ಧಾರವಾಡ: ಹಿಂದಿ ಭಾಷೆಯಲ್ಲಿ ತೆರೆ ಕಂಡಿರುವ, ಅಜಯ ದೇವಗನ್ ನಟನೆಯ ಮರಾಠಿ ಚರಿತ್ರೆ ಆಧಾರಿತ ‘ತಾನಾಜಿ’ ಸಿನೆಮಾ ಪ್ರದರ್ಶನ ವಿರೋಧಿಸಿ ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ನಗರದ ಸಂಗಮ ಚಿತ್ರ ಮಂದಿರದ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಮಹಾರಾಷ್ಟ್ರದಲ್ಲಿ ಕನ್ನಡ ಚಿತ್ರಗಳಿಗೆ ಮರಾಠಿಗರು ಪದೇ ಪದೆ ಅಡ್ಡಿ ಪಡಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ತೆರೆ ಕಂಡ ಅವನೇ ಶ್ರೀಮನ್ ನಾರಾಯಣ ಚಿತ್ರಕ್ಕೂ ಶಿವಸೇನೆ ಅಡ್ಡಿ ಪಡಿಸುವ ಮೂಲಕ ಕನ್ನಡಿಗರ ಭಾವನೆಗೆ ಧಕ್ಕೆ ಉಂಟುಮಾಡಿದೆ. ಹೀಗಾಗಿ ಮಹಾರಾಷ್ಟ್ರ ನಾಯಕನ ಕಥೆ ಆಧಾರಿತ ಚಿತ್ರವನ್ನು ಪ್ರದರ್ಶಿಸಬಾರದು ಎಂದು ಆಗ್ರಹಿಸಿದರು. ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಗಿರೀಶ ಪೂಜಾರ, ಇತರರು ಇದ್ದರು.