚಿಸಿತ್ತು. ಆ ಬಳಿಕ ಕೆಲವರು ಮೂಲ ಪಂಚಾಯಿತಿಗೆ ತೆರಳಿದ್ದರು. ಜನವರಿ ತಿಂಗಳಲ್ಲಿ ಸರ್ಕಾರ ಇನ್ನೊಂದು ಆದೇಶ ನೀಡಿದ್ದರೂ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯಲ್ಲಿ ಕೆಲವು ಪಿಡಿಒಗಳು ಕಾರ್ಯನಿರ್ವಹಿಸುತಿದ್ದಾರೆ ಎಂದು ತಿಳಿದು ಬಂದಿದೆ.
ತಾಲೂಕು ಪಂಚಾಯಿತಿಗೆ ನಿಯೋಜನೆ ಏಕೆ ?
ತಾಲೂಕು ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಸಾರ್ವಜನಿಕ ಕೆಲಸಗಳು ಸಾಕಷ್ಟು ವಿಳಂಬವಾಗುತ್ತಿದೆ. ಅಲ್ಲದೆ ಪಂಚಾಯಿತಿಗಳಲ್ಲಿ ಜನ ಮತ್ತು ಜನಪ್ರತಿನಿಧಿಗಳೊಂದಿಗೆ ಸಮನ್ವಯ ಕಾಪಾಡಿಕೊಳ್ಳದವರನ್ನು ತಾಲೂಕು ಪಂಚಾಯಿತಿಗೆ ನಿಯೋಜನೆ ಮಾಡಲಾಗಿತ್ತು. ಖಾಲಿ ಇರುವ ಪಂಚಾಯಿತಿಗಳಿಗೆ ಅಕ್ಕಪಕ್ಕ ಪಂಚಾಯಿತಿ ಪಿಡಿಒಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗುತ್ತಿದೆ.
ಸಾರ್ವಜನಿಕ ಸೇವೆ ಅಲಭ್ಯ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ವಸತಿ ಯೋಜನೆ, ಬಾಪೂಜಿ ಸೇವಾಕೇಂದ್ರ, 9/11 ಕಂದಾಯ ಸೇವಾ ಮೊದಲಾದ ಕೆಲಸಗಳಲ್ಲಿ ಪಂಚಾಯಿತಿ ಪಿಡಿಒಗಳು, ಕಾರ್ಯದರ್ಶಿ, ಲೆಕ್ಕ ಸಹಾಯಕರು ಹೈರಾಣಾಗಿದ್ದಾರೆ. ಎರಡು ಪಂಚಾಯಿತಿಗಳನ್ನು ಒಬ್ಬನೇ ಪಿಡಿಒ ನಿಭಾಯಿಸಬೇಕಾಗಿದೆ. ಪಿಡಿಒ ಇಲ್ಲದ ಕಡೆ ಕಾರ್ಯದರ್ಶಿ ಪಿಡಿಒ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ಪಂಚಾಯಿತಿ ಅಭಿವೃದ್ಧಿ ಕುಂಠಿತವಾಗುತ್ತಿದೆ.
33 ಮಂದಿಗೆ ನಿಯೋಜನೆ ರದ್ದು: ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒ, ಕಾರ್ಯದರ್ಶಿಗಳನ್ನು ಈ ಹಿಂದೆ ಒಂದು ಪಂಚಾಯಿತಿಯಿಂದ ಇನ್ನೊಂದು ಪಂಚಾಯಿತಿಗೆ ನಿಯೋಜನೆ ಮಾಡಲಾಗುತ್ತಿತ್ತು. ಪ್ರಸಕ್ತ 33 ಪಿಡಿಒ ಮತ್ತು ಕಾರ್ಯದರ್ಶಿಗಳಿಗೆ ನಿಯೋಜನೆ ರದ್ದು ಮಾಡಿ ಮೂಲ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸಲು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಆದೇಶಿಸಿದ್ದಾರೆ. ಆದರೆ ತಾಲೂಕು ಪಂಚಾಯಿತಿಗಳಲ್ಲಿ ಠಿಕಾಣಿ ಹೂಡಿದವರನ್ನು ಮಾತ್ರ ಮೂಲ ಸ್ಥಾನಕ್ಕೆ ವರ್ಗಾವಣೆಗೊಳಿಸದೆ ತಾರತಮ್ಯ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಉಡುಪಿಯಲ್ಲಿ ಒಂಬತ್ತು ಮಂದಿ: ಉಡುಪಿ ತಾಲೂಕು ಪಂಚಾಯಿತಿ ಒಂದರಲ್ಲೇ ಪಿಡಿಒ, ಕಾರ್ಯದರ್ಶಿಗಳು ಒಂಬತ್ತು ಮಂದಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲಾ ಪಂಚಾಯಿತಿ, ಕಾರ್ಕಳ, ಕುಂದಾಪುರ ತಾಲೂಕು ಪಂಚಾಯಿತಿ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ತಾಪಂನಲ್ಲಿ ಕರ್ತವ್ಯ ನಿರ್ವಹಿಸುವುದು ಪಿಡಿಒಗಳಿಗೆ ಅನುಕೂಲ ಎಂಬುದು ಕೆಲವರ ಅನಿಸಿಕೆ. ತಾಲೂಕು ಪಂಚಾಯಿತಿಗೆ ನಿಯೋಜನೆಗೊಂಡರೆ ಆಡಿಟಿಂಗ್ ಸಮಸ್ಯೆ ಇರುವುದಿಲ್ಲ. ಸಾರ್ವಜನಿಕರು, ಜನಪ್ರತಿನಿಧಿಗಳ ಕಿರಿಕಿರಿ ಇರುವುದಿಲ್ಲ. ಯೋಜನೆ ಅನುಷ್ಠಾನ, ಗುರಿ ಸಾಧನೆ ಒತ್ತಡ, ರಜೆ ಸಮಸ್ಯೆ ಇರುವುದಿಲ್ಲ ಎನ್ನುತ್ತಾರೆ ಒಬ್ಬ ಅಧಿಕಾರಿ
ತಾಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆ ಇದ್ದ ಕಾರಣ ಪಿಡಿಒಗಳನ್ನು ನಿಯೋಜಿಸಲಾಗಿತ್ತು. ಜಿಪಂನಲ್ಲಿ ಒಬ್ಬರು ಪಿಡಿಒ, ತಾಪಂಗಳಲ್ಲಿ ಐದಾರು ಪಿಡಿಒಗಳು ನಿಯೋಜನೆಗೊಂಡಿದ್ದಾರೆ. ಪಿಡಿಒಗಳನ್ನು ಮೂಲ ಹುದ್ದೆಯಿಂದ ನಿಯೋಜನೆಗೊಳಿಸಬಾರದು. ನಿಯೋಜನೆಗೊಂಡವರನ್ನು ಮೂಲ ಸ್ಥಾನಕ್ಕೆ ಕಳಿಸಿಕೊಡುವಂತೆ ಸರ್ಕಾರ ಆದೇಶ ನೀಡಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ತಾಪಂಗಳಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವರದಿ ತೆಗೆಸಿಕೊಂಡು ಸರ್ಕಾರಕ್ಕೆ ಸಲ್ಲಿಸುತ್ತೇವೆ.
ಕಿರಣ್ ಪಡ್ನೇಕರ್, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ
