ತಹಸೀಲ್ದಾರ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ರಟ್ಟಿಹಳ್ಳಿ: ತಾಲೂಕಿನಲ್ಲಿ ಎಲ್ಲ ಇಲಾಖೆಗಳ ಕಚೇರಿ ಆರಂಭ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಮಂಗಳವಾರ ತಹಸೀಲ್ದಾರ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು.

ಬೆಳಗ್ಗೆ 10ಕ್ಕೆ ಪಟ್ಟಣದ ಮಹಾಲಕ್ಷ್ಮೀ ದೇವಸ್ಥಾನದಿಂದ ನೂರಾರು ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ ಹೊಸ ಬಸ್ ನಿಲ್ದಾಣ ವೃತ್ತ, ಭಗತ್​ಸಿಂಗ್ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿದರು. ಸರ್ಕಾರದ ವಿರುದ್ಧ ವಿವಿಧ ಘೊಷಣೆ ಕೂಗಿ, ತಹಸೀಲ್ದಾರ್ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ರಟ್ಟಿಹಳ್ಳಿ ತಾಲೂಕಾಧ್ಯಕ್ಷ ಶಂಕ್ರುಗೌಡ ಶಿರಗಂಬಿ ಮಾತನಾಡಿ, ರಟ್ಟಿಹಳ್ಳಿ ತಾಲೂಕು ರಚನೆಯಾಗಿ 18 ತಿಂಗಳಾಗಿದ್ದರೂ ಯಾವುದೇ ಕಚೇರಿ ಆರಂಭವಾಗದ ಕಾರಣ 63 ಗ್ರಾಮಸ್ಥರಿಗೆ ತೊಂದರೆಯಾಗಿದೆ. ಇರುವ ತಹಸೀಲ್ದಾರ್ ಕಚೇರಿಯಲ್ಲೂ ಸಿಬ್ಬಂದಿ ಕೊರತೆ, ಪದೇ ಪದೆ ತಹಸೀಲ್ದಾರ್​ಗಳ ವರ್ಗಾವಣೆಯಿಂದ ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ಲಭಿಸುತ್ತಿಲ್ಲ. ಇದರಿಂದ ಅನಿವಾರ್ಯವಾಗಿ ರಟ್ಟಿಹಳ್ಳಿ, ಹಿರೇಕೆರೂರು ತಾಲೂಕುಗಳಿಗೆ ಅಲೆಯುವಂತಾಗಿದೆ. ಪಟ್ಟಣದಿಂದ ತಹಸೀಲ್ದಾರ್ ಕಚೇರಿ 3 ಕಿಮೀ ದೂರದಲ್ಲಿದ್ದು, ಸಾರಿಗೆ ಇಲಾಖೆಯಿಂದ ಬಸ್ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಸಂಘದ ಹಿರೇಕೆರೂರು ತಾಲೂಕಾಧ್ಯಕ್ಷ ಪ್ರಭುಗೌಡ ಪ್ಯಾಟಿ ಮಾತನಾಡಿ, ರಾಜ್ಯದ ನೂತನ ಸರ್ಕಾರ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ತುಂಗಭದ್ರಾ, ಕುಮದ್ವತಿ ನದಿ ಮತ್ತು ತುಂಗಾ ಮೇಲ್ದಂಡೆ ಕಾಲುವೆಗಳಿಂದ ತಾಲೂಕಿನ ಗ್ರಾಮಗಳ ಕೆರೆಗಳನ್ನು ತುಂಬಿಸಬೇಕು. ಇದರಿಂದ ಬೇಸಿಗೆಯಲ್ಲಿ ಅನುಕೂಲವಾಗುತ್ತದೆ. ತಾಲೂಕಿನಲ್ಲಿ ಯೂರಿಯಾ ಗೊಬ್ಬರ ಹೆಚ್ಚು ಪ್ರಮಾಣದಲ್ಲಿ ಪೂರೈಕೆಯಾಗಬೇಕು. ಬ್ಯಾಂಕ್​ಗಳು, ಫೈನಾನ್ಸ್​ನವರು ರೈತರಿಗೆ ನೀಡಿದ ಸಾಲ ವಸೂಲಿಗೆ ದಬ್ಬಾಳಿಕೆ ನಡೆಸುತ್ತಿರುವುದನ್ನು ಜಿಲ್ಲಾಡಳಿತ ತಡೆಯಬೇಕು. ಹಾಲು ಉತ್ಪಾದಕರಿಗೆ ಸಹಾಯಧನ, ಅತಿವೃಷ್ಟಿಯಿಂದ ಹಾನಿಗೀಡಾದ ರೈತರಿಗೆ ಬೆಳೆ ನಷ್ಟ ಪರಿಹಾರ, ಬೆಳೆ ವಿಮೆ ಕಂತು ಪಾವತಿಗೆ ರೈತರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಅಧಿಕಾರಿಗಳು ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಆ. 19ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.

ಅಧಿಕಾರಿಗಳು ಭೇಟಿ: ತಹಸೀಲ್ದಾರ್ ಆರ್.ಎಚ್. ಭಗವಾನ, ಸಾರಿಗೆ ಘಟಕ ವ್ಯವಸ್ಥಾಪಕ ಪ್ರಶಾಂತ ಪಾನಬುಡೆ, ಕೃಷಿ ಇಲಾಖೆ, ಕೆಎಂಎಫ್, ಬ್ಯಾಂಕ್ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಆನಂತರ ಪ್ರತಿಭಟನೆ ಕೈಬಿಡಲಾಯಿತು.

ರೈತ ಸಂಘಟನೆ ಮುಖಂಡರಾದ ಎಸ್.ವಿ. ಚಪ್ಪರದಹಳ್ಳಿ, ಗಂಗನಗೌಡ ಮುದಿಗೌಡ್ರ, ಪ್ರಭುಗೌಡ ಪ್ಯಾಟಿ, ಬಸನಗೌಡ ಗಂಗಪ್ಪನವರ, ಫೈಯಾಜ್​ಸಾಬ್ ದೊಡ್ಮನಿ, ಮಹೇಂದ್ರಪ್ಪ ತಳವಾರ, ಮಲ್ಲನಗೌಡ ಮಾಳಗಿ, ಮಂಜು ಆರೀಕಟ್ಟಿ, ಶಂಭು ಮುತ್ತಗಿ, ಪ್ರಶಾಂತ ದ್ಯಾವಕ್ಕಳವರ, ರೇಣುಕಪ್ಪ, ರಂಗಪ್ಪ ಮಲೆಬೆನ್ನೂರ, ಶಾಂತನಗೌಡ ಪಾಟೀಲ, ರಾಜಾ ಮುತ್ತಗಿ, ವೀರನಗೌಡ ಬಾಳಂಬೀಡ, ಚನ್ನಬಸಪ್ಪ ಗೌಡರ, ಇತರರಿದ್ದರು.

Leave a Reply

Your email address will not be published. Required fields are marked *