ತಲೆನೋವು ಶಮನಕ್ಕೆ ಆರಾಮದಾಯಕ ಆಸನಗಳು

| ಗೋಪಾಲಕೃಷ್ಣ ದೇಲಂಪಾಡಿ

ಮೈಗ್ರೇನ್ ಹತೋಟಿಗೆ ಇನ್ನೆರಡು ಆಸನಗಳನ್ನು ಕಲಿಯೋಣ.

ಅಧೋಮುಖ ಶ್ವಾನಾಸನ

ವಿಧಾನ: ಮಕರಾಸನದಲ್ಲಿ ವಿರಮಿಸಿ. ಆಮೇಲೆ ಅಂಗೈಗಳನ್ನು ಭುಜದ ಕೆಳಗಡೆ ಎದೆಯ ಪಕ್ಕದಲ್ಲಿ ಇರಿಸಿ. ನಂತರ ಪಾದಗಳ ಮಧ್ಯ ಸ್ವಲ್ಪ ಅಂತರವಿರಲಿ. ನಂತರ ಉಸಿರನ್ನು ಬಿಡುತ್ತಾ ತಲೆಯನ್ನು ನೆಲದಿಂದ ಮೇಲೆ ಎತ್ತುವಾಗ ಕೈಗಳು ನೇರವಾಗಿರಲಿ. ಆಮೇಲೆ ತಲೆಯನ್ನು ಕಾಲುಗಳ ದಿಕ್ಕಿಗೆ ಸರಿಸಿ ನಡು ನೆತ್ತಿಯನ್ನು ನೆಲಕ್ಕೆ ಊರಿ. ಕಾಲುಗಳ ಹಿಮ್ಮಡಿಯನ್ನು ನೆಲಕ್ಕೆ ತಾಗಿಸಿ. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಮ ಉಸಿರಾಟದಲ್ಲಿ ನೆಲೆಸಿ. ಈ ರೀತಿ ಎರಡರಿಂದ ನಾಲ್ಕು ಬಾರಿ ಅಭ್ಯಾಸ ಮಾಡಿ. ವಿರಮಿಸಿ.

ಪ್ರಯೋಜನ: ಈ ಆಸನದಲ್ಲಿ ತಲೆಯು ನೆಲಕ್ಕೆ ಊರಿರುವುದರಿಂದ ಎದೆಯ ಮೇಲೆ ಯಾವ ಒತ್ತಡ ಇಲ್ಲದೆ ಶುದ್ಧ ರಕ್ತವು ಧಾರಾಳವಾಗಿ ಮಿದುಳಿಗೆ ಹರಿದು ಮಿದುಳಿನ ಜೀವಕೋಶಗಳು ಪುನಶ್ಚೇತನಗೊಳ್ಳುತ್ತವೆ. ಮನಸ್ಸಿನ ಆಯಾಸವು ಬೇಗನೆ ನಿವಾರಣೆಯಾಗುತ್ತದೆ. ನರತಂತುಗಳು ಶಾಂತಗೊಳ್ಳುತ್ತವೆ. ಮೈಗ್ರೇನ್ ತಲೆನೋವು ನಿಯಂತ್ರಣವಾಗುತ್ತದೆ. ಅಸ್ತಮಾ, ಅಲರ್ಜಿ, ಸಯಾಟಿಕಾ, ಸೈನಸೈಟಿಸ್ ದೂರ.

ಸೂಚನೆ: ಕಣ್ಣಿನ ರೆಟಿನಾದ ಸಮಸ್ಯೆ, ಹೆಚ್ಚಿನ ರಕ್ತದ ಒತ್ತಡದ ಸಮಸ್ಯೆ, ಭುಜಗಳ, ಕೀಲುಗಳ ಸಮಸ್ಯೆ, ಡಯೇರಿಯಾ ಸಮಸ್ಯೆ ಇರುವವರು ಈ ಆಸನದ ಅಭ್ಯಾಸ ಮಾಡಬಾರದು.

ಮಕರಾಸನ

ಇದೊಂದು ಪೂರ್ಣ ವಿಶ್ರಾಂತಿದಾಯಕ ಭಂಗಿ. ಈ ಆಸನದಿಂದ ಮುಖ್ಯವಾಗಿ ದೇಹ-ಮನಸ್ಸುಗಳಿಗೆ ವಿಶ್ರಾಂತಿಯೂ, ನೆಮ್ಮದಿಯೂ ದೊರೆಯುತ್ತದೆ. ಮನಸ್ಸಿನ ಏಕಾಗ್ರತೆ ಹೆಚ್ಚಿಸಲು ಸುಲಭವಾಗುತ್ತದೆ. ಈ ಆಸನದಿಂದ ಕೆಲಸ ಮಾಡಿ ಆಯಾಸವಾದವರಿಗೆ ಹೊಸ ಹುರುಪು, ಹೊಸ ಚೈತನ್ಯ ಉಂಟಾಗುತ್ತದೆ.

ವಿಧಾನ: ಜಮಖಾನದ ಮೇಲೆ ಕವುಚಿ ಮಲಗಿ. ಕಾಲುಗಳನ್ನು ಎರಡು ಅಡಿಯಷ್ಟು ವಿಸ್ತರಿಸಿ. ಕಾಲ್ಬೆರಳುಗಳು ಹೊರಮುಖವಾಗಿದ್ದು ನೆಲಕ್ಕೆ (ಜಮಖಾನೆಗೆ) ತಾಗಿಸಿ. ಎರಡೂ ಕೈಗಳನ್ನು ಕಟ್ಟಿ ಗಲ್ಲವನ್ನು ಕೈಗಳ ಮೇಲಿರಿಸಿ ಅಥವಾ ಎಡ ಇಲ್ಲವೇ ಬಲಬದಿಯ ತಲೆ, ಕೆನ್ನೆಯನ್ನು ಕೈಗಳ ಮೇಲಿರಿಸಿ. ಈ ಸ್ಥಿತಿಯಲ್ಲಿ ಮೂರರಿಂದ ಐದು ನಿಮಿಷ ಸಮ ಉಸಿರಾಟ ನಡೆಸುತ್ತಿರಿ ಹಾಗೂ ಶರೀರವನ್ನು ಪೂರ್ತಿ ಸಡಿಲಗೊಳಿಸಿ.

ಪ್ರಯೋಜನ: ಈ ಆಸನದಿಂದ ಬಲು ಬೇಗ ವಿಶ್ರಾಂತಿ ದೊರಕಿ ತಲೆನೋವು ನಿಯಂತ್ರಣವಾಗುತ್ತದೆ. ಎಲ್ಲಾ ಬೆನ್ನುಮೂಳೆಯ ಸಂಬಂಧಿತ ಸಮಸ್ಯೆಗಳ ನಿವಾರಣೆಗೆ ಪ್ರಯೋಜನಕಾರಿಯಾಗಿದೆ.

ಸೂಚನೆ: ಗಂಭೀರ ಬೆನ್ನುನೋವು, ಮೊಣಕಾಲು ಗಾಯವನ್ನು ಹೊಂದಿದ್ದರೆ ಈ ಆಸನದ ಅಭ್ಯಾಸ ಮಾಡುವುದು ಬೇಡ. ಕುತ್ತಿಗೆನೋವು ಅಥವಾ ಗಾಯದಿಂದ ಬಳಲುತ್ತಿರುವವರು ಆಸನವನ್ನು ಬಹಳ ಜಾಗರೂಕತೆಯಿಂದ ಅಭ್ಯಾಸ ಮಾಡಬೇಕು. ಮೈಗ್ರೇನ್ ಸಮಸ್ಯೆ ಇದ್ದವರು ದಿವಸಕ್ಕೆ ಮೂರು ಅಥವಾ ನಾಲ್ಕು ಬಾರಿ ವಿಶ್ರಾಂತಿಯ ವಿಧಾನವಾದ ಶವಾಸನ ಮಾಡಿದರೆ ಒಳಿತು.

Leave a Reply

Your email address will not be published. Required fields are marked *